ಅಥಣಿ(ಡಿ.10): ಕೃಷ್ಣಾ ಪ್ರವಾಹದ ನಡುವೆಯೂ ಅನಿರೀಕ್ಷಿತವಾಗಿ ಎದುರಾದ ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಮರು ಆಯ್ಕೆಯಾಗಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್‌ನಿಂದ ವಿಜೇತರಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹಗೊಂಡಿದ್ದ ಮಹೇಶ ಕುಮಟಳ್ಳಿಯನ್ನು ಕ್ಷೇತ್ರದ ಜನರು ಅರ್ಹತೆಯ ಮುದ್ರೆ ಒತ್ತಿ ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದಾರೆ.ಕಾಂಗ್ರೆಸ್‌ ಅಭ್ಯರ್ಥಿ ಗಜಾನನ ಮಂಗಸೂಳಿ ಅವರನ್ನು 39989 ಮತಗಳ ಅಂತರದಿಂದ ಮಹೇಶ ಕುಮಟಳ್ಳಿ ಗೆಲ್ಲುವ ಮೂಲಕ ಅಥಣಿ ಕ್ಷೇತ್ರದಲ್ಲಿ ಮತ್ತೊಮ್ಮೆ ತಮ್ಮ ಅಸ್ತಿತ್ವ ಸಾಧಿಸಿದ್ದಾರೆ.

ಈರುಳ್ಳಿ ಮಾರೋಕೆ ಲೈಸೆನ್ಸ್ ಕಡ್ಡಾಯ, ಬೇಕಾಬಿಟ್ಟಿ ಸ್ಟಾಕ್ ಮಾಡಿದ್ರೆ ಕೇಸ್

ಬಿಜೆಪಿಗೆ ವಲಸೆ ಬಂದವರು, ಸ್ಪೀಕರ್‌ನಿಂದ ಅನರ್ಹಗೊಂಡವರು, ಶಾಕರಾಗಿ ಗೆದ್ದರೂ ಕ್ಷೇತ್ರದ ಜನರಿಗೆ ತಿಳಿಸದೇ ರಾಜೀನಾಮೆ ನೀಡಿದವರು ಎಂಬ ಆರೋಪಗಳನ್ನು ಹೊತ್ತಿದ್ದರು ಮಹೇಶ ಕುಮಟಳ್ಳಿ. ಆದರೂ ಮತದಾರರು ಅವರನ್ನು ಕೈಬಿಡಲಿಲ್ಲ.

ಕುಮಟಳ್ಳಿ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರೂ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೇ ಪಕ್ಷದ ಹುರಿಯಾಳು ಎಂಬಂತೆ ಕ್ಷೇತ್ರದ ಮತದಾರರಲ್ಲಿ ಬಿಂಬಿಸಲಾಗಿತ್ತು. ಇದುವೆ ಕುಮಟಳ್ಳಿ ಗೆಲುವಿಗೆ ಸಿಕ್ಕ ದೊಡ್ಡ ಟರ್ನಿಂಗ್‌ ಪಾಯಿಂಟ್‌ ಎಂದೇ ಹೇಳಬಹುದು. ಚುನಾವಣೆ ಆರಂಭವಾದಾಗಿನಿಂದ ಡಿಸಿಎಂ ಲಕ್ಷ್ಮಣ ಸವದಿಯೇ ಅಭ್ಯರ್ಥಿಗೆ ಟ್ರಂಪ್‌ ಕಾರ್ಡ್‌ ಆಗಿ ಬಳಕೆಯಾದರು. ತಮಗೆ ಟಿಕೆಟ್‌ ನೀಡದಿದ್ದರೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ವಿಧಾನಸೌಧಕ್ಕೆ ಹೆಗಲಮೇಲೆ ಹೊತ್ತುಕೊಂಡು ಬರುತ್ತೇನೆ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮಾತು ಕೊಟ್ಟಿದ್ದರು. ಅದರಂತೆಯೇ ಅವರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ತಮ್ಮ ಸ್ಥಾನವನ್ನೂ ಭದ್ರಗೊಳಿಸಿದ್ದಾರೆ.

ಬಿಜೆಪಿ ಶಾಸಕನಿಗೆ ಡೆಂಘೀ ಜ್ವರ, ಆಸ್ಪತ್ರೆಗೆ ದಾಖಲು

ಪ್ರವಾಹದಂತಹ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸಂತ್ರಸ್ತರ ನೆರವಿಗೆ ಬರಬೇಕಿತ್ತು. ಆದರೆ, ಆಗಿನ ಸಂದರ್ಭದಲ್ಲಿ ಉಂಟಾದ ರಾಜಕೀಯ ಸ್ಥಿತ್ಯಂತರ, ಸರ್ಕಾರದ ಬದಲಾವಣೆ ಮತ್ತು ಸ್ಥಳೀಯ ಶಾಸಕರ ಅನರ್ಹತೆಯಿಂದಾಗಿ ನೆರೆ ಪರಿಹಾರ ಕಾರ್ಯಗಳು ನೆನೆಗುದಿಗೆ ಬಿದ್ದವು. ಇದರಿಂದಾಗಿ ಸಹಜವಾಗಿ ನೆರೆ ಸಂತ್ರಸ್ತರಲ್ಲಿಯೂ ಆಕ್ರೋಶ ಒಡಮೂಡಿತ್ತು. ಮಾತ್ರವಲ್ಲ, ಕಳೆದ 20 ವರ್ಷಗಳ ನಂತರ ಕಾಂಗ್ರೆಸ್‌ ಪಕ್ಷ ಇಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಿತ್ತು. ಆದರೆ, ಕಾಂಗ್ರೆಸ್‌ ಪಕ್ಷದಡಿ ಆಯ್ಕೆಯಾಗಿ ರಮೇಶ ಜಾರಕಿಹೊಳಿ ಅವರನ್ನೇ ಅನುಸರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ ಅನರ್ಹತೆ ಪಟ್ಟಒಲಿದಿದ್ದರಿಂದ ಕ್ಷೇತ್ರದ ಜನರು ಹಾಗೂ ಕೈ ಕಾರ್ಯಕರ್ತರ ಮನಸಿನ ಮೇಲೆ ಇದು ನಕಾರಾತ್ಮಕ ಧೋರಣೆ ಬೀರಿತು.

ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿದ್ದು ಹೇಗೆ..? ಇಲ್ಲಿದೆ ಐದು ಕಾರಣ

ಇದೆ ವೇಳೆ ಸುಪ್ರೀಂ ಕೋರ್ಟ್‌ ಉಪಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿತು. ಈ ವೇಳೆಗೆ ಅಥಣಿ ಕ್ಷೇತ್ರದಿಂದ ತಾವೂ ಪ್ರಬಲ ಆಕಾಂಕ್ಷಿ ಎಂಬುವುದನ್ನು ಡಿಸಿಎಂ ಲಕ್ಷ್ಮಣ ಸವದಿ ವರಿಷ್ಠರಿಗೆ ಸಂದೇಶ ನೀಡುವ ಯತ್ನ ಮಾಡಿದ್ದರು. ಕೊನೆಗೆ ಅನರ್ಹರಿಗೆ ಟಿಕೆಟ್‌ ನೀಡುವುದಾಗಿ ವರಿಷ್ಠರು ಘೋಷಣೆ ಮಾಡಿದರು. ನಂತರ ಸವದಿ ಅವರನ್ನು ಸಿಎಂ ಖುದ್ದಾಗಿ ಕರೆದು ಅವರ ಸಮಸ್ಯೆಯನ್ನು ಬಗೆಹರಿಸಿದ ನಂತರವೇ ಕ್ಷೇತ್ರದಲ್ಲಿ ಮಹೇಶ ಕುಮಟಳ್ಳಿ ಸ್ಪರ್ಧೆ ಹಾದಿ ಸುಗಮಗೊಂಡಿದ್ದಲ್ಲದೆ, ಸವದಿ ಅವರೇ ಅವರ ಗೆಲುವಿನ ಹೊಣೆ ಹೊತ್ತುಕೊಂಡರು. ಹೀಗಾಗಿ ಡಿಸಿಎಂ ಸವದಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಅಭ್ಯರ್ಥಿ ಇಲ್ಲಿ ತಾವೇ ಎಂಬುವುದನ್ನು ಬಿಂಬಿಸುವಲ್ಲಿ ಸಫಲರಾದರು. ಜತೆಗೆ ಗೆದ್ದು ಬಂದರೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಕೂಡ ಆಶ್ವಾಸನೆ ನೀಡಿದ್ದರು. ಇದು ಕೂಡ ಇಲ್ಲಿ ಕೆಲಸ ಮಾಡಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಲಿಂಗಾಯತರ ಮತಗಳು ಬಿಜೆಪಿ ಬುಟ್ಟಿಗೆ ಬೀಳುವಂತೆ ಮಾಡುವಲ್ಲಿ ಸಿಎಂ ಕಾರ್ಯತಂತ್ರ ಸಫಲವಾಗಿದೆ.

ಕೈ ತಂತ್ರ ಫಲಿಸಲಿಲ್ಲ:

ಅಥಣಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಮೊದಲಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಹೇಶ ಕುಮಟಳ್ಳಿ ಅವರು ಕೇವಲ ಒಂದೂವರೆ ವರ್ಷಕ್ಕೆ ರಾಜೀನಾಮೆ ನೀಡಿದ್ದರು. ಇದನ್ನು ಜನರ ಬಳಿ ಬಿಂಬಿಸುವಲ್ಲಿ ಕೈ ವಿಫಲವಾಯಿತು. ತಾಲೂಕಿನಲ್ಲಿ ಸಂಭವಿಸಿದ ನೆರೆಯ ವಿಚಾರವನ್ನು ಪ್ರಸ್ತಾಪಿಸಿ ಲಾಭ ಪಡೆಯುವಲ್ಲಿ ಹಿಂದೇಟು ಹಾಕಿತು. ಕುಮಟಳ್ಳಿ ಅವರಿಗಿಂತ ಡಿಸಿಎಂ ಲಕ್ಷ್ಮಣ ಸವದಿಯವರೇ ಅಖಾಡಕ್ಕೆ ಧುಮುಕ್ಕಿದ್ದರಿಂದಾಗಿ ಅವರನ್ನು ಸಮರ್ಥವಾಗಿ ಎದುರಿಸುವಲ್ಲಿ ಕೈ ನಾಯಕರು ದುಬಾರಿ ಬೆಲೆ ತೆರಬೇಕಾಯಿತು. ಅಭ್ಯರ್ಥಿ ಆಯ್ಕೆ ವೇಳೆಯಲ್ಲಿಯೂ ಗೊಂದಲ ವಾತಾವರಣ ಮೂಡಿತ್ತು. ಹೀಗಾಗಿ ಪಕ್ಷದ ಎರಡು ಮೂರು ಜನರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಕೊನೆಗೆ ಅವರ ಮನವೊಲಿಕೆ ಮಾಡುವಲ್ಲಿ ಮುಖಂಡರು ಯಶಸ್ವಿಯಾದರು. ಆದರೆ, ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದರು ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಮಾಜಿ ಸಚಿವ ಎಂ.ಬಿ.ಪಾಟೀಲ ಅವರು ಅಭ್ಯರ್ಥಿಯನ್ನು ಕಟ್ಟಿಕೊಂಡು ತಿರುಗಾಡಿದರೂ ಮತ ಸೆಳೆಯುವಲ್ಲಿ ವಿಫಲವಾಯಿತು. ಕೈ ಅಭ್ಯರ್ಥಿ ಕ್ಷೇತ್ರಕ್ಕೆ ಹೊಸ ಪರಿಚಯ ಇರುವುದು ಕೂಡ ಮಾರಕವಾಯಿತು ಎಂದೇ ಹೇಳಲಾಗುತ್ತಿದೆ.

ಬಿಜೆಪಿ ಗೆಲವಿಗೆ ಕಾರಣಗಳೇನು?

  • ಅಭ್ಯರ್ಥಿ ಗೆದ್ದರೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಘೋಷಣೆ ಮಾಡಿರುವುದು
  • ಮಹೇಶ ಕುಮಟಳ್ಳಿ ಪರವಾಗಿ ಡಿಸಿಎಂ ಸವದಿ ಸಮರ್ಥವಾಗಿ ಪ್ರಚಾರ ನಡೆಸಿದ್ದು
  • ಆರ್‌ಎಸ್‌ಎಸ್‌ ಕಾರ್ಯಕರ್ತರು ತಳಮಟ್ಟದಲ್ಲಿ ಪ್ರಚಾರ ನಡೆಸಿರುವುದು
  • ಬಂಡಾಯವೆದ್ದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗುರಪ್ಪ ದಾಶ್ಯಾಳರನ್ನು ಸವದಿ ಮನವೊಲಿಕೆ ಮಾಡಿದ್ದು
  • ಕೈನಲ್ಲಿದ್ದ ಬಂಡಾಯ ಮತ್ತು ಅಲ್ಲಿರುವ ನಾಯಕರ ಅನುಪಸ್ಥಿತಿಯ ಲಾಭ ಪಡೆದುಕೊಂಡಿದ್ದು

ಕೈ ಸೋಲಲು ಕಾರಣಗಳೇನು?

  • ಅಥಣಿ ಕ್ಷೇತ್ರದ ಪ್ರಮುಖ ಕಾಂಗ್ರೆಸ್‌ ಮುಖಂಡರ ಗೈರು, ಪ್ರಚಾರಕ್ಕೆ ಬಾರದಿರುವುದು
  • ವಿಜಯಪುರ, ಬಾಗಲಕೋಟೆ ನಾಯಕರಿಂದ ಮಾತ್ರ ಪ್ರಚಾರಕ್ಕೆ ಒತ್ತು, ಇದು ಸ್ಥಳೀಯ ಮುಖಂಡರಿಗೆ ಅತೃಪ್ತಿ ತಂದಿತು
  • ನೆರೆ ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ವಿಫಲತೆಯನ್ನು ಬಿಂಬಿಸುವಲ್ಲಿ ವಿಫಲ
  • ಅಭ್ಯರ್ಥಿ ಆಯ್ಕೆಯನ್ನು ವಿರೋಧಿಸಿ ಅಲ್ಪಸಂಖ್ಯಾತ, ದಲಿತ ನಾಯಕರು, ಸ್ಥಳೀಯ ಮುಖಂಡರಿಂದ ಆಕ್ಷೇಪ. ಕ್ರಿಯಾಶೀಲರಾಗಿ ಕೆಲಸ ಮಾಡದಿರುವುದು
  • ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳ ಅತೃಪ್ತಿ ಶಮನವಾದರೂ ಅವರನ್ನು ಕಡೆಗಣನೆ ಮಾಡಿರುವುದು

-ಬ್ರಹ್ಮಾನಂದ ಹಡಗಲಿ ಅಥಣಿ