ಮಲ್ಲಯ್ಯ ಪೋಲಂಪಲ್ಲಿ 

ಶಹಾಪುರ(ಫೆ.21): ಹಲವಾರು ಧರ್ಮ ಸಂಸ್ಕೃತಿ ಭಾಷೆ, ಸಂಪ್ರದಾಯಗಳ ತವರೂರು. ಈ ಭರತ ಭೂಮಿ ಒಡಲಲ್ಲಿ ಒಂದು ಸಗರನಾಡು. ಶರಣರ, ಸಂತರ ತತ್ವಪದಕಾರರ, ದಾರ್ಶನಿಕರ, ಸೂಫಿಗಳ ಆಶ್ರಯದ ಪುಣ್ಯಸ್ಥಾನ. ಕೃಷ್ಣಾ, ಭೀಮಾ ನದಿ ಮಧ್ಯ ಭಾಗದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮೀಯರು ಭಾವೈಕ್ಯದ ಧರ್ಮ ಸಂಸ್ಕೃತಿ ಹಾಗೂ ಆಚಾರ, ವಿಚಾರಗಳಿಂದ ಅಂಧಕಾರ ತೊಡೆದು ಸುಜ್ಞಾನದ ಬೆಳಕು ಜಗತ್ತಿಗೆ ನೀಡಿದ ಶರಣರ ಸಾಲಿನಲ್ಲಿ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ದೋರನಹಳ್ಳಿ ಆರಾಧ್ಯದೈವ ಸದ್ಗುರು ಮಹಾಂತೇಶ್ವರ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. 

ಶುಕ್ರವಾರ ಶಿವರಾತ್ರಿ ಅಮವಾಸ್ಯೆಯಿಂದ ಸುಮಾರು ತಿಂಗಳು ನಡೆಯುವ ಜಾತ್ರೆ ಅದ್ಧೂರಿಯಾಗಿ ನಡೆಸಲಾಗುತ್ತದೆ. ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕರವಾಗಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಏರ್ಪಡಿಸಲಾಗಿರುತ್ತದೆ. ಶನಿವಾರ ಶಿವರಾತ್ರಿಯ ಜಾಗರಣೆ ಅಂಗವಾಗಿ ಪಲ್ಲಕ್ಕಿ ಸೇವೆ ರಾತ್ರಿ ಇಡೀ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯುತ್ತದೆ. ಶಿವರಾತ್ರಿ ಅಮಾವಾಸ್ಯೆ ದಿನ ಸದ್ಗುರುವಿನ ಭವ್ಯ ರಥೋತ್ಸವ ಸಂಜೆ ಐದು ಮೂವತ್ತಕ್ಕೆ ನಡೆಯುತ್ತದೆ. 

ಸಾಮೂಹಿಕ ವಿವಾಹ: 

ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಉತ್ತಮ ಜೀವನಕ್ಕೆ ದಾರಿಯಾಗಲಿ ಎಂಬ ಸದುದ್ದೇಶದಿಂದ ಕಳೆದ ಹನ್ನೊಂದು ವರ್ಷಗಳಿಂದ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿ ಕೊಂಡು ಬರಲಾಗುತ್ತಿದೆ. ಇಲ್ಲಿವರೆಗೆ ಸುಮಾರು ಹನ್ನೊಂದು ನೂರು ಜೋಡಿಗಳು ದಾಂಪತ್ಯ ಜೀ ವನಕ್ಕೆ ಕಾಲಿಟ್ಟು ಸುಖ, ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವುದಕ್ಕೆ ಇದೇ ಸಾಕ್ಷಿಯಾಗಿದೆ. 

ಮಹಾಂತ ಶ್ರೀ ಪ್ರಶಸ್ತಿ ಪ್ರದಾನ:

ಕಳೆದ 11 ವರ್ಷದಿಂದ ಶ್ರೀಮಠದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ ನೀಡಿ ಗೌರವಿಸುವ ಸಂಪ್ರದಾಯ ರೂಢಿಸಿಕೊಂಡು ಬಂದಿದೆ. ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ, ಹೈ-ಕ ಭಾಗದ ಕಲಂ 371 (ಜೆ) ಹೋರಾಟದ ರೂವಾರಿ, ಮಾಜಿ ಸಚಿವ ವೈಜನಾಥ್ ಪಾಟೀಲ್, ರಾಜಕೀಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ಸಾಲು ಮರದ ತಿಮ್ಮಕ್ಕ ಅವರಿಗೆ ಪುರಸ್ಕಾರ ನೀಡಿ ಗೌರವಿಸಿದೆ. ಈ ವರ್ಷ ‘ಮಹಾಂತ ಶ್ರೀ’ಪ್ರಶಸ್ತಿಗೆ ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಮತ್ತು ಟಿವಿ9 ವಾಹಿನಿ ಔಟ್‌ಪುಟ್ ಚೀಫ್ ನಾಗಭೂಷಣ ಭಾಜನರಾಗಿದ್ದಾರೆ. 

ಬೃಹತ್ ದನಗಳ ಜಾತ್ರೆ: 

ದೋರನಹಳ್ಳಿ ಒಕ್ಕಲುತನಕ್ಕೆ ಪ್ರಧಾನವಾದ ಗ್ರಾಮವಾಗಿದೆ. ಇಲ್ಲಿ ಬೃಹತ್ ಪ್ರಮಾಣದಲ್ಲಿ ದನಗಳ ಜಾತ್ರೆ ನಡೆಯುತ್ತದೆ. ಕೃಷಿಕರಿಗೆ ಎತ್ತುಗಳನ್ನು ಮಾರಲು ಮತ್ತು ಕೊಳ್ಳಲು ಇದು ಸೂಕ್ತ ಸಮಯ ಆಗಿದ್ದರಿಂದ ದನಗಳ ಜಾತ್ರೆ ಯಲ್ಲಿ ಸಗರನಾಡಿನ ನಾನಾ ಕಡೆಗಳಿಂದ ಜನರು ಬಂದು ಸೇರಿರುತ್ತಾರೆ. ಒಕ್ಕಲಿಗನಿಗೆ ತನಗಿಷ್ಟವಾದ ಎತ್ತುಗಳನ್ನು ಖರೀದಿಸಿಲು ತುಂಬಾ ಅನುಕೂಲಕರವಾಗಿದೆ. ದೋರನಹಳ್ಳಿ ಸಂಸ್ಥಾನ 

ಹಿರೇಮಠದ ಹಿನ್ನೆಲೆ: 

ಬೇಡಿದ್ದನ್ನು ನೀಡುವ ಸಿದ್ಧಿಪುರುಷ ಮಹಾಂತ ಶ್ರೀಗಳ ಜಾತ್ರಾ ಮಹೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಕ್ರಿ.ಶ. 1550 ರಿಂದ ಇತಿಹಾಸವಿರುವ ಕುರಿತು ಮಹಾಂತೇಶ ಶ್ರೀಗಳ ಪುರಾಣದ ಮೂಲಕ ತಿಳಿದು ಬರುತ್ತದೆ. ಸುಖ, ಶಾಂತಿದಾಯಕ ಬದುಕಿಗೆ ಧರ್ಮವೇ ಮೂಲವೆಂದು ಅರಿತ ಮೂಲ ಮಹಾಂತೇಶರರು ಧರ್ಮದ ದಿಕ್ಸೂಚಿಯಲ್ಲಿ ಮನುಷ್ಯನ ಬಾಳು ವಿಕಾಸನಗೊಳ್ಳಬೇಕು. ಧರ್ಮ, ಸಂಸ್ಕೃತಿ, ಆದರ್ಶ ಮೌಲ್ಯಗಳ ಸಂರಕ್ಷಣೆಯಲ್ಲಿ ಗುರುವಿನ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಈ ಮಠದ ಪ್ರಥಮ ಪೀಠಾಧಿಪತಿಯಾಗಿ ಮೂಲ ಮಹಾಂತೇಶ ಶ್ರೀ ಅಜ್ಞಾನದಿಂದ ಸುಜ್ಞಾ ನದ ಬದುಕಿನ ಜನರನ್ನು ಕೊಂಡೊಯ್ದು, ದಯ ವೇ ಧರ್ಮದ ಮೂಲವಯ್ಯಾ ಎಂಬ ತತ್ವ ಬೋಧನೆ ಮೂಲಕ ಭಾವೈಕ್ಯತೆ ತತ್ವವನ್ನು ಬೇರು ಮಟ್ಟದಲ್ಲಿ ಸ್ಥಾಪಿಸಿ ಹೋಗಿದ್ದಾರೆ. 

ವೀರ ಮಹಾಂತ ಸ್ವಾಮೀಜಿ:

ಪ್ರಸ್ತುತ ಪೀಠ ಅಲಂಕರಿಸಿದವರು ವೀರ ಮಹಾಂತ ಸ್ವಾಮೀಜಿ ಅವರು ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಚಿಂಚೋಳಿ ಗ್ರಾಮದ ಗಂಗಯ್ಯ ಮತ್ತು ಬಸಮ್ಮ ಉದರದಲ್ಲಿ ನಾಲ್ಕನೇ ಮಗನಾಗಿ ಜನ್ಮತಾ ಳಿದ ಮೃತ್ಯುಂಜಯ ಎಂಬ ನಾಮಾಂಕಿತ. ಮುಂದೆ ಕಾಲೇಜು ಶಿಕ್ಷಣ ಬದಾಮಿಯ ಶಿವಯೋಗಿ ಮಂ ದಿರದಲ್ಲಿ ಸಂಸ್ಕೃತ ವ್ಯಾಸಾಂಗ ಮಾಡಿ ಸ್ನಾತಕೋತ್ತರ ಪದವಿಗಾಗಿ ಕಾಶಿಗೆ ತೆರಳಿ ವಿದ್ಯಾಭ್ಯಾಸ ಮುಗಿಸಿ ಪೂರ್ಣ ಪಾಂಡಿತ್ಯದೊಂದಿಗೆ ಬಂದವರು ಮುಂದೆ 1999 ಸಂಸ್ಥಾನ ಹಿರೇಮಠ ಹನ್ನೊಂದನೇ ಪೀಠಾಧಿಪತಿಯಾಗಿ ನೇಮಕಗೊಂಡರು. ಧಾರ್ಮಿಕ ಕಾರ್ಯಗಳ ಜೊತೆಗ ನಿತ್ಯ ಅನ್ನ ದಾಸೋಹ, ಮಠಕ್ಕೆ ಬಂದವರ ಕಷ್ಟ, ಹಸಿವು ನೀಗಿ ಸುವ ಮಹಾಕಾರ್ಯ ಮಾಡುತ್ತಾ, ಜನರ ಮನ ದಲ್ಲಿ ಅಚ್ಚುಮೆಚ್ಚಿನ ಗುರುಗಳಾಗಿದ್ದಾರೆ. ಸಾಮೂಹಿಕ ವಿವಾಹ ಧರ್ಮಸಭೆ ನಾಡಿನ ಸಾಧಕರಿಗೆ ಮಹಾಂತ ಶ್ರೀ ಪ್ರಶಸ್ತಿ, ದನಗಳ ಜಾತ್ರೆ, ಆರೋಗ್ಯ ಶಿಬಿರ ರಕ್ತದಾನ ಶಿಬಿರ ಉಚಿತ ನೇತ್ರ ಚಿಕಿತ್ಸಾ ಶಿಬಿರ, ತ್ರಿವಿಧ ನಿರಂತರ ದಾಸೋಹ ನಡೆಸಿಕೊಂಡು ಶ್ರೀ ಮಠದ ಕೀರ್ತಿಯನ್ನು ನಾಡಿನ ತುಂಬಾ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಸತ್ತ ಮಗುವಿಗೆ ಜೀವದಾನ

ಬಳ್ಳಾರಿ ಜಿಲ್ಲೆಯ ಬೊಮ್ಮನಹಳ್ಳಿ ಕೃಷಿ ಕುಟುಂಬದ ಮಾಹಾದೇವಿ ಮತ್ತು ಬಸ್ಸಪ್ಪ ದಂಪತಿಗಳು ತಮ್ಮ ಮಗುವನ್ನು ತೋಟದ ಗುಡಿಸಿಲಲ್ಲಿ ಮಲಗಿಸಿ ಕಾಯಕದಲ್ಲಿ ಮಗ್ನರಾಗಿದ್ದಾರೆ. ಗುರು ಮಹಾಂತೇಶ ಅವರು ತೋಟದ ಬಾವಿಗೆ ಬಾಯಾರಿಕೆ ತೀರಿಸಿಕೊಳ್ಳಲು ನೀರಿಗಿಳಿಯುತ್ತಾರೆ. ಪುಟ್ಟ ಮಗು ಹಾಡುತ್ತ ಬಂದು ಬಾವಿಗೆ ಬಿದ್ದು ಅಸುನೀಗುತ್ತದೆ. ದುಃಖಿತರಾದ ದಂಪತಿಗಳು ನಿಮ್ಮಿಂದಲೇ ನನ್ನ ಮಗುವಿನ ಜೀವ ಹೋಗಿದೆ ಎಂದು ಸಾಧಿಸುತ್ತಿರುವುದು ಗುರು ಮಹಾಂತೇಶ ಅವರು ಇದೊಂದು ಸತ್ವಪರೀಕ್ಷೆ ಎಂದು ಭಾವಿಸಿ ದೇವರಲ್ಲಿ ಮೊರೆಯಿಟ್ಟು ಮಗುವಿಗೆ ಮರು ಜನ್ಮ ನೀಡುತ್ತಾರೆ. 

ಮದುವೆಯಲ್ಲಿ ಮಾಂಸದ ಅಡಿಗೆ ನೆಲಸಮವಾಗಿತ್ತು

ಜಾತ್ಯತೀತವಾದ ಶ್ರೀಮಠದಲ್ಲಿ ಕಾಶೀಂಸಾಬ್ ಎಂಬ ಭಕ್ತರು ನಿರಂತರ ಸೇವೆ ಮಾಡಿದ ಕಾರಣ ಅವನಿಗೆ ಮಠ ಎಂಬ ಅಡ್ಡೆ ಹೆಸರು ರೂಢಿಯಾಯಿತು. ಕಾಶೀಂಸಾಬ್ ಮಗ ದಸ್ತಗೀರ್ ಸಾಬ್ ಮದುವೆ ಮಾಡಬೇಕೆಂದರೆ ಯಾರು ಕನ್ಯೆ ಕೊಡಲು ಒಪ್ಪಲಿಲ್ಲ. ಮಠದ ಪೂಜ್ಯಮರಿ ಮಹಾಂತ ಸ್ವಾಮಿಗಳು ಮನೆತನದ ಕೊಡಿಸಲು ಒಪ್ಪಿಸುತ್ತಾರೆ. ಮುಸ್ಲಿಂ ಪದ್ಧತಿಗನುಗುಣವಾಗಿ ಮದುವೆ ನಡೆಯಿತು. ಮದುವೆಯಲ್ಲಿ ಮಾಂಸದ ಅಡಿಗೆ ಮಡಿಕೆಗಳಲ್ಲಿ ತಯಾರಾಗಿತ್ತು. ಇನ್ನೇನು ಎಲ್ಲರಿಗೂ ಅಡಿಗೆ ಬಡಿಸಬೇಕು ಎನ್ನುವುದರಲ್ಲಿ ಮಡಿಕೆಗಳೆಲ್ಲ ಒಡೆದು ಚೂರಾಗಿ ಮುಸ್ಲಿಂ ಬಂಧುಗಳು ದಿಗ್ಭ್ರಾಂತರಾಗುತ್ತಾರೆ. ಇದೆಲ್ಲ ಶ್ರೀಮಠದ ಪೂಜ್ಯರ ಮಹಿಮೆ ಎಂದರಿತು ಹಿಂದು ಸಂಪ್ರದಾಯದಂತೆ ಸಸ್ಯಹಾರ ಭಕ್ಷ ಭೋಜನ ಬಳಸಿ ನಿಖಾ ಪೂರ್ಣಗೊಳಿಸುತ್ತಾರೆ.

*ಪ್ರಥಮ ಪೀಠಾಧಿಪತಿಯಾಗಿ ಮಹಾಂತೇಶ ಶ್ರೀಗಳು 
*ಎರಡನೇ ಪೀಠಾಪತಿಯಾಗಿ ಶಿವಪೂಜೆ ಸ್ವಾಮೀಜಿ 
*ಮೂರನೇ ಪೀಠಾಧಿಪತಿಯಾಗಿ ಅನ್ನದಾನ ಶ್ರೀ 
* ನಾಲ್ಕನೇ ಪೀಠಾಧಿಪತಿಯಾಗಿ ಮಹಾಂತ ಶ್ರೀ
* ಐದನೇ ಪೀಠಾಧಿಪತಿಯಾಗಿ ಮರಿ ಮಹಾಂತ ಶ್ರೀ 
* ಆರನೇ ಪೀಠಾಧಿಪತಿಯಾಗಿ ಶಿವಪೂಜ ಶ್ರೀ 
*ಏಳನೇ ಪೀಠಾಧಿಪತಿಯಾಗಿ ಮಹಾಂತ ಶ್ರೀ 
* ಎಂಟನೇ ಪೀಠಾಧಿಪತಿಯಾಗಿ ಅನ್ನದಾನ ಶ್ರೀ
*ಒಂಬತ್ತನೇ ಪೀಠಾಧಿಪತಿಯಾಗಿ ಶಿವಪೂಜೆ ಶ್ರೀ 
*ಹತ್ತನೇ ಪೀಠಾಧಿಪತಿಯಾಗಿ ಮಹಾಂತ ಮಹಾಸ್ವಾಮೀಜಿ

ಸಗರನಾಡಿನ ಆರಾಧ್ಯ ವೈವ ಮಹಾಂತೇಶ್ವರ ಜಾತ್ರೆ ಬಹು ವಿಜೃಂಭಣೆಯಿಂದ ನಡೆಯುತ್ತದೆ. ಸಾಮೂಹಿಕ ಮದುವೆ ಮಾಡುವುದರಿಂದ ದುಂಡು ವೆಚ್ಚಕ್ಕೆ ಕಡಿವಾಣ ಹಾಕಿ ಬಡ ಜನತೆ ಜೀವನ ಮತ್ತು ಬದುಕಿಗೆ ಆಸರೆಯಾಗುತ್ತದೆ ಎಂದು  ಕಕ್ಕೇರಿ ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ದೋರನಹಳ್ಳಿ ಷಣ್ಮುಖಪ್ಪ ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೋರನಹಳ್ಳಿ ಒಕ್ಕಲುತನ ಪ್ರಧಾನವಾದ ಗ್ರಾಮ. ದೊಡ್ದ ಪ್ರಮಾಣದಲ್ಲಿ ದನಗಳ ಜಾತ್ರೆ ನಡೆಯುತ್ತಿದ್ದು, ಜಾತ್ರೆಯಲ್ಲಿ ಸುತ್ತಲಿನ ಹತ್ತೂರುಗಳಿಂದ ದನಗಳು ಬಂದು ಸೇರುತ್ತವೆ. ಎತ್ತುಗಳನ್ನು ಕೊಡುಕೊಳ್ಳಲು, ಮಾರಾಟ ಮಾಡಲು ಒಕ್ಕಲಿಗನಿಗೆ ಅನುಕೂಲವಾಗಿದೆ ಎಂದು ನಂದಿಕೋಲ ರೈತ ದೊರನಹಳ್ಳಿ ಮಲ್ಲಿನಾಥ ಹೇಳಿದ್ದಾರೆ.

ಸಗರನಾಡಿನ ಶರಣನ ಜಾತ್ರೆ ಯಾವುದೇ ಲೋಪಯಾಗದಂತೆ ಆಚರಿಸುತ್ತಾರೆ. ಈ ಜಾತ್ರೆ ಬೇರೆ ಊರಿನ ಜಾತ್ರೆಗಳಿಗೆ ಸ್ಫೂರ್ತಿ ತುಂಬುವಂತದಾಗಿದೆ. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಸುರಕ್ಷಿತವಾಗಿ ನಡೆಯಲಿದೆ ಎಂದು ದೋರನಹಳಿ  ಗ್ರಾಮ ಪಂಚಾಯತಿ ಅಧ್ಯಕ್ಷ ಮಹಮ್ಮದ್ ಮಸ ಬಾಯಿ ಹೇಳಿದ್ದಾರೆ.