ಹುಬ್ಬಳ್ಳಿ(ಫೆ.29): ಮಹದಾಯಿ ನ್ಯಾಯಾಧಿಕರಣದ ಐತೀರ್ಪಿನಂತೆ 13.42 ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಗುರುವಾರ ರಾತ್ರಿ ಅಧಿಸೂಚನೆ ಹೊರಡಿಸಿದ್ದನ್ನು ಸ್ವಾಗತಿಸಿ ನರಗುಂದ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧೆಡೆ ಶುಕ್ರವಾರ ಹೋರಾಟಗಾರರು ವಿಜಯೋತ್ಸವ ಆಚರಿಸಿದರು.

ಕಳೆದ 1688 ದಿನಗಳಿಂದ ಹೋರಾಟ ನಡೆಯುತ್ತಿರುವ ನರಗುಂದ ಪಟ್ಟಣದಲ್ಲಿ ರೈತ ಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ವೇದಿಕೆಯಲ್ಲಿ ವಿಜಯೋತ್ಸವ ಆಚರಿಸಿದ ಬಳಿಕ ಬನ್ನಿ ಮಹಾಂಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸ್ವಾತಂತ್ರ್ಯ ಹೋರಾಟಗಾರ ಬಾಬಾಸೇಹಬ್‌ರ ಪುತ್ಥಳಿಗೆ ಹಾಗೂ 1980 ರಲ್ಲಿ ರೈತ ಹೋರಾಟದಲ್ಲಿ ಹುತಾತ್ಮರಾದ ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದಾರೆ.

'ಮಹದಾಯಿ ನೀರು ಹಂಚಿಕೆ ಸಂಪೂರ್ಣ ತೃಪ್ತಿ ತಂದಿಲ್ಲ'

ಗದಗ ನಗರದಲ್ಲಿ ಯುವ ಬಿಜೆಪಿ ಘಟಕದಿಂದ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು. ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು. ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ ನೇತೃತ್ವದಲ್ಲಿ ರೈತ ಸಂಘಟನೆಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಮಹದಾಯಿ ಹೋರಾಟದ ಇನ್ನೊಂದು ಕೇಂದ್ರವಾದ ನವಲಗುಂದದಲ್ಲೂ ರೈತರು ವಿಜಯೋತ್ಸವ ಆಚರಿಸಿದರು.

ಬೆಳಗಾವಿ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಮಹದಾಯಿ ಹೋರಾಟಗಾರರು, ಕನ್ನಡಪರ ಸಂಘಟನೆಗಳ ಮುಖಂಡರು, ವಕೀಲರು ಸೇರಿದಂತೆ ಮತ್ತಿತರ ವಿವಿಧ ಸಂಘಟನೆಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ, ಸಂಭ್ರಮಿಸಿದರು.