ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಪ್ರೇಯಸಿಯ ಕೊಂದ ಪ್ರೇಮಿ!
ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನೋರ್ವ ತನ್ನ ಪ್ರಿತಮೆಯನ್ನೇ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಸಕಲೇಶಪುರ (ಜ.29): ಪ್ರೀತಿ ನಿರಾಕರಿಸಿದ ಯುವತಿಯನ್ನು ಯುವಕನೊಬ್ಬ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಹೇಮಂತ್ (25) ಕೊಲೆ ಮಾಡಿದ ಆರೋಪಿಯಾಗಿದ್ದು, ಸಕಲೇಶಪುರ ತಾಲೂಕಿನ ಬಾಳೆಗದ್ದೆ ಸಮೀಪದ ಸಿದ್ದಾಪುರ ಗ್ರಾಮದ ಸುಸ್ಮಿತಾ (21) ಕೊಲೆಯಾದ ಯುವತಿಯಾಗಿದ್ದಾಳೆ. ಪ್ರೀತಿಗೆ ನಿರಾಕರಣೆಯೇ ಕೊಲೆಗೆ ಕಾರಣ ಎನ್ನಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಅದೇ ಗ್ರಾಮದ ಹೇಮಂತ್ ಎಂಬಾತ ಸುಶ್ಮಿತಾಳನ್ನು ಪ್ರೀತಿಸುತ್ತಿದ್ದ. 1 ವರ್ಷದ ಹಿಂದೆ ಮದುವೆಯಾಗಲು ಆಕೆಗೆ ಮನವಿ ಮಾಡಿದ್ದನು. ಇದಕ್ಕೆ ಯುವತಿ ಯಾವುದೇ ಪ್ರತ್ಯುತ್ತರ ನೀಡಿರಲಿಲ್ಲ. ಮತ್ತೆ ಈ ಬಾರಿ ತನ್ನ ಪ್ರೇಮ ನಿವೇದನೆಯನ್ನು ಆಕೆಯೊಂದಿಗೆ ತೋಡಿಕೊಂಡಿದ್ದ. ಆದರೂ ಮದುವೆಗೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ಹೇಮಂತ್ ಈ ಕೃತ್ಯ ಎಸಗಿದ್ದಾನೆ.
ಕೇರಳದ ಮಂತ್ರವಾದಿಗಳಿಂದ ಇಡೀ ಕುಟುಂಬದ ಸರ್ವನಾಶ! ತಂಗಿಯನ್ನು ಕೊಂದ ಅಕ್ಕ! ...
ಮನೆಯಿಂದ ಹೊರಬಂದು ಬೇರೆಡೆಗೆ ತೆರಳುತ್ತಿದ್ದ ಯುವತಿಯನ್ನು ಕಂಡು ಆರೋಪಿ ಹೇಮಂತ್ ಮಾರಕಾಸ್ತ್ರದಿಂದ ಆಕೆಯ ಮೇಲೆ ಮನಸೋಯಿಚ್ಛೆ ಹಲ್ಲೆ ಮಾಡಿದ್ದಾನೆ. ಏಕಾಏಕಿ ದಾಳಿ ನಡೆದ ಹಿನ್ನೆಲೆಯಲ್ಲಿ ಆಕೆ ಸಹಾಯಕ್ಕೆ ಬೇರೆಯವರನ್ನು ಕೂಗಲು ಸಹ ಸಾಧ್ಯವಾಗದೆ ರಕ್ತಸಿಕ್ತವಾಗಿ ಸ್ಥಳದಲ್ಲೇ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ.
ಘಟನೆ ನಡೆದ ಬಳಿಕ ಆರೋಪಿ ಹೇಮಂತ ತಲೆಮರೆಸಿಕೊಂಡಿದ್ದು, ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದರು. ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದು ದೂರಿನನ್ವಯ ತನಿಖೆ ಮುಂದುವರೆಸಿದ್ದಾರೆ.