ಬೆಂಗಳೂರು [ಜು.08] :  ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ ಮೂಲಕ ಪರಿಚಯವಾದ ಯುವಕನೋರ್ವ ತನ್ನ ಪಿ.ಜಿ.ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಕೆ.ಜಿ.ಹಳ್ಳಿ ಠಾಣೆಗೆ ದೂರು ನೀಡಿದ್ದಾಳೆ. ಟಿ.ದಾಸರಹಳ್ಳಿ ನಿವಾಸಿ 23 ವರ್ಷದ ಯುವತಿ ಕೊಟ್ಟ ದೂರಿನ ಮೇರೆಗೆ ಆಂಧ್ರ ಪ್ರದೇಶ ಮೂಲದ ಶಫಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಶಫಿ ಫೇಸ್‌ಬುಕ್ ಮೂಲಕ 2018 ರಲ್ಲಿ ಯುವತಿಗೆ ಪರಿಚಯವಾಗಿದ್ದ. ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದ ಯುವತಿ, ಆರೋಪಿಯನ್ನು ಸಂಪರ್ಕ ಮಾಡಿದ್ದಳು. ಸಹಾಯ ಮಾಡುವ ನೆಪದಲ್ಲಿ ಆರೋಪಿ ತಾನಿದ್ದ ಪಿ.ಜಿ.ಗೆ ಯುವತಿಯನ್ನು ಕರೆದುಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದ.

10 ದಿನಗಳ ಕಾಲ ಯುವತಿ, ಆರೋಪಿಯ ಕೊಠಡಿಯಲ್ಲಿಯೇ ಉಳಿದುಕೊಂಡಿದ್ದಳು. ಸ್ವಲ್ಪ ದಿನದ ಬಳಿಕ ಮನೆಗೆ ತೆರಳಿದ ಯುವತಿ ಆರೋಪಿಗೆ ಕರೆ ಮಾಡಿ, ತಾನು ಗರ್ಭಿಣಿಯಾಗಿದ್ದು, ಶೀಘ್ರ ವಿವಾಹವಾಗುವಂತೆ ಮನವಿ ಮಾಡಿದ್ದಾಳೆ. ಆರೋಪಿ ಏಕಾಏಕಿ ಪಿ.ಜಿ. ಖಾಲಿ ಮಾಡಿಕೊಂಡು ತನ್ನ ಸ್ವಂತ ಊರಾದ ಆಂಧ್ರಪ್ರದೇಶದ ನೆಲ್ಲೂರಿಗೆ ತೆರಳಿದ್ದಾನೆ. 

ಊರಿಗೆ ತೆರಳಿ ಶಫಿ ಪೋಷಕರ ಗಮನಕ್ಕೆ ತಂದರೆ ನನಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.