Asianet Suvarna News Asianet Suvarna News

ದಕ್ಷಿಣ ಕಾಶಿ ಕುರುವತ್ತಿ ಬಸವೇಶ್ವರ ಜಾತ್ರೆ: ಪಾದಯಾತ್ರೆ ಮೂಲಕ ಭಕ್ತರ ಆಗಮನ

ಕೈ ಬೀಸಿ ಕರೆಯುವ ಕಲ್ಯಾಣಿ ಚಾಲುಕ್ಯರ ಕಲಾತ್ಮಕ ಶಿಲ್ಪಕಲೆ| ಜಾತ್ರೆಗೆ ಬರುವ ಭಕ್ತರಿಗೆ ಸಕಲ ಸೌಲಭ್ಯ|  ತ್ರಿಪುರದಹನ ಕ್ಷೇತ್ರವೆಂದು ಕರೆಯಲ್ಪಡುವ ಕುರುವತ್ತಿ|

Kuruvatti Basaveshwara Fair Will Be Held on Today in Huvinahdagali in Ballari District
Author
Bengaluru, First Published Feb 23, 2020, 11:50 AM IST

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಫೆ.23): ಐತಿಹಾಸಿಕ ಮತ್ತು ಪೌರಾಣಿಕವಾಗಿ ಪರಮಸಿದ್ಧ ಕ್ಷೇತ್ರ ಎನಿಸಿದ ಪಶ್ಚಿಮವಾಹಿನಿ, ದಕ್ಷಿಣ ಕಾಶಿಯೆಂದು ಕರೆಯುವ ತುಂಗಭದ್ರಾ ನದಿ ತಟದ ಪವಿತ್ರ, ಪುಣ್ಯಭೂಮಿ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಫೆ. 23ರಂದು(ಭಾನುವಾರ) ಸಂಜೆ ಜರುಗಲಿದೆ.

ಕುರುವತ್ತಿ ಬಸವೇಶ್ವರ ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ಆಸ್ಪತ್ರೆ, ವಿದ್ಯುತ್‌, ರಸ್ತೆ, ಸ್ವಚ್ಛತೆ, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಸಾರಿಗೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಈಗಾಗಲೇ ಕುರುವತ್ತಿಗೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ರಥೋತ್ಸವಕ್ಕೆ ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಹರಿಹರ, ಹುಬ್ಬಳ್ಳಿ, ಧಾರವಾಡ, ಗದಗ, ಬಳ್ಳಾರಿ ಇತರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಇನ್ನು ಕೆಲವಡೆಗಳಲ್ಲಿ ಪಾದಯಾತ್ರೆಯ ಮೂಲಕ ಭಕ್ತರು ಆಗಮಿಸುತ್ತಿದ್ದಾರೆ.

ಹಿನ್ನೆಲೆ:

ಕುರುವತ್ತಿಯನ್ನು ತ್ರಿಪುರದಹನ ಕ್ಷೇತ್ರವೆಂದು ಕರೆಯುತ್ತಾರೆ. ಪಶ್ಚಿಮಾಭಿ ಮುಖವಾಗಿ ಹರಿಯುವ ತುಂಗಭದ್ರಾ ನದಿ ತೀರದ ಕುರುವತ್ತಿಯಲ್ಲಿ ನಂದಿ ಜತೆ ಶಿವನು ಮಲ್ಲಿಕಾರ್ಜುನಾಗಿ ಲಿಂಗರೂಪದಲ್ಲಿ ನದಿತೀರದ ಗುಂಡಿ (ವರ್ತಿ)ಯಲ್ಲಿ ಉದ್ಭವವಾಗಿ ಕುರುವತ್ತಿಯ ಆಸುಪಾಸಿನಲ್ಲೇ ಇರುವ ತ್ರಿಪುರಗಳಾದ ಚೌಡಯ್ಯದಾನಪುರ, ನರಸಿಂಹಪುರ, ಚಂದಾಪುರಗಳಲ್ಲಿ ವಾಸಿಸುತ್ತಿದ್ದ, ರಾಕ್ಷರನ್ನು ನಾಶ ಮಾಡಿದನೆಂದು ಪುರಾಣದಿಂದ ತಿಳಿದು ಬರುತ್ತದೆ. ಕಾರಣ ವರ್ತಿ, ವರತಿ, ಕುರುಹುವೆತ್ತಿ ತೋರಿದ್ದರಿಂದ ಕುರುವರ್ತಿ, ನಂತರ ಕುರವತ್ತಿ, ಕುರುವತ್ತಿ ಅಲ್ಲದೆ ಕಲೆ, ಸಂಸ್ಕೃತಿ ಹಿರಿಮೆಯನ್ನು ಪಡೆದಿದ್ದರಿಂದ ಹಿರೇಕುರುವತ್ತಿ ಎಂಬ ಹೆಸರಿದೆ ಎಂದು ಶಾಸನಗಳಲ್ಲಿ ಕುರುವರ್ತಿ ಎಂದು ಉಲ್ಲೇಖಿಸಿದ್ದಾರೆ.

ಸುಮಾರು 11ನೇ ಶತಮಾನದ ಕಲ್ಯಾಣ ಚಾಲುಕ್ಯರ ವಂಶದ ದೊರೆ 1ನೇ ಸೋಮೇಶ್ವರ (ಅಹವಮಲ್ಲ) (ಕ್ರಿ.ಶ. 1044-1068)ನ ಆಳ್ವಿಕೆಯಲ್ಲಿ ನಿರ್ಮಿಸಿದ ಮಲ್ಲಿಕಾರ್ಜುನ ದೇವಾಲಯ ಚಾಲುಕ್ಯರ ಕಲಾ ಪ್ರೌಢಿಮೆಗೆ ಸುಪ್ರಸಿದ್ಧ, ಶಿಲ್ಪ ವೈವಿಧ್ಯದ ಪ್ರತೀಕವಾಗಿದೆ. ಈ ದೇವಾಲಯವನ್ನು ಚಾಲುಕ್ಯರ ಕಾಲದಲ್ಲಿ ಕಟ್ಟಿದ್ದರು, ಹೊಯ್ಸಳರ ಕಾಲದಲ್ಲಿ ಅಭಿವೃದ್ಧಿಪಡಿಸಿದರೆಂದು ತಿಳಿದು ಬರುತ್ತದೆ.

ಹೂವಿನಹಡಗಲಿ: ಫೆ. 18ರಿಂದ ಪುಣ್ಯ ಕ್ಷೇತ್ರ ಕುರುವತ್ತಿ ಬಸವೇಶ್ವರ ಜಾತ್ರೆ

ಆ ಕಾಲದಲ್ಲಿ ಪ್ರಸಿದ್ಧ ಶಿಲ್ಪಿ ಚಾವುಂಡೋಜ್‌ನ ನೈಪುಣ್ಯತೆಯಿಂದ ಚಾಲುಕ್ಯ- ಹೊಯ್ಸಳರ ಶೈಲಿಯಂತೆ ನಿರ್ಮಾಣವಾಗಿದೆ. ಅಲ್ಲದೆ ದೇವಾಲಯದ ಸ್ಥಾನಾಚಾರ್ಯರೆಂದು ಕಾಶ್ಮೀರದ ದೇವ ಪಂಡಿತ ಲಕುಳೇಶ ಪಂಡಿತರನ್ನು ನೇಮಿಸಿದ್ದರು ಎನ್ನಲಾಗಿದೆ.

ಕುರುವತ್ತಿಯು ಮುಖ್ಯ ಅಗ್ರಹಾರಗಳಲ್ಲಿ ಒಂದು. ಶಾಸನಕವಿ ಶ್ರೀಕಂಠಶೂರಿ (ಕ್ರಿ.ಶ. 1099)ಯು ಈ ಗ್ರಾಮದಲ್ಲಿ ವಾಸಿಸಿದ್ದನೆಂದು ಇತಿಹಾಸ ಹೇಳುತ್ತದೆ. ಮಲ್ಲಿಕಾರ್ಜುನ ದೇವಾಲಯವು ತೆರೆದ ಮುಖ ಮಂಟಪದೊಂದಿಗೆ ಪೂರ್ವ, ದಕ್ಷಿಣೋತ್ತರ ಕಡೆ ಪ್ರವೇಶ ದ್ವಾರಗಳನ್ನು ಹೊಂದಿದೆ. ದೇವಾಲಯದ ಒಳಗಡೆ ಸೂರ್ಯನಾರಾಯಣ, ವಿN್ನೕಶ್ವರ, ವೀರಭದ್ರ, ಸಪ್ತಮಾತೃಕೆಯರು ಮತ್ತು 1ನೇ ಸೋಮೇಶ್ವರ, ಆತನ ನಾಲ್ವರು ರಾಣಿಯರನ್ನು ಪ್ರತಿಬಿಂಬಿಸುವ ಸುಮಾರು 7 ಅಡಿ ಶಿಲ್ಪ ಮನಮೋಹಕವಾಗಿವೆ. ದೇವಾಲಯದ ಮೂರು ದ್ವಾರಗಳ ಮೇಲೆ ಸೂಕ್ಷ್ಮ ಕೆತ್ತನೆಯಿಂದ ಕೂಡಿದ ಸುರಳಿ ಬಳ್ಳಿಗಳು, ಸಮೂಹ ನೃತ್ಯಗಾರರು, ನಾಗದೇವತೆಗಳು, ವಾದ್ಯಗಾರರ ಕಿರುಮೂರ್ತಿಗಳು ಉಬ್ಬುಗೆತ್ತನೆಯಿಂದ ರಚನೆಗೊಂಡಿವೆ.

ಸುಖನಾಸಿ-ನವರಂಗದ ಮಧ್ಯೆ ಇರುವ ಅತ್ಯದ್ಭುತವಾದ ಕಲಾತ್ಮಕ ಮಕರ ತೋರಣದ ಮಧ್ಯೆ ತ್ರಿಮೂರ್ತಿಗಳು ಇರುವ ಶಿಲ್ಪವು ವೈಭವ ವೈವಿಧ್ಯಮಯ ಕಲೆಯ ನೆಲೆಯನ್ನು ಹೊಂದಿದೆ. ಕೈಯಲ್ಲಿ ವಾದ್ಯ ಹಿಡಿದು ವಿಶಿಷ್ಟಭಂಗಿಯಲ್ಲಿ ನೃತ್ಯಮಾಡುತ್ತಿರುವ ಮದನಿಕೆಯರು ನೋಡುಗರನ್ನು ಮುಗ್ಧರನ್ನಾಗಿಸುತ್ತವೆ. ಗರ್ಭಗುಡಿಯಲ್ಲಿ ಮಲ್ಲಿಕಾರ್ಜುನ ನಾಮಾಂಕಿತ ಶಿವಲಿಂಗ ಸುಮಾರು ನಾಲ್ಕು ಅಡಿ ಇದ್ದು, ದೇವಾಲಯದ ಗೋಪುರ ಇಟ್ಟಿಗೆ ಹಾಗೂ ಗಾರೆಯಿಂದ ನಿರ್ಮಾಣವಾಗಿದೆ. ಒಟ್ಟಿನಲ್ಲಿ ದೇವಾಲಯದ ಶಿಲ್ಪವು ನಯನ ಮನೋಹರವಾಗಿದೆ. ಮಲ್ಲಿಕಾರ್ಜುನ ದೇವಾಲಯಕ್ಕೆ ಅಭಿಮುಖವಾಗಿರುವುದೇ ಬಸವಣ್ಣನ ದೇವಾಲಯ.

ಮಲ್ಲಿಕಾರ್ಜುನ ದೇವಾಲಯಕ್ಕೆ ಅಭಿಮುಖವಾಗಿರುವ ನಂದಿ ವಿಗ್ರಹವು ಸುಮಾರು ಆರು ಅಡಿ ಏಕಶಲಾಮೂರ್ತಿಯಾಗಿದೆ. ಇದು ಭಕ್ತರ ಬಾಯಲ್ಲಿ ಕುರುವತ್ತಿ ಬಸವಣ್ಣನೆಂದು ಪ್ರಸಿದ್ಧವಾಗಿದೆ. ಇಲ್ಲಿ ಮಲ್ಲಿಕಾರ್ಜುನನಗಿಂತ ಬಸವಣ್ಣನೇ (ನಂದಿ) ಹೆಚ್ಚು ಜನಪ್ರಿಯ.

ಇಲ್ಲಿಯ ಬಸವಣ್ಣನಿಗೆ ಪ್ರತಿ ಸೋಮವಾರ ಅಮಾವಾಸ್ಯೆ ದಿನಗಳಂದು ವಿಶೇಷ ಪೂಜೆ ಸಲ್ಲಿಸುವುದರಿಂದ ದೇಹದ ಮೇಲಾಗುವ ಕುರ(ಕುರು) ಹುಣ್ಣುಗಳು ವಾಸಿಯಾಗುತ್ತವೆ ಎಂಬ ನಂಬಿಕೆಯೂ ಇದೆ. ಕಾರಣ ಕುರಗಳನ್ನು ವತ್ತಿ ಹಿಡಿದು ವಾಸಿ ಮಾಡುವುದರಿಂದ ಈ ಪ್ರದೇಶಕ್ಕೆ ಕುರುವತ್ತಿ ಎಂಬ ಹೆಸರು ಬಂತೆಂದಲೂ ಇಲ್ಲಿಯ ಹಿರಿಯರು ಹೇಳುತ್ತಾರೆ.

Follow Us:
Download App:
  • android
  • ios