Asianet Suvarna News Asianet Suvarna News

ಕೊರೋನಾ ಭೀತಿ: ಸಾರಿಗೆ ನೌಕರರ ಜೀವಕ್ಕಿಲ್ವಾ ಬೆಲೆ?

ಸಾರಿಗೆ ನೌಕರರ ಕೊರೋನಾ ಗೋಳು| ನಿತ್ಯ ಜನರೊಟ್ಟಿಗೆ ಚಾಲಕರು ಮತ್ತು ನಿರ್ವಾಹಕರ ಕೆಲಸ| ಸಾರಿಗೆ ನೌಕರರಿಗೆ ಸಿಗದ ಮಾಸ್ಕ್‌, ಹ್ಯಾಂಡ್‌ ಗ್ಲೌಸ್‌|

KSRTC Did Not Provide Mask to Staff due to Coronavirus in Belagavi
Author
Bengaluru, First Published Mar 15, 2020, 9:44 AM IST

ಬೆಳಗಾವಿ(ಮಾ.15): ಕೊರೋನಾ ವೈರಸ್‌ ತನ್ನ ಕದಂಭಬಾಹುಗಳನ್ನು ವಿಸ್ತರಿಸುತ್ತಿದ್ದಂತೆ ಜನತೆ ಹೆಚ್ಚು ಎಚ್ಚೆತ್ತುಕೊಳ್ಳಲು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಾರ್ವಜನಿಕ ಅಗತ್ಯ ಸೌಲಭ್ಯಗಳ ಇಲಾಖೆಗಳನ್ನು ಹೊರತುಪಡಿಸಿ ಒಂದು ವಾರ ರಜೆ ಘೋಷಣೆ ಮಾಡುವ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿದೆ. 

ಸಾರ್ವಜನಿಕ ಅಗತ್ಯ ವಲಯಗಳಾದ ವೈದ್ಯಕೀಯ, ಸಾರಿಗೆ, ಆಹಾರ, ಹೋಟೆಲ್‌ಗಳು, ದೇವಸ್ಥಾನಗಳನ್ನು ಮುಕ್ತವಾಗಿಡಲು ಸರ್ಕಾರ ನಿರ್ಧರಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 24 ಗಂಟೆಗಳ ಕಾಲ ಸೇವೆ ಸಲ್ಲಿಸುವಂತೆ ಸಾರಿಗೆ ಇಲಾಖೆಯೂ ನಿರ್ವಹಿಸಬೇಕಿದೆ. ಆದರೆ, ಕೊರೋನಾ ವೈರಸ್‌ ಬಾರದಂತೆ ವೈದ್ಯಕೀಯ ಇಲಾಖೆಯ ಸಿಬ್ಬಂದಿಗೆ ನೀಡಿದಂತಹ ಸುರಕ್ಷಾ ವಸ್ತುಗಳ ಪೈಕಿ ಮಾಸ್ಕ್‌ ಮತ್ತು ಹ್ಯಾಂಡ್‌ಸೈನಿಟೈಸರ್‌ಗಳನ್ನು ಸಾರಿಗೆ ಇಲಾಖೆಯ ಸಿಬ್ಬಂದಿಗೆ ಸರ್ಕಾರ ನೀಡಿಲ್ಲ ಎಂಬ ದೂರು ಈಗ ಎಲ್ಲೆಡೆ ಕೇಳಿಬಂದಿದೆ. ಹೀಗಾಗಿ ಮಾಸ್ಕ್‌ಗಳು ಇಲ್ಲದೆ ಸಾರಿಗೆ ಇಲಾಖೆಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ.

ಕೊರೋನಾ ಕಾಟ: ಸರ್ಕಾರಿ ಬಸ್‌ನಲ್ಲಿ ಫ್ರಿ ಮಾಸ್ಕ್‌!

ಸಾರ್ವಜನಿಕ ವಲಯದ ಮಹತ್ತರ ಕ್ಷೇತ್ರವಾಗಿರುವ ಸಾರಿಗೆ ಇಲಾಖೆಯಲ್ಲಿ ನಿತ್ಯ ಜನರೊಟ್ಟಿಗೆ ಬೆರೆಯಬೇಕಾದವರು ಚಾಲಕರು ಮತ್ತು ನಿರ್ವಾಹಕರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಕೊರೋನಾ ತಡೆ ಕುರಿತು ಕೈಗೊಂಡಿರುವ ಜಾಗೃತಿಯಲ್ಲಿ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಇಟ್ಟುಕೊಳ್ಳುವ ಚಾಲಕರು ಮತ್ತು ನಿರ್ವಾಹಕರಿಗೆ ಏಕೆ ಮಾಸ್ಕ್‌ಗಳನ್ನು ಪೂರೈಕೆ ಮಾಡಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಆದೇಶ ಹೊರಡಿಸಿದ ಸಾರಿಗೆ ಇಲಾಖೆ:

ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಅಡಿ ಬರುವ ವಾಯವ್ಯ, ಈಶಾನ್ಯ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ ಎಲ್ಲ ಇಲಾಖೆಯ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ, ಕೊರೋನಾದಿಂದ ಯಾವ ರೀತಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮಾಹಿತಿಯುಳ್ಳ ಆದೇಶವನ್ನು ಮಾ.14, 2020ರಂದು ಹೊರಡಿಸಿದೆ. ಅದರಂತೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ವಾಹಕರು ಮತ್ತು ಚಾಲಕರಿಗೆ ಮಾಸ್ಕ್‌ ವಿತರಿಸಬೇಕು ಮತ್ತು ಅವರು ಅವುಗಳನ್ನು ಕಡ್ಡಾಯವಾಗಿ ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

ಮಾತ್ರವಲ್ಲ, ಪ್ರತಿಷ್ಠಿತ ಬಸ್‌ಗಳಾದ ಸ್ಲೀಪರ್‌ ಕೋಚ್‌, ಎಸಿ ವೋಲ್ವೊ, ರಾಜಹಂಸಗಳಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಕಡ್ಡಾಯವಾಗಿ ಇಡಬೇಕು. ಜತೆಗೆ ಇಂತಹ ಬಸ್‌ಗಳನ್ನು ಕಡ್ಡಾಯವಾಗಿ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿ ಸ್ವಚ್ಛವಾಗಿಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಜತೆಗೆ ಪ್ರತಿಯೊಂದು ಘಟಕದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಇಡಬೇಕು ಮತ್ತು ಅದರ ಬಳಕೆಯನ್ನು ಕಡ್ಡಾಯ ಮಾಡಿ ಸೂಚನೆ ನೀಡಿದೆ.

ಮಾಸ್ಕ್‌ಗಳನ್ನು ಪೂರೈಕೆ ಮಾಡುವವರು ಯಾರು?:

ನಿತ್ಯ ಸಂಚಾರದಲ್ಲಿಯೇ ಇರುವ ಚಾಲಕರು ಮತ್ತು ನಿರ್ವಾಹಕರಿಗೆ ಮಾಸ್ಕ್‌ಗಳನ್ನು ಪೂರೈಕೆ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಆದರೆ, ಅವರಿಗೆ ಯಾರು ಪೂರೈಕೆ ಮಾಡಬೇಕು ಎಂಬ ಪ್ರಶ್ನೆ ಕಾಡುತ್ತಿದೆ. ಈ ಕುರಿತು ನಿರ್ವಾಹಕರೊಬ್ಬರನ್ನು ವಿಚಾರಿಸಿದರೆ, ನಮಗೆ ಮನೆಯಿಂದ ಹೊರಗೆ ಬರುವುದಕ್ಕೆ ಭಯವಾಗುತ್ತಿದೆ. ನಿತ್ಯ ಸಾವಿರಾರು ಜನರೊಂದಿಗೆ ಪ್ರಯಾಣ ಮಾಡಬೇಕಾದವರು ನಾವು. ಆದರೆ, ಅವರಲ್ಲಿ ಒಬ್ಬರಿಗಾದರೂ ಕೊರೋನಾ ವೈರಸ್‌ ತಾಗಿದ್ದರೆ ಅದು ನಮಗೂ ಬಂದುಬಿಡುತ್ತದೆ. ಅದಕ್ಕೆ ಮಾಸ್ಕ್‌, ಹ್ಯಾಂಡ್‌ ಗ್ಲೌಸ್‌ಗಳನ್ನು ಹಾಕಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ. ಆದರೆ, ಅವುಗಳನ್ನು ನಾವೇ ಖರ್ಚು ಮಾಡಿ ಖರೀದಿಸಬೇಕಾದ ಅನಿವಾರ್ಯತೆ ಇದೆ ಎಂಬ ಗೋಳು ಹೇಳುತ್ತಿದ್ದಾರೆ.

80 ಸಾವಿರ ನೌಕರರ ಪಾಡು ಇದೆ:

ರಾಜ್ಯ ಸಾರಿಗೆ ವಿಭಾಗಗಳಾದ ವಾಯವ್ಯ ಸಾರಿಗೆ ವಿಭಾಗದಲ್ಲಿ 18000, ಈಶಾನ್ಯ ವಿಭಾಗದಲ್ಲಿ 12000 ಮತ್ತು ಕರ್ನಾಟಕರ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 20000 ಮತ್ತು ಬಿಎಂಟಿಸಿಯಲ್ಲಿ 30 ಸಾವಿರಕ್ಕೂ ಅಧಿಕ ಚಾಲಕರು ಮತ್ತು ನಿರ್ವಾಹಕರು ನಿತ್ಯ ಕಾರ್ಯನಿರ್ವಹಿಸುತ್ತಿರುತ್ತಾರೆ. ಆದರೆ, ಅವರಿಗೆ ಕೊರೋನಾದಿಂದ ಹೇಗೆ ಸುರಕ್ಷತೆ ಪಡೆದುಕೊಳ್ಳಬೇಕು ಎಂಬ ಚಿಂತೆ ಕಾಡುತ್ತಿದೆ.

ಭಯ ಏಕೆ?:

ನಿರ್ವಾಹಕರು ಟಿಕೆಟ್‌ ನೀಡುವ ಮತ್ತು ಹಣ ಪಡೆದು ಚಿಲ್ಲರೆ ವಾಪಸ್‌ ನೀಡುವ ಸಂದರ್ಭದಲ್ಲಿ ಪ್ರಯಾಣಿಕರನ್ನು ಮುಟ್ಟಲೇಬೇಕಾಗುತ್ತದೆ. ಜತೆಗೆ ಹಣ ಕೊಡುವ ಪ್ರಯಾಣಿಕರಲ್ಲಿ ಯಾರಿಗಾದರೂ ಈ ಸೋಂಕು ಇದ್ದಲ್ಲಿ ಅದು ಹಣದ ಮೇಲಿಟ್ಟಬೆರಳಿನ ಮೂಲಕ ನಿರ್ವಾಹಕರಿಗೂ ತಗಲುತ್ತದೆ ಎಂಬ ಭಯ ಅವರನ್ನು ಕಾಡುತ್ತಿದೆ. ಆಗ ಈ ನಿರ್ವಾಹಕ ಮತ್ತೊಬ್ಬ ಪ್ರಯಾಣಿಕನಿಗೆ ಟಿಕೆಟ್‌ ನೀಡಲೇಬೇಕು. ಆಗ ಅದು ಆ ಪ್ರಯಾಣಿಕನಿಗೂ ತಾಗುತ್ತದೆ.

ಟಿಕೆಟ್-ಟಿಕೆಟ್ ಎನ್ನುತ್ತಲೇ ಉಚಿತ ಮಾಸ್ಕ್ ವಿತರಿಸಿದ KSRTC ಕಂಡಕ್ಟರ್

ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಪ್ರತಿಯೊಂದು ಬಸ್‌ಗಳಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಕಡ್ಡಾಯವಾಗಿಡಬೇಕು. ಜತೆಗೆ ನಿರ್ವಾಹಕರು ಮತ್ತು ಚಾಲಕರಿಗೆ ಮಾಸ್ಕ್‌ಗಳ ಜತೆಗೆ ಹ್ಯಾಂಡ್‌ಗ್ಲೌಸ್‌ಗಳನ್ನು ಕಡ್ಡಾಯವಾಗಿ ನೀಡಬೇಕು ಎಂಬ ಆಗ್ರಹ ಸಾರಿಗೆ ಸಿಬ್ಬಂದಿಯಿಂದ ಈಗ ವ್ಯಕ್ತವಾಗಿದೆ.

ಮಾಸ್ಕ್‌ಗಳನ್ನು ಪೂರೈಕೆ ಮಾಡುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿಕೊಳ್ಳುತ್ತೇವೆ. ಜತೆಗೆ ಈ ಕುರಿತು ನಾವು ನಮ್ಮ ಸಿಬ್ಬಂದಿಗಾಗಿ ತುರ್ತು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಕೊರೋನಾ ತಡೆ ಕುರಿತು ಸಿಬ್ಬಂದಿಗೆ ಜಾಗೃತಿ ಮೂಡಿಸಿದ್ದು, ಬಸ್‌ಗಳನ್ನು ಸ್ಯಾನಿಟೈಸರ್‌ ಹಾಕಿ ಸ್ವಚ್ಛ ಮಾಡುತ್ತಿದ್ದೇವೆ ಎಂದು ಬೆಳಗಾವಿ ಕೆಎಸ್‌ಆರ್‌ಟಿಸಿ ಡಿಸಿ ಮಹಾದೇವಪ್ಪ ಮುಂಜಿ ಹೇಳಿದ್ದಾರೆ.
 

Follow Us:
Download App:
  • android
  • ios