ಬೀದರ್‌(ಅ.07): ಯುಪಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ದೇಶವೇ ತಲೆ ತಗ್ಗಿಸುವಂಥದ್ದು. ಯುವ​ತಿಯ ಶವವನ್ನೂ ನೀಡದೇ ಯುಪಿ ಸರ್ಕಾರ ಎರಡನೇ ಬಾರಿ ಅತ್ಯಾಚಾರ ನಡೆಸಿದಂತಿದೆ. ಯುಪಿ ಸಿಎಂ ‘ಯೋಗಿ’ ಅಲ್ಲ ಭೋಗಿ, ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅವರು ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತ​ನಾಡಿ, ಅತ್ಯಾಚಾರ, ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯ ಬದಲಿಗೆ ಯೋಗಿಯ ಬಿಜೆಪಿ ಸರ್ಕಾರ ಅವರಿಗೆ ರಕ್ಷಣೆ ಕೊಡುವಂಥ ಕೆಟ್ಟಕೆಲಸ ಮಾಡಿ ಜನರಿಗೆ ದ್ರೋಹ ಬಗೆದಿರುವದು ಜಗಜ್ಜಾಹೀರಾಗಿದೆ. ದೂರು ಕೊಟ್ಟು 15 ದಿನಗಳಾದರೂ ಎಫ್‌ಐಆರ್‌ ಆಗೋದಿಲ್ಲ, ಅತ್ಯಾಚಾರ ಆಗಿಯೇ ಇಲ್ಲ ಎಂಬುವದನ್ನು ಸಾರುವ ಪ್ರಯತ್ನ ಮಾಡುತ್ತಿರುವದು ಅತ್ಯಂತ ಹೀನ ಕಾರ್ಯ. ಅತ್ಯಾಚಾರಕ್ಕೊಳಗಾದ ಯುವತಿಯ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೇ ಸುಟ್ಟು ಹಾಕಿರುವುದು ಸರ್ಕಾರದಿಂದ ಎರಡನೇ ಬಾರಿ ಯುವತಿ ಮೇಲಿನ ಅತ್ಯಾಚಾರ ಎಂದೆನ್ನಬಹುದು ಎಂದು ಆರೋಪಿಸಿದರು.

'ಬಿಜೆಪಿ ಸರ್ಕಾರ ಉರುಳಿಸಲು ಭಿನ್ನಮತವೇ ಸಾಕು, ವಿಪಕ್ಷ ಬೇಕಿಲ್ಲ'

ರಾಹು​ಲ್‌​ ಗಾಂಧಿ ಮೇಲೆ ದೌರ್ಜ​ನ್ಯ:

ಉತ್ತರ ಪ್ರದೇಶದಲ್ಲಿ ಸರ್ವಾಧಿಕಾರಿ ಧೋರಣೆ, ಜಂಗಲ್‌ ರಾಜ್‌ ನಡೆಯುತ್ತಿದ್ದು ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ತಡೆಯಲಾಗುತ್ತದೆ. ಪೊಲೀಸರಿಂದ ಇವರನ್ನು ನೂಕಾಡಿ ಕೆಳಗೆ ಬೀಳಿಸುವಂಥ ದೌರ್ಜನ್ಯ ನಡೆದಿದೆ. ಸಂತ್ರಸ್ಥಳ ಕುಟುಂಬಸ್ಥರನ್ನು ಯಾರೂ ಭೇಟಿಯಾಗದಂತೆ ನಿರ್ಬಂಧ ಹೇರಲಾಗುತ್ತದೆ. ಇಂಥ ದುಷ್ಟಕೆಟ್ಟ ಸರ್ಕಾರ ಹಿಂದೆಂದೂ ನೋಡಿಲ್ಲ ಎಂದರು.
ಕಳೆದ 6 ವರ್ಷಗಳಲ್ಲಿ ಅನೇಕ ಕೃತ್ಯಗಳನ್ನು ಬಿಜೆಪಿಯ ಕೇಂದ್ರ ಸರ್ಕಾರ ಮಾಡಿದ್ದು ಭಾವನಾತ್ಮಕ ವಿಷಯಗಳನ್ನು ಜನರಲ್ಲಿ ತುಂಬಿ ಜಾತಿ ಮತಗಳ ಆಧಾರದ ಮೇಲೆ ಹೊಡೆದಾಡಿಸುವ ತಂತ್ರಗಾರಿಕೆಯಾಗಿ​ದೆ. ಸ​ದ್ಯ ಮುಗ್ಧ ಜನರ ಶವಗಳ ಮೇಲೆ ಆಡಳಿತ ನಡೆಸುತ್ತಿರುವಂತಿದೆ. ನಾವು ನ್ಯಾಯ ಸಿಗೋವರೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಈಶ್ವರ ಖಂಡ್ರೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ಸಂಸದ ನರಸಿಂಗರಾವ್‌ ಸೂರ್ಯವಂಶಿ, ಮಾಜಿ ಎಂಎಲ್‌ಸಿ ಪುಂಡಲಿಕರಾವ್‌, ಪಕ್ಷದ ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ, ಪ್ರಮುಖರಾದ ಇರ್ಷಾದ ಪೈಲ್ವಾನ್‌, ಪ್ರದೀಪ ಕುಶನೂರ್‌ ಸಂತೋಷಕುಮಾರ ಬಿಜೆ ಪಾಟೀಲ್‌ ಮತ್ತಿತರರು ಇದ್ದರು.