Asianet Suvarna News Asianet Suvarna News

ಸಿದ್ದು, ಎಚ್‌ಡಿಕೆ ಆರಿಸಿದ್ದ 7 ಲಕ್ಷ ಮಂದಿಗೆ ಮನೆ ಇಲ್ಲ!

 ವಸತಿ ಫಲಾನುಭವಿಗಳ ಆದಾಯ ಮಿತಿ 3 ಲಕ್ಷಕ್ಕೆ ಏರಿಕೆ| ಉಡುಪಿಯಲ್ಲಿ ರಾಜ್ಯ ವಸತಿ ಸಚಿವ ಸೋಮಣ್ಣ ಘೋಷಣೆ| ಬಹುಮಹಡಿ ಆದರಿ ಮನೆಗಳಿಗೆ ಶಂಕುಸ್ಥಾಪನೆ

Karnataka set to hike housing unit cost post budget says Minister V Somanna
Author
Bangalore, First Published Jan 9, 2020, 8:56 AM IST

ಉಡುಪಿ[ಜ.09]: ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಬಡವರಿಗೆ ನೀಡಲಾಗುವ ವಸತಿ ಪಡೆಯಲು ಇದ್ದ ವಾರ್ಷಿಕ ಆದಾಯ ಮಿತಿಯನ್ನು 75 ಸಾವಿರದಿಂದ 3 ಲಕ್ಷ ರು.ಗಳಿಗೇರಿಸುವುದಾಗಿ ರಾಜ್ಯ ವಸತಿ ಸಚಿವ ವಿ.ಸೋಮಣ್ಣ ಘೋಷಿಸಿದ್ದಾರೆ.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ನಗರದ ವಸತಿರಹಿತರಿಗಾಗಿ ನಿರ್ಮಿಸಲಾಗುವ ಬಹುಮಹಡಿ ಮಾದರಿಯ 460 ಮನೆಗಳಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಹಿಂದಿನ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸರ್ಕಾರಗಳ ಕಾಲದಲ್ಲಿ ರಾಜ್ಯದಲ್ಲಿ ಮಂಜೂರು ಮಾಡಲಾದ 14 ಲಕ್ಷ ಮನೆಗಳಲ್ಲಿ ಈಗಾಗಲೇ 7 ಲಕ್ಷ ಅನರ್ಹ ಫಲಾನುಭವಿಗಳನ್ನು ಕಿತ್ತುಹಾಕಲಾಗಿದೆ, ಇನ್ನೂ 3 ಲಕ್ಷ ಅನರ್ಹರನ್ನು ಗುರುತಿಸಲಾಗುತ್ತಿದೆ, ಉಳಿದ 4 ಲಕ್ಷ ಮನೆಗಳನ್ನು ಅರ್ಹ ನಿರ್ವಸತಿಗರಿಗೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಪ್ರಕಟಿಸಿದರು.

ಕೆಲವು ಜಿಲ್ಲೆಗಳಲ್ಲಿ ಗ್ರಾ.ಪಂ. ಅಧ್ಯಕ್ಷರು ವಸತಿ ಫಲಾನುಭವಿಗಳನ್ನು ಗುರುತಿಸುವಾಗ ಪಕ್ಷಪಾತ ಮಾಡಿದ್ದಾರೆ. ಆದ್ದರಿಂದ ಇನ್ನು ಮುಂದಿನ ಗ್ರಾ.ಪಂ. ಅಧ್ಯಕ್ಷರು ಗುರುತಿಸಿದ ಫಲಾನುಭವಿಗಳ ಪಟ್ಟಿಯನ್ನು ಶಾಸಕರು, ಅಧಿಕಾರಿಗಳು ಪರಶೀಲಿಸಲಿದ್ದಾರೆ ಎಂದು ವಸತಿ ಸಚಿವರು ಹೇಳಿದರು.

ಹಿಂದಿನ ಸರ್ಕಾರದವರು 80 ಸಾವಿರ ಮನೆಗಳನ್ನು ಘೋಷಿಸಿ ವಿತರಿಸದೇ ಬಿಟ್ಟು ಹೋದರು, ಅದನ್ನು ಪೂರ್ಣಗೊಳಿಸುವ ಪುಣ್ಯ ತನಗೆ ಒದಗಿದೆ ಎಂದ ಸಚಿವರು ಉಡುಪಿ ಜಿಲ್ಲೆಯ 17 ಕೊಳಚೆಗೇರಿಗಳನ್ನು ನಿರ್ಮೂಲನೆ ಮಾಡಲು ಅಗತ್ಯವಿರುವ ಮನೆಗಳನ್ನು ಮತ್ತು ಅನುದಾನ ನೀಡುವುದಾಗಿ ಹೇಳಿದರು.

ಪ್ರತಿ ಮನೆಗೆ ರು.1.50 ಲಕ್ಷ ಸಹಾಯಧನ:

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಯಿ ಮಾತನಾಡಿ, 2022ರಲ್ಲಿ ದೇಶದ ಪ್ರತಿಯೊಬ್ಬರು ತಲೆ ಮೇಲೆ ಸೂರು ಹೊಂದಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಪ್ರತಿಮನೆಗೆ 1.50 ಲಕ್ಷ ರು. ನೀಡ್ತಿದ್ದಾರೆ, ಅದಕ್ಕೆ ರಾಜ್ಯ ಸರ್ಕಾರ 1.50 ಲಕ್ಷ ರು. ಮತ್ತು ಸ್ಥಳಿಯಾಡಳಿತ ಸಂಸ್ಥೆಗಳು ದೇಣಿಗೆ ನೀಡಿ ಉಡುಪಿಯಲ್ಲಿ ಪ್ರಧಾನಿ ಅವರ ಕನಸು ನನಸು ಆಗುತ್ತಿದೆ ಎಂದು ಅಭಿನಂದಿಸಿದರು

ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಪಿ.ಆರ್‌.ಶಿವಪ್ರಸಾದ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಉಡುಪಿ ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್‌, ಬ್ಯಾಂಕ್‌ ಆಫ್‌ ಬರೋಡದ ಉಡುಪಿ ವ್ಯವಸ್ಥಾಪಕ ರವೀಂದ್ರ ರೈ, ಸ್ಥಳೀಯ ನಗರಸಭಾ ಸದಸ್ಯೆ ವಿಜಯಲಕ್ಷ್ಮಿ ನಾಯಕ್‌, ನಗರಸಭಾ ಆಯುಕ್ತ ಆನಂದ ಕಲ್ಲೋಳಿಕರ್‌ ಇದ್ದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊಳಗೇರಿ ಅಭಿವೃದ್ಧಿ ಮಂಡಳಿಯ ತಾಂತ್ರಿಕ ಅಧಿಕಾರಿ ಬಾಲರಾಜ್‌ ಸ್ವಾಗತಿಸಿದರು.

ಗೃಹಸಚಿವ ಸೋಮಣ್ಣ !

ಉಸ್ತುವಾರಿ ಸಚಿವ ಬೊಮ್ಮಯಿ ಅವರು ತಮ್ಮ ಭಾಷಣದಲ್ಲಿ ವಸತಿ ಸಚಿವ ಸೊಮಣ್ಣ ಅವರನ್ನು ಗೃಹ ಸಚಿವ ಅಂತ ಕರೆದರು. ವೇದಿಕೆಯಲ್ಲಿದ್ದ ಸೋಮಣ್ಣ ಮತ್ತು ಇತರರು ಅಚ್ಚರಿಗೊಳಗಾದರು, ತನ್ನ ಬಾಯ್ತಪ್ಪಿನ ಅರಿವಾದ ಬೊಮ್ಮಯಿ ನಗುತ್ತಾ ಇರ್ಲಿ ಬಿಡ್ರಿ ಎಂದರು, ಗೃಹ ಅಂದರೆ ವಸತಿ ಅಂತರ್ಥ, ಎರಡೂ ಒಂದೆಯಾ ಎಂದು ಮಾತು ತೇಲಿಸಿದರು.

Follow Us:
Download App:
  • android
  • ios