ರಾಜ್ಯದ ಮೀನುಗಾರರಿಗೆ ನಿಲ್ಲದ ಸಂಕಷ್ಟ, ಬೇರೆ ರಾಜ್ಯದವರಿಗೆ ಗುತ್ತಿಗೆಗೆ ಚಿಂತನೆ!
ಹಿಪ್ಪರಗಿ ಜಲಾಶಯದಿಂದ ಹಿಡಿದು ಆಲಮಟ್ಟಿ ಹಿನ್ನೀರಿನಲ್ಲಿ ಬರುವ ಮೀನುಗಾರಿಕೆಯನ್ನ ರಾಜ್ಯದ ಮೀನುಗಾರಿಕೆ ಸಂಸ್ಥೆಗಳಿಗೆ ನೀಡಲು ಒಕ್ಕೊರಲಿನ ಆಗ್ರಹ. ಕೃಷ್ಣಾ ನದಿ ವ್ಯಾಪ್ತಿಯ 48,787 ಹೆಕ್ಟೇರ್ ನೀರಾವರಿ ಪ್ರದೇಶದ,140 ಕಿಮೀ ಉದ್ದಳತೆಯಲ್ಲಿ ಮೀನುಗಾರಿಕೆಗೆ ಖಾಸಗೀಕರಣ ಮಾಡದಂತೆ ಆಗ್ರಹ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಆ.11): ರಾಜ್ಯದಲ್ಲಿ ಆಗಾಗ ಹೊರರಾಜ್ಯದವರೊಂದಿಗೆ ನೀರಿಗಾಗಿ, ಗಡಿಗಾಗಿ ತಂಟೆ ತಕರಾರುಗಳು ಇರೋದನ್ನ ನೋಡಿದಿವಿ, ಆದರೆ ಇದೀಗ ಮೀನುಗಾರಿಕೆ ಕ್ಷೇತ್ರಕ್ಕೂ ಸಹ ಹೊರರಾಜ್ಯದವರ ಎಫೆಕ್ಟ್ ತಟ್ಟಿದ್ದು, ಇದರಿಂದ ರಾಜ್ಯದ ಮೀನುಗಾರರು ಆಕ್ರೋಶಗೊಳ್ಳುವಂತಾಗಿದೆ. ರಾಜ್ಯದಲ್ಲಿ ಕೃಷ್ಣಾ ನದಿ ಪಾತ್ರದಲ್ಲಿ ನಡೆಯುವ ಮೀನುಗಾರಿಕೆಯನ್ನ ಹೊರ ರಾಜ್ಯದವರಿಗೆ ನೀಡುವ ಚಿಂತನೆ ಸರ್ಕಾರದ ಮಟ್ಟದಲ್ಲಿದ್ದು, ಇದೀಗ ರಾಜ್ಯದ ಮೀನುಗಾರರ ಆಕ್ರೋಶಕ್ಕೆ ತುತ್ತಾಗಿದೆ, ಈ ಮಧ್ಯೆ ಮೀನುಗಾರಿಕೆಗೆ ರಾಜ್ಯದ ಮೀನುಗಾರಿಕೆ ಸಹಕಾರ ಸಂಘ ಸಂಸ್ಥೆಗಳ ಮೂಲಕ ಅವಕಾಶ ನೀಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡೋದಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಒಂದೆಡೆ ನಿತ್ಯ ಬೇರೆ ಉದ್ಯೋಗವಿಲ್ಲದೆ ಮೀನುಗಾರಿಕೆಯೊಂದನ್ನೇ ಆಶ್ರಯಿಸಿ ಬದುಕು ಸಾಗಿಸುತ್ತಿರೋ ಕುಟುಂಬಗಳು, ಮತ್ತೊಂದೆಡೆ ಕೃಷ್ಣಾ ನದಿ ಪಾತ್ರದಲ್ಲಿ ಮೀನುಗಾರಿಕೆಯನ್ನ ಬೇರೆ ರಾಜ್ಯದ ಮೀನುಗಾರರಿಗೆ ನೀಡಲು ಚಿಂತನೆ ನಡೆಸಿರೋ ಸರ್ಕಾರ, ಹೀಗಾಗಿ ಸರ್ಕಾರದ ವಿರುದ್ದ ಆಕ್ರೋಶಗೊಂಡ ಮೀನುಗಾರರು, ಇವುಗಳ ಮಧ್ಯೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿರೋ ಮೀನುಗಾರಿಕೆ ಸಂಘಗಳ ಪ್ರತಿನಿಧಿಗಳು, ಅಂದಹಾಗೆ ಇಂತಹವೊಂದು ಪರಿಸ್ಥಿತಿ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ.
ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುತ್ತಿರೋ ಕೃಷ್ಣಾ ನದಿಯಲ್ಲಿ ನಡೆಸುವ ಮೀನುಗಾರಿಕೆ ಇದೀಗ ಸ್ವಜಿಲ್ಲೆಯ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಯಾಕಂದ್ರೆ ಸರ್ಕಾರ ಆಂದ್ರಪ್ರದೇಶ ಸೇರಿದಂತೆ ಬೇರೆ ರಾಜ್ಯಗಳ ಮೂಲದ ವ್ಯಕ್ತಿಗಳಿಗೆ ಮೀನುಗಾರಿಕೆ ಗುತ್ತಿಗೆ ನೀಡಲು ಚಿಂತನೆ ನಡೆಸಿದೆ ಎಂಬ ಸುದ್ದಿ ಕೇಳುತ್ತಲೇ ಎಚ್ಚೆತ್ತುಕೊಂಡಿರೋ ರಾಜ್ಯದ ಬಾಗಲಕೋಟೆ ಜಿಲ್ಲೆಯ ಮೀನುಗಾರರು ಸೇರಿ ಯಾವುದೇ ಕಾರಣಕ್ಕೂ ಹೊರರಾಜ್ಯದವರಿಗೆ ಗುತ್ತಿಗೆ ನೀಡೋದನ್ನ ಬಂದ್ ಮಾಡಬೇಕೆಂದು ಆಗ್ರಹಿಸಿ, ಆಕ್ರೋಶ ಹೊರಹಾಕಿದ್ದಾರೆ.
ಹೊರರಾಜ್ಯಕ್ಕೆ ಮೀನುಗಾರಿಕೆ ಗುತ್ತಿಗೆಯಿಂದ ರಾಜ್ಯದ 40 ಸಾವಿರ ಮೀನುಗಾರಿಕೆ ಕುಟುಂಬಗಳು ಅತಂತ್ರ:
ಬಾಗಲಕೋಟೆ ಜಿಲ್ಲೆಯಲ್ಲಿ ಬರೋಬ್ಬರಿ 40 ಸಾವಿರಕ್ಕೂ ಅಧಿಕ ಜನರ ಕುಟುಂಬಗಳು ಮೀನುಗಾರಿಕೆಯನ್ನ ಅವಲಂಬಿಸಿ ಬದುಕು ಸಾಗಿಸುತ್ತಿದ್ದು, ಇವರಿಗೆ ಬೇರೆ ಕಸುಬು ಗೊತ್ತಿಲ್ಲ, ದಿನಬೆಳಗಾದರೆ ಸಾಕು ನದಿಯಲ್ಲಿ ಮೀನು ಹಿಡಿದು ಮಾರಾಟ ಮಾಡಿ ಬಂದ ಹಣದಿಂದ ಮನೆ ಸಾಗಿಸೋದು ಇವರ ಅನಿವಾರ್ಯತೆ. ಆದರೆ ಇದೀಗ ಸರ್ಕಾರದ ಚಿಂತನೆ ಈ ಕುಟುಂಬಗಳನ್ನ ಅತಂತ್ರಕ್ಕೆ ಈಡು ಮಾಡಿದೆ. ಇನ್ನು ಒಂದೊಮ್ಮೆ ಸರ್ಕಾರ ನೆರೆಯ ಆಂದ್ರ ಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯದವರಿಗೆ ಮೀನುಗಾರಿಕೆ ಗುತ್ತಿಗೆ ನೀಡಿದ್ದೇ ಆದಲ್ಲಿ ಉಗ್ರ ಹೋರಾಟ ನಡೆಸೋದಾಗಿ ಜಮಖಂಡಿ ರಾಜೀವ್ ಗಾಂಧಿ ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ನಜೀರ್ ಕಂಗನೊಳ್ಳಿ ಎಚ್ಚರಿಸಿದ್ದಾರೆ.
Uttara Kannada: ಚಂಡಮಾರುತದಿಂದ ಮೀನುಗಾರಿಕೆ ಮತ್ತೆ ಸ್ಥಗಿತ!
ಕೃಷ್ಣಾ ನದಿ ಜಲಾನಯನದ 48,787 ಹೆಕ್ಟೇರ್ ನೀರಾವರಿ ಪ್ರದೇಶದ,140 ಕಿಮೀ ಉದ್ದಳತೆಯಲ್ಲಿ ಮೀನುಗಾರಿಕೆ:
ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಹಿಪ್ಪರಗಿ ಜಲಾಶಯದಿಂದ ಹಿಡಿದು ಆಲಮಟ್ಟಿವರೆಗೆ ಬರೋಬ್ಬರಿ 48,787 ಹೆಕ್ಟೇರ್ ನೀರಾವರಿ ಪ್ರದೇಶದ,140 ಕಿಮೀ ಉದ್ದಳತೆಯಲ್ಲಿ ಮೀನುಗಾರಿಕೆ ನಡೆಯಲಿದ್ದು, ಇದರಲ್ಲಿ ಬಾಗಲಕೋಟೆ ಜೊತೆಗೆ ವಿಜಯಪುರ ಜಿಲ್ಲೆಯ ಮೀನುಗಾರರ ಬದುಕು ಸಹ ಒಳಗೊಂಡಿದ್ದು, ಒಂದೊಮ್ಮೆ ಮೀನುಗಾರಿಕೆ ಗುತ್ತಿಗೆಯನ್ನ ನೆರೆಯ ಆಂದ್ರಪ್ರದೇಶ ಇಲ್ಲವೆ ಬೇರೆ ರಾಜ್ಯಗಳ ಒಬ್ಬ ವ್ಯಕ್ತಿಗೆ ನೀಡಿದ್ದಲ್ಲಿ ಅದು ಖಾಸಗೀಕರಣ ಸೇರಿದಂತೆ ರಾಜ್ಯದ ಮೀನುಗಾರರಿಗೆ ಅನ್ಯಾಯ ಮಾಡಿದಂತಾಗುತ್ತೇ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಹೊರರಾಜ್ಯದವರಿಗೆ ಗುತ್ತಿಗೆ ನೀಡದೇ ರಾಜ್ಯದ ನಮ್ಮ ನಮ್ಮ ಜಿಲ್ಲೆಯ ಮೀನುಗಾರಿಕೆ ಸಹಕಾರಿ ಸಂಘಗಳಿಗೆ ಅವಕಾಶ ನೀಡಿ, ರಾಜ್ಯಕ್ಕೆ ಕಟ್ಟಬೇಕಾದ ಎಲ್ಲ ತೆರಿಗೆಯನ್ನ ನಮ್ಮ ಸಂಘಗಳಿಂದಲೆ ಭರ್ತಿ ಮಾಡಿಸಿಕೊಂಡು ನಮ್ಮ ರಾಜ್ಯದವರಿಗೆ ಮೀನುಗಾರಿಕೆಗೆ ಅವಕಾಶ ನೀಡಬೇಕು ಇಲ್ಲವಾದಲ್ಲಿ ಹೊರರಾಜ್ಯದವರಿಗೆ ಗುತ್ತಿಗೆ ನೀಡಿದಲ್ಲಿ ಉಗ್ರ ಹೋರಾಟ ಮಾಡೋದಾಗಿ ಮೀನುಗಾರ ರಮೇಶ ಮೋರೆ ಹೇಳಿದ್ದಾರೆ.
Udupi; ಸಮುದ್ರದಲ್ಲಿ ರಾಶಿ ರಾಶಿ ಹೊಳೆ ಮೀನುಗಳು, ರಾತ್ರಿ ಹಗಲೆನ್ನದೆ ಕಾಯೋ ಜನ
ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮೀನುಗಾರರ ಮನವಿ:
ಸರ್ಕಾರ ಹೊರ ರಾಜ್ಯದವರಿಗೆ ಮೀನುಗಾರಿಕೆ ಗುತ್ತಿಗೆ ನೀಡುವ ವಿಚಾರ ಗೊತ್ತಾಗುತ್ತಲೇ ನೂರಾರು ಮೀನುಗಾರರು ಬಾಗಲಕೋಟೆಯ ನವನಗರದಲ್ಲಿರುವ ಮೀನುಗಾರಿಕೆ ಇಲಾಖೆಗೆ ಆಗಮಿಸಿದ್ದರು, ಅಲ್ಲದೆ ಎಲ್ಲ ಮೀನುಗಾರಿಕೆ ಸಹಕಾರ ಸಂಘಗಳ ಪ್ರತಿನಿಧಿಗಳು, ಮೀನುಗಾರರು ಸೇರಿ ಯಾವುದೇ ಕಾರಣಕ್ಕೂ ರಾಜ್ಯದ ಮೀನುಗಾರರನ್ನ ಬಿಟ್ಟು ಹೊರ ರಾಜ್ಯದವರಿಗೆ ಮೀನುಗಾರಿಕೆ ಗುತ್ತಿಗೆ ನೀಡಬಾರದು, ಒಂದೊಮ್ಮೆ ಒಬ್ಬನೇ ವ್ಯಕ್ತಿಗೆ ನೀಡುವುದರಿಂದ ಅದು ಖಾಸಗೀಕರಣವಾಗದಂತಾಗುತ್ತೇ ಹೀಗಾಗಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಅನ್ಯ ರಾಜ್ಯದವರಿಗೆ ಮೀನುಗಾರಿಕೆಗೆ ಗುತ್ತಿಗೆ ನೀಡಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದ ಬೆನ್ನಲ್ಲೆ ರಾಜ್ಯದ ಬಾಗಲಕೋಟೆ ಜಿಲ್ಲೆಯ ಮೀನುಗಾರರು ಆಕ್ರೋಶದೊಂದಿಗೆ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದು, ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತೇ ಅಂತ ಕಾದು ನೋಡಬೇಕಿದೆ.