ಮಹದಾಯಿಗೆ 1000 ಕೋಟಿ​-ಕಿಮ್ಸ್‌ನಲ್ಲಿ ಐವಿಎಫ್‌ ಬೊಮ್ಮಾಯಿ ಬಜೆಟ್‌ನಲ್ಲಿ ಬಂಪರ್‌ ಇಲ್ಲದಿದ್ದರೂ ಕೊಂಚ ಸಮಾಧಾನ ಮಹದಾಯಿಗೆ ಹಣ ಮೀಸಲಿಡುವುದೇ ಆಗಿದೆ, ಕೆಲಸ ಶುರು ಮಾಡಿ: ಹೋರಾಟಗಾರರು ರೈಲ್ವೆ ಯೋಜನೆಗಳಿಗೆ ತನ್ನ ಪಾಲಿನ ಅನುದಾನ ಮೀಸಲು ಹೆದ್ದಾರಿಗಳ ನಿರ್ಮಾಣಕ್ಕೆ ಅನುಮೋದನೆಗೆ ಮೊಹರು

ಶಿವಾನಂದ ಗೊಂಬಿ

ಹುಬ್ಬಳ್ಳಿ (ಫೆ.17) : ಮಹದಾಯಿಗೆ ಮತ್ತೆ .1000 ಕೋಟಿ, ಕಿಮ್ಸ್‌ನಲ್ಲಿ ಸರ್ಕಾರಿ ಐವಿಎಫ್‌ ಕ್ಲಿನಿಕ್‌..! ಇವು ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧಾರವಾಡ ಜಿಲ್ಲೆಗೆ ಘೋಷಿಸಿರುವ ಹೊಸ ಯೋಜನೆಗಳು. ಇದರೊಂದಿಗೆ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನೆರವು ನೀಡುವುದಾಗಿ ವಾಗ್ದಾನ ಮಾಡಲಾಗಿದೆ. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನವನ್ನು ಈ ಸಾಲಿನಲ್ಲಿ ಮೀಸಲಿಟ್ಟಿದೆ. ಆದರೆ ಪ್ರಮುಖ ಬೇಡಿಕೆಯಾಗಿದ್ದ ಕೈಗಾರಿಕಾ ಹೊಸ ವಸಾಹತು ಪ್ರದೇಶ ಸೇರಿದಂತೆ ಕೈಗಾರಿಕೋದ್ಯಮಕ್ಕೆ ಧಾರವಾಡ ಜಿಲ್ಲೆಗೆ ಈ ಸಲ ಏನೂ ಸಿಗದೇ ಇರುವುದು, ಮುಖ್ಯಮಂತ್ರಿಯ ತವರೂರಾದ ಹುಬ್ಬಳ್ಳಿ-ಧಾರವಾಡಕ್ಕೆ ವಿಶೇಷ ಅನುದಾನ ಬಿಡುಗಡೆಗೊಳಿಸುವ ಭರವಸೆ ಇಟ್ಟುಕೊಂಡಿದ್ದ ಜನರ ನಿರೀಕ್ಷೆ ಹುಸಿಯಾಗಿದೆ.

ಚಿತ್ರದುರ್ಗ: ಮರೀಚಿಕೆಯಾದ ಮೆಡಿಕಲ್‌ ಕಾಲೇಜು ಆರಂಭ

ಮಹದಾಯಿ ಬಂಪರ್‌:

ಮಹದಾಯಿ(Mahadayi project) ನೀರನ್ನು ಮಲಪ್ರಭೆಗೆ ಜೋಡಿಸುವ ಕಳಸಾ-ಬಂಡೂರಿ(Kalasa bandoori project) ತಿರುವು ಯೋಜನೆಗೆ ಕೇಂದ್ರ ಸರ್ಕಾರದಿಂದ ಈಗಾಗಲೇ ಡಿಪಿಆರ್‌ಗೆ ಅನುಮೋದನೆ ಪಡೆಯಲಾಗಿದೆ. ಈ ಬಜೆಟ್‌ನಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು . 1000 ಕೋಟಿ ಮೀಸಲಿಟ್ಟಿದೆ. ಈ ಹಿಂದೆ ಕೂಡ ಈ ಯೋಜನೆಗಾಗಿ ಸರ್ಕಾರ ಹಣ ಮೀಸಲಿಟ್ಟಿತ್ತು. ಇದೀಗ ಮತ್ತೆ ಸಾವಿರ ಕೋಟಿ ಮೀಸಲಿಟ್ಟಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ಆದರೆ ತೀರ್ಪು ಬಂದು 4 ವರ್ಷವಾಗಿದ್ದು ಅಧಿಸೂಚನೆಯಾಗಿ ಇದೀಗ ಡಿಪಿಆರ್‌ ಕೂಡ ಅನುಮೋದನೆಗೊಂಡಿದೆ. ಆದರೆ ಕೆಲಸ ಮಾತ್ರ ಶುರುವಾಗುತ್ತಿಲ್ಲ. ಕಾಂಗ್ರೆಸ್‌-ಬಿಜೆಪಿ ಎರಡು ಡಿಪಿಆರ್‌ ವಿಷಯವಾಗಿಯೇ ಹಗ್ಗ-ಜಗ್ಗಾಟದಲ್ಲಿ ತೊಡಗಿವೆ. ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಕೆಲಸ ಶುರು ಮಾಡಬೇಕಿದೆ. ಅದು ಚುನಾವಣೆ ಘೋಷಣೆಗೂ ಮುನ್ನವೇ ಕೆಲಸ ಆರಂಭಿಸಿ ಬಿಜೆಪಿ ತನ್ನ ಬದ್ಧತೆ ಪ್ರದರ್ಶಿಸಲಿ ಎಂಬ ಬೇಡಿಕೆ ಮಹದಾಯಿ ಹೋರಾಟಗಾರರದ್ದು.

ಐವಿಎಫ್‌:

ಇನ್ನು ಈ ಬಜೆಟ್‌ನಲ್ಲಿ ಹೊಸ ಕಲ್ಪನೆಯೆಂದರೆ ಐವಿಎಫ್‌ ಕ್ಲಿನಿಕ್‌(IVF Clinic) ಸ್ಥಾಪನೆ. ರಾಜ್ಯದ ನಾಲ್ಕು ವೈದ್ಯಕೀಯ ಸಂಸ್ಥೆಗಳಲ್ಲಿ ಆರು ಕ್ಲಿನಿಕ್‌ ತೆರೆಯುವುದಾಗಿ ಸರ್ಕಾರ ಹೇಳಿದೆ. ಅದರಲ್ಲಿ ಒಂದು ಹುಬ್ಬಳ್ಳಿ ಕಿಮ್ಸ್‌(KIMS) ಕೂಡ ಇರುವುದು ವಿಶೇಷ. ಈ ವರೆಗೆ ಮಕ್ಕಳಲ್ಲದ ದಂಪತಿ ಐವಿಎಫ್‌ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳನ್ನೇ ನೆಚ್ಚಬೇಕಿತ್ತು. ಬಡವರಿಗೆ, ಮಧ್ಯಮ ವರ್ಗದವರಿಗೆ ದುಬಾರಿ ವೆಚ್ಚದ ಚಿಕಿತ್ಸೆ ಇದಾಗಿತ್ತು. ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರವೇ ಐವಿಎಫ್‌ ಕ್ಲಿನಿಕ್‌ ತೆರೆಯಲು ಯೋಚಿಸಿರುವುದು ಆರೋಗ್ಯಕರ ಬೆಳವಣಿಗೆ. ಇದು ಉತ್ತರ ಕರ್ನಾಟಕ ಭಾಗದ ಬಡವರಿಗೆ ಬಹಳ ಉಪಯೋಗವಾಗಲಿದೆ ಎಂಬ ಅಭಿಪ್ರಾಯ ಜನರದ್ದು.

ಕವಿಸಂಗೆ ನೆರವು:

ಇನ್ನು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿರುವ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘÜದ ಚಟುವಟಿಕೆಗಳಿಗೆ ನೆರವು ನೀಡಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಯಾವ ಪ್ರಮಾಣದಲ್ಲಿ ನೆರವು ಎಂಬುದನ್ನು ತಿಳಿಸಿಲ್ಲ. ಆದರೂ ನೆರವು ನೀಡಲು ಮುಂದಾಗಿರುವುದು ಕನ್ನಡಾಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ.

ಹೆದ್ದಾರಿಗಳಿಗೆ ಅನುಮೋದನೆ:

ಇನ್ನು ಕೇಂದ್ರ ಸರ್ಕಾರದಡಿ ನಿರ್ಮಾಣಗೊಳ್ಳಲಿರುವ . 1200 ಕೋಟಿ ವೆಚ್ಚದ ಹುಬ್ಬಳ್ಳಿ-ಧಾರವಾಡ ಬೈಪಾಸ್‌ ಹೆದ್ದಾರಿ, . 2200 ಕೋಟಿ ವೆಚ್ಚದ ಹುಬ್ಬಳ್ಳಿ-ಹೊಸಪೇಟೆ-ಬಳ್ಳಾರಿ- ಆಂಧ್ರ ಗಡಿ ಹೆದ್ದಾರಿಗೆ ಈ ಬಜೆಟ್‌ನಲ್ಲಿ ಅನುಮೋದನೆ ನೀಡಿರುವುದನ್ನು ಉಲ್ಲೇಖಿಸಲಾಗಿದೆ. ಇದರಿಂದ ಹೆದ್ದಾರಿ ನಿರ್ಮಾಣ ಕಾರ್ಯ ಬೇಗನೆ ಶುರುವಾಗಲಿದೆ.

ರೈಲ್ವೆ ಕಾಮಗಾರಿ:

ರೈಲ್ವೆ ಯೋಜನೆಗಳಿಗೂ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಈ ಬಜೆಟ್‌ನಲ್ಲಿ ಮೀಸಲಿಟ್ಟು ಪ್ರಸ್ತಾಪಿಸಿದೆ. ಅವುಗಳಲ್ಲಿ ಹುಬ್ಬಳ್ಳಿ-ಚಿಕ್ಕಜಾಜೂರು . 150 ಕೋಟಿ, ಹುಬ್ಬಳ್ಳಿ-ಲೋಂಡಾ- ವಾಸ್ಕೋ ಡಿ ಗಾಮಾ ಮಾರ್ಗಕ್ಕೆ . 400 ಕೋಟಿ ಮೀಸಲಿಟ್ಟಿದೆ. ಈ ಎರಡು ಕಾಮಗಾರಿಗಳು ಡಬ್ಲಿಂಗ್‌ ಕಾಮಗಾರಿಗಳಾಗಿವೆ. ಇನ್ನು ಧಾರವಾಡ-ಕಿತ್ತೂರ-ಬೆಳಗಾವಿ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕಾಗಿ . 150 ಕೋಟಿ ಈ ಆಯವ್ಯಯದಲ್ಲಿ ಮೀಸಲಿಟ್ಟಿದೆ.

Pancharatna rathayatre: 21ರಂದು ಕಾರೇ​ಹ​ಳ್ಳಿ​ಗೆ ಜೆಡಿ​ಎಸ್‌ ಪಂಚರತ್ನ ಯಾತ್ರೆ: ಎಚ್‌ಡಿಕೆ

ಕೊಂಚ ನಿರಾಸೆ:

ಹುಬ್ಬಳ್ಳಿ-ಧಾರವಾಡ ರಾಜ್ಯದ 2ನೇ ದೊಡ್ಡ ನಗರ. ಮುಂಬೈ-ಚೈನ್ನೈ ಕೈಗಾರಿಕಾ ಕಾರಿಡಾರ್‌ ವ್ಯಾಪ್ತಿಗೆ ಬರುವ ಮಹಾನಗರವಿದು. ಇಲ್ಲಿ ಮೂಲಸೌಲಭ್ಯ ಕಲ್ಪಿಸಲು ವಿಶೇಷ ಅನುದಾನದ ನಿರೀಕ್ಷೆ ಜನರದ್ದಾಗಿತ್ತು. ಹೆಚ್ಚಿನ ಮೂಲಸೌಲಭ್ಯ ಕಲ್ಪಿಸಿದರೆ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಲು ಅನುಕೂಲವಾಗುತ್ತಿತ್ತು. ಹೊಸ ಕೈಗಾರಿಕಾ ವಸಾಹತು ಮಾಡಬೇಕಿತ್ತು. ಇದರೊಂದಿಗೆ ನಿರಂತರ ನೀರು ಪೂರೈಕೆ, ಪಾಲಿಕೆಗೆ ಬರಬೇಕಾದ ಅನುದಾನದ ಬಗ್ಗೆಯೂ ಪ್ರಸ್ತಾಪವಿಲ್ಲ. ಮುಖ್ಯಮಂತ್ರಿಗಳು ಇದೇ ಊರಿನವರಾದರೂ ವಿಶೇಷ ಅನುದಾನ ನೀಡದಿರುವುದು ಜನರನ್ನು ನಿರಾಸೆಗೊಳಿಸಿದೆ.