ಹುಬ್ಬಳ್ಳಿ(ಮಾ.13): ಗೋವಾ ಸರ್ಕಾರದ ಮಾನವ ವಿರೋಧಿ ನಿಲುವಿನಿಂದಾಗಿ ಹಲವು ಬಾರಿ ಸಂಕಷ್ಟ, ಅತಂತ್ರ ಸ್ಥಿತಿ ಎದುರಿಸಿರುವ ಗೋವಾ ಕನ್ನಡಿಗರಿಗೆ ಇದೀಗ ಹೊಸದೊಂದು ಸಮಸ್ಯೆ ಎದುರಾಗಿದೆ. ವಲಸಿಗರನ್ನು ಹೊರದಬ್ಬಿ ಮೂಲ ಗೋವನ್ನರ ಹಿತಕಾಪಾಡಲೆಂದು ಹುಟ್ಟಿಕೊಂಡಿರುವ ‘ಪೋಗೋ ಆಂದೋಲನ’ಕ್ಕೆ ಕನ್ನಡಿಗರು ಅಕ್ಷರಶಃ ತತ್ತರಿಸಿಹೋಗಿದ್ದು, ಇನ್ನು ನಮಗೆ ಗೋವಾ ನೆಲ ಸುರಕ್ಷಿತವಲ್ಲ ಎನ್ನುವ ಆತಂಕದಲ್ಲಿದ್ದಾರೆ!

ಆರು ತಿಂಗಳಿಂದ ಗೋವಾ ಕನ್ನಡಿಗರಲ್ಲಿ ಇಂಥದೊಂದು ಅತಂತ್ರ ಸ್ಥಿತಿ, ಪರಕೀಯತೆ, ಅನಾಥಪ್ರಜ್ಞೆ ಕಾಡುತ್ತಿದೆ. ಉದ್ಯೋಗ ಅರಸಿ ವಲಸೆ ಹೋಗಿ ನಾಲ್ಕಾರು ದಶಕಗಳಿಂದ ಅಲ್ಲೇ ಉಳಿದು ತವರೂರಿನ ಸಂಪರ್ಕ ಕಡಿದುಕೊಂಡವರಿಗಂತು ಆಕಾಶವೇ ಕಳಚಿ ತಲೆಯಮೇಲೆ ಬಿದ್ದಂತಾಗಿದೆ.

ಏನಿದು ಆಂದೋಲನ?:

ಹಿಂದೆ ಆಮ್‌ ಆದ್ಮಿ ಪಕ್ಷದ ಗೋವಾ ಸಂಚಾಲಕರಾಗಿದ್ದ ಮನೋಜ್‌ ಪರಬ್‌ ಇದೀಗ ಈ ‘ಪೋಗೋ ಆಂದೋಲನ’ (ಪರ್ಸನ್‌ ಆಫ್‌ ಓರಿಜಿನ್‌ ಗೋವನ್‌) ಆರಂಭಿಸಿ, ಆ ಮೂಲಕ ತಾವು ‘ಕ್ರಾಂತಿಕಾರಿ ಗೋವನ್ನರು’ (ರೆವಲ್ಯೂಷನರಿ ಗೋವನ್ಸ್‌), ಮೂಲ ಗೋವನ್ನರ ಬದುಕಿಗಾಗಿ ಹೋರಾಟ ನಡೆಸುತ್ತಿರುವವರು. ಇದು ಮತ್ತೊಂದು ‘ಗೋವಾ ವಿಮೋಚನೆ ಹೋರಾಟ’ ಎಂದು ಘೋಷಿಸಿಕೊಂಡಿದ್ದಾರೆ.

ಬೆಂಗಳೂರಲ್ಲಿ ಕೊರೋನಾ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ

ಪ್ರತಿ ಗ್ರಾಪಂನಲ್ಲಿ ಸಮ್ಮೇಳನ ನಡೆಸುತ್ತಿರುವ ಪರಬ್‌, ‘ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ಆಂದೋಲನಕ್ಕೆ ಕೈಗೂಡಿಸಿ’ ಎಂದು ಮೂಲ ಗೋವನ್ನರಲ್ಲಿ ಮನವಿ ಮಾಡುತ್ತಿದ್ದಾರೆ. ಇದು ಈಗ ಜನಾಂದೋಲವಾಗಿ ಮಾರ್ಪಟ್ಟಿದೆ. ಈ ಸಮ್ಮೇಳನಗಳಲ್ಲಿ ವಲಸಿಗರ ವಿರುದ್ಧ, ಅದರಲ್ಲೂ ಕನ್ನಡಿಗರ ವಿರುದ್ಧ ದೊಡ್ಡ ಮಟ್ಟದ ಘೋಷಣೆಗಳು ಮೊಳಗುತ್ತಿವೆ. ವಲಸಿಗರನ್ನು ಬೆಂಬಲಿಸುವ ಸ್ಥಳೀಯ ಶಾಸಕ, ಸಚಿವರ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ.

ಒಕ್ಕಲೆಬ್ಬಿಸುವ ಹುನ್ನಾರ:

ಜಮ್ಮು-ಕಾಶ್ಮೀರಕ್ಕೆ ಹಿಂದೆ ನೀಡಿದ್ದ 370/1ರ ವಿಶೇಷ ಸ್ಥಾನಮಾನದ ಮಾದರಿಯಲ್ಲಿ ಗೋವಾ ರಕ್ಷಣೆಗೆ ಪೋಗೋ ಒತ್ತಾಯ ಆರಂಭಿಸಿದೆ. 1961ರ ಪೂರ್ವದಲ್ಲಿದ್ದವರು ಮಾತ್ರ ಮೂಲ ಗೋವನ್ನರು. ಉಳಿದವರೆಲ್ಲ ವಲಸಿಗರೆಂದು ಸಾರಬೇಕು. ಸರ್ಕಾರದ ಎಲ್ಲ ಹುದ್ದೆ ಗೋವನ್ನರಿಗೆ ಮೀಸಲಿರಿಸಬೇಕು. ಖಾಸಗಿ ಉದ್ಯೋಗಗಳಲ್ಲಿ ಸಿಂಹಪಾಲು ಸ್ಥಳೀಯರಿಗೆ ಇರಬೇಕು. ವಲಸಿಗರಿಗೆ ಮತದಾನ ಚೀಟಿ, ಆಸ್ತಿ, ವಾಹನ ಖರೀದಿ ನೋಂದಣಿಗೆ ಅವಕಾಶ ಬೇಡ. ವಲಸಿಗರನ್ನು ಪ್ರವಾಸಿಗರೆಂದು ಪರಿಗಣಿಸಿ 6 ತಿಂಗಳಿಗಿಂತ ಹೆಚ್ಚು ಕಾಲ ಇರಲು ಬಿಡಬಾರದು ಎನ್ನುವುದು ಪೋಗೋದ ಪ್ರಮುಖ ಬೇಡಿಕೆ.

ಈ ಬೇಡಿಕೆ ಈಡೇರಿಸಲು ಕಾನೂನು ಮಾಡುವಂತೆ ಗೋವಾ ವಿಧಾನಸಭೆಯ ಕಳೆದ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್‌ ಶಾಸಕ ಅಲೆಕ್ಸ್‌ ರೊನಾಲ್ಡೋ ಮೂಲಕ ಖಾಸಗಿ ಬಿಲ್‌ ಮಂಡನೆಗೆ ಯತ್ನ ನಡೆದಿತ್ತು. ಆದರೆ, ಆಡಳಿತಾರೂಢ ಬಿಜೆಪಿಯ 25 ಶಾಸಕರ ವಿರೋಧದಿಂದಾಗಿ ಈ ಬಿಲ್‌ಗೆ ಅವಕಾಶ ಲಭಿಸಿಲ್ಲ. ಇದೀಗ ಪೋಗೋ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಸಮಾವೇಶ ಆಯೋಜಿಸುತ್ತ ಜನಾಭಿಪ್ರಾಯ ಕ್ರೋಡೀಕರಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ತಯಾರಿ ನಡೆಸಿದೆ. ಸದನದಲ್ಲಿ ಅಂದು ಬಿಲ್‌ ಮಂಡನೆಗೆ ವಿರೋಧಿಸಿದ ಎಷ್ಟೋ ಶಾಸಕರು ಈಗ ಹಿಂಬಾಗಿಲಿಂದ ಬೆಂಬಲಿಸಿದ ಕಾರಣ ಹುಮ್ಮಸ್ಸಿನಿಂದ ಮುಂದೆ ಸಾಗುತ್ತಿರುವ ಪೋಗೋ ಕಾರ್ಯಕರ್ತರು ಕನ್ನಡಿಗರ ಮೇಲೆ ಗೂಂಡಾಗಿರಿಗೂ ಇಳಿಯುತ್ತಿದ್ದಾರೆ. ಕಡಿಮೆ ಕನ್ನಡಿಗರಿರುವಲ್ಲಿ ದಬ್ಬಾಳಿಕೆ, ಜಗಳ, ಹಲ್ಲೆ, ಕಾರ್ಖಾನೆ ಕಾರ್ಮಿಕರಲ್ಲಿ ಮೂಲ-ವಲಸಿಗ ಎನ್ನುವ ಗುಂಪುಗಾರಿಕೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಮತಚೀಟಿ ನೀಡಿಕೆ, ಕನ್ನಡಿಗರಿರುವ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಗೂ ಅಡ್ಡಿಪಡಿಸುತ್ತಿರುವುದು ಆತಂಕ ಹೆಚ್ಚಿಸಿದೆ.

4 ಲಕ್ಷ ಕನ್ನಡಿಗರು:

ಸದ್ಯ ಗೋವಾದ ಜನಸಂಖ್ಯೆ 13.60 ಲಕ್ಷ. ಅವರಲ್ಲಿ ಶೇ.40ರಷ್ಟುವಲಸಿಗರಿದ್ದು, ಈ ಪೈಕಿ ಕನ್ನಡಿಗರ ಸಂಖ್ಯೆ 4ಲಕ್ಷ. ಗೋವಾ ವಿಮೋಚನೆ ಹೋರಾಟದಲ್ಲಿ ಪಾಲ್ಗೊಂಡವರು, ಅದಕ್ಕೂ ಮುನ್ನ ಉದ್ಯೋಗ ಅರಸಿ ಮರ್ಮಗೋವಾ ಪೋರ್ಟ್‌ ಟ್ರಸ್ಟ್‌, ಕಾರ್ಖಾನೆಗಳಲ್ಲಿ ಕೆಲಸಕ್ಕೆ ಸೇರಿದವರೂ ಇದರಲ್ಲಿದ್ದಾರೆ. 70, 80 ಮತ್ತು 90ರ ದಶಕದಲ್ಲಿ ಹೆಚ್ಚಿನ ಕನ್ನಡಿಗರು ಅಲ್ಲಿನ ಕೈಗಾರಿಕೆ ಮತ್ತು ಅಭಿವೃದ್ಧಿ ಕಾಮಗಾರಿಯಲ್ಲಿ ಕೂಲಿಗಳಾಗಿ ದುಡಿದಿದ್ದಾರೆ. ಅಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲಿ ಜನಿಸಿರುವ ಅವರ ಮಕ್ಕಳು ಪೂರ್ಣ ಗೋವನ್ನರೇ ಆಗಿದ್ದಾರೆ. ಆರಂಭದಲ್ಲಿ ಈ ಚಳವಳಿ ನಿರ್ಲಕ್ಷಿಸಿದ್ದ ಕನ್ನಡಿಗರಿಗೆ ಅದಕ್ಕೆ ಸಿಗುತ್ತಿರುವ ಬೆಂಬಲದಿಂದ ಈಗ ಭೀತಿ ಶುರುವಾಗಿದೆ. ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಪೋಗೋ ವಿರುದ್ಧ ಸಂಘರ್ಷಕ್ಕಿಳಿಯುವ ಶಕ್ತಿಯೂ ಇಲ್ಲದೆ ಅನಿಶ್ಚಿತತೆಗೆ ಸಿಲುಕಿದ್ದಾರೆ ಕನ್ನಡಿಗರು.

3 ದಶಕದ ಹಿಂದೆ ನಮ್ಮ ಪೋಷಕರು ಇಲ್ಲಿಗೆ ಕೆಲಸ ಅರಸಿ ವಲಸೆ ಬಂದಿದ್ದಾರೆ. ಗೋವಾ ಕಟ್ಟಿಬೆಳೆಸುವಲ್ಲಿ ಅವರ ಕೊಡುಗೆ ಅಪಾರ. ಈಗ ಕೆಲವರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ದಬ್ಬಾಳಿಕೆಯನ್ನೂ ನಡೆಸುತ್ತಿದ್ದಾರೆ. ನಮ್ಮನ್ನು ಹೊರ ಹಾಕುವ ಹುನ್ನಾರ ನಡೆಸಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸ್‌ ರಕ್ಷಣೆಯಲ್ಲಿ ಬದುಕುವಂತಾಗಿದೆ ಎಂದು ಸಾಂಕೋಳ ಗ್ರಾಪಂ ಸದಸ್ಯ ಗೋವಿಂದ ಲಮಾಣಿ ತಿಳಿಸಿದ್ದಾರೆ.