ಕಲಬುರಗಿ ತೊಗರಿಗೆ ಭೌಗೋಳಿಕ ಮಾನ್ಯತೆ

ಕಲಬುರಗಿ ಭಾಗದಲ್ಲಿ ಬೆಳೆಯುವ ತೊಗರಿಗೆ ಈಗ ಭೌಗೋಳಿಕ ಮಾನ್ಯತೆ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಕೊಡಮಾಡುವ ಭೌಗೋಳಿಕ ಸೂಚ್ಯಂಕ (ಜಿಯೋಗ್ರಫಿಕಲ್‌ ರಿಜಿಸ್ಪ್ರೇಷನ್‌ ಇಂಡೆಕ್ಸ್‌)ವನ್ನು ಈಗ ಕಲಬುರಗಿ ತೊಗರಿಯೂ ಪಡೆದುಕೊಂಡಿದೆ. 

Kalaburagi Tur Dal Gets Geographical Registration Index Tag

ಶೇಷಮೂರ್ತಿ ಅವಧಾನಿ

ಕಲಬುರಗಿ [ಆ.26]: ತ್ವರಿತವಾಗಿ ಬೇಯುವ, ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ, ಕಲಬುರಗಿ ಭಾಗದಲ್ಲಿ ಬೆಳೆಯುವ ತೊಗರಿಗೆ ಈಗ ಭೌಗೋಳಿಕ ಮಾನ್ಯತೆ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಕೊಡಮಾಡುವ ಭೌಗೋಳಿಕ ಸೂಚ್ಯಂಕ (ಜಿಯೋಗ್ರಫಿಕಲ್‌ ರಿಜಿಸ್ಪ್ರೇಷನ್‌ ಇಂಡೆಕ್ಸ್‌)ವನ್ನು ಈಗ ಕಲಬುರಗಿ ತೊಗರಿಯೂ ಪಡೆದುಕೊಂಡಿದೆ. ಈ ಮೂಲಕ ರಾಷ್ಟ್ರ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಲಬುರಗಿಯ ತೊಗರಿಯನ್ನು ಬ್ರ್ಯಾಂಡ್‌ ಮಾಡುವುದು ಸುಲಭವಾಗಲಿದೆ.

ಕಲಬುರಗಿ ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿದ್ದು, ಸರಿಯಾದ ಬೆಲೆ ಸಿಗದೆ ರೈತರು ಸಾಕಷ್ಟುಸಮಸ್ಯೆ ಎದುರಿಸುತ್ತಿದ್ದರು. ಈಗ ಭೌಗೋಳಿಕ ಮಾನ್ಯತೆ ಸಿಕ್ಕಿರುವುದರಿಂದ ಈ ಭಾಗದ ತೊಗರಿಗೆ ಉತ್ತಮ ಮಾರುಕಟ್ಟೆಸಿಗುವ ನಿರೀಕ್ಷೆ ಇದೆ.

ಭೌಗೋಳಿಕ ಮಾನ್ಯತೆಗಾಗಿ 2017ರ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆ ಬಳಿಕ ಅನೇಕ ಹಂತದ ವಿಚಾರಣೆಗಳು, ಪೂರಕ ಮಾಹಿತಿ, ದಾಖಲೆ, ಅಂಕಿ-ಅಂಶಗಳನ್ನೆಲ್ಲ ಕಲೆಹಾಕಿ ಮಾಹಿತಿ ಪಡೆದ ಚೆನ್ನೈನಲ್ಲಿರುವ ಜಿಯೋಗ್ರಫಿಕಲ್‌ ರಿಜಿಸ್ಪ್ರೇಷನ್‌ ಕಚೇರಿಯವರು ಆ.14 ರಂದು ಕಲಬುರಗಿ ತೊಗರಿಗೆ ಭೌಗೋಳಿಕ ಸೂಚ್ಯಂಕ ನೀಡುವ ತೀರ್ಮಾನ ತೆಗೆದುಕೊಂಡರು.

ಕಲಬುರಿಗ ತೊಗರಿ ಬೇಳೆ ತನ್ನ ಸ್ವಾದ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿ. ಈ ಬೇಳೆ ಬೇಯಲು ಹೆಚ್ಚು ಸಮಯ ಬೇಕಿಲ್ಲ. ಹೆಚ್ಚಿನ ಖನಿಜಾಂಶಗಳು, ಪೋಷಕಾಂಶಗಳನ್ನೂ ಈ ಭಾಗದಲ್ಲಿ ಬೆಳೆಯುವ ತೊಗರಿ ಹೊಂದಿದೆ. ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಉಡುಪಿ ಜಿಲ್ಲೆಯ ಮಟ್ಟುಗುಳ್ಳ(ಬದನೆ), ನಂಜನಗೂಡಿನ ರಸಬಾಳೆಗೂ ಭೌಗೋಳಿಕ ಮಾನ್ಯತೆ ಸಿಕ್ಕಿತ್ತು. ರಾಜ್ಯದಲ್ಲಿ ಅಂದಾಜು 9 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿದ್ದು, ಈ ಪೈಕಿ ಶೇ.60ರಷ್ಟುಪ್ರದೇಶ ಕಲಬುರಗಿ ಜಿಲ್ಲೆಯೊಂದರಲ್ಲೇ ಬೆಳೆಯಲಾಗುತ್ತದೆ.

ಏನಿದು ಜಿಇಆರ್‌?

ನಿರ್ದಿಷ್ಟಪ್ರದೇಶವೊಂದರಲ್ಲಿ ಯಾವುದೇ ರೀತಿಯ ಉತ್ಪನ್ನವನ್ನು ವಿಶಿಷ್ಟವಾಗಿ ಬೆಳೆಯಲಾಗುತ್ತಿದ್ದರೆ ಅಲ್ಲಿನ ಹವಾಮಾನ ಅಂಶಗಳು, ಪರಿಸರ ಇತ್ಯಾದಿ ಸಂಗತಿಗಳನ್ನಾಧರಿಸಿ ಭೌಗೋಳಿಕವಾಗಿ ಈ ಉತ್ಪನ್ನ ನಿರ್ದಿಷ್ಟಪರಿಸರದಲ್ಲಷ್ಟೇ ಗುಣಮಟ್ಟದಿಂದ ಬೆಳೆಯುತ್ತದೆ ಎಂದು ಸಾರುವುದೇ ಭೌಗೋಳಿಕ ಸೂಚ್ಯಂಕದ ಉದ್ದೇಶ. ಕಲಬುರಗಿಯ ಬಿಸಿಲು, ಆದ್ರ್ರ ಹವಾಮಾನ, ಕಡಿಮೆ ಮಳೆ, ಸುಣ್ಣದ ಕಲ್ಲಿನ ಭೂಮಿಯೊಡಲು ಮತ್ತಿತರ ಅಂಶಗಳು ಈ ಭಾಗದಲ್ಲಿ ಬೆಳೆಯುವ ತೊಗರಿಯನ್ನು ಇತರೆಡೆ ಬೆಳೆಯುವ ತೊಗರಿಗಿಂತ ಭಿನ್ನವಾಗಿಸುತ್ತದೆ.

ಏನು ಲಾಭ?

ಕಲಬುರಗಿ ತೊಗರಿಗೆ ದೇಶ, ವಿದೇಶದಲ್ಲಿ ಮಾನ್ಯತೆ ಸಿಗಲಿದೆ. ಕಲಬುರಗಿ ತೊಗರಿ ಹೆಸರಲ್ಲಿ ಬೇರೆ ಪ್ರದೇಶದಲ್ಲಿ ಬೆಳೆಯುವ ತೊಗರಿ ಮಾರಾಟ ತಪ್ಪಲಿದೆ. ಕಲಬುರಗಿ ರೈತರಿಗೆ ಹೆಚ್ಚಿನ ಬೆಲೆ ಸಿಗಲಿದೆ

Latest Videos
Follow Us:
Download App:
  • android
  • ios