ಕಲಬುರಗಿ, [ಫೆ.24]: ಕಲಬುರಗಿಯ ಪೀರ ಬಂಗಾಲಿ ದರ್ಗಾ ಮೈದಾನದಲ್ಲಿ ಮತೀಯ ದ್ವೇಷ ಹರಡುವಂತಹ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪ ಹೊತ್ತಿರುವ ಎಐಎಂಐಎಂ ಪಕ್ಷದ ವಕ್ತಾರ, ಓವೈಸಿ ಶಿಷ್ಯ, ಮಹಾರಾಷ್ಟ್ರ ಮಾಜಿ ಶಾಸಕ ವಾರೀಸ್ ಪಠಾಣ್‍ಗೆ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.

  ಮಹಾರಾಷ್ಟ್ರದ ಮಾಜಿ ಶಾಸಕ ಹಾಗೂ ಎಐಎಂಐಎಂ ವಕ್ತಾರ ವಾರೀಸ್ ಪಠಾಣ್ ಕಲಬುರಗಿಯಲ್ಲಿ ಫೆ.15ರಂದು ಹಾಗರಗಾ ಕ್ರಾಸ್ ಹತ್ತಿರವಿರುವ ಪೀರ್ ಬಂಗಾಲಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ `ಬಹುಸಂಖ್ಯಾತ'ರಿಗೆ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ವಾರೀಸ್ ಪಠಾಣ್ ವಿರುದ್ಧ ಕಳೆದ ಶುಕ್ರವಾರ ಪ್ರಕರಣ ದಾಖಲಿಸಿದ್ದ ಕಲಬುರಗಿ ಪೊಲೀಸರು ಇದೀಗ ಮಾ. 29 ರಂದು ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ಪಠಾಣ ವಿರುದ್ಧ ನೊಟೀಸ್ ಜಾರಿಗೊಳಿಸಿದ್ದಾರೆ.

ಭಾರತದಲ್ಲಿ ಟ್ರಂಪ್ ಮೋಡಿ, ಮತ್ತೆ ಪಾಕ್ ಜಿಂದಾಬಾದ್ ಎಂದ ಕಿಡಿಗೇಡಿ; ಫೆ.24ರ ಟಾಪ್ 10 ಸುದ್ದಿ!

ಮತೀಯ ದ್ವೇಷದ ಭಾಷಣ ಮಾಡಿರುವ ಆರೋಪದಡಿಯಲ್ಲಿ ಸ್ಥಳೀಯ ವಕೀಲರಾದ ಶ್ವೇತಾ ಸಿಂಗ್ ಓಂಪ್ರಕಾಶ್ ರಾಠೋಡ್ ಅವರ ದೂರಿನ ಆಧಾರದಲ್ಲಿ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಳೆದ ಶುಕ್ರವಾರ ಪ್ರಕರಣ ದಾಖಲಾಗಿತ್ತು.

ಕಲಬುರಗಿ ಪೊಲೀಸರು ವಾರೀಸ್ ಪಠಾಣ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 177, 153, 153 ಎ (ವಿವಿಧ, ಮುದಾಯಗಳ ನಡುವೆ ವೈರತ್ವ, ದ್ವೇಷ, ವೈಷಮ್ಯ ಹರಡುವುದು)ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಾರೀಸ್ ಪಠಾಣ ಮಾಡಿರುವ ಭಾಷಣದ ವಿಡಿಯೋ, ಆಡಿಯೋ ಫೂಟೇಜ್‍ಗಳನ್ನು ಸಂಪೂರ್ಣ ಪರೀಕ್ಷಿಸಲಾಗುತ್ತಿದೆ. ಇದರ ಜೊತೆಗೇ ಪಠಾಣರನ್ನು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಸಹ ಜಾರಿ ಮಾಡಲಾಗಿದ್ದು, ಮಾ.29 ರಂದು ವಿಚಾರಣೆಗೆ ಬರಬೇಕು ಎಂದು ನೋಟೀಸ್‍ನಲ್ಲಿ ಸೂಚಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಉಪ ಆಯುಕ್ತ ಕಿಶೋರ್ ಬಾಬು ಹೇಳಿದ್ದಾರೆ.

ದೇಶದ್ರೋಹಿ ಘೋಷಣೆ: ಅಮೂಲ್ಯ ಲಿಯೋನಾ ಜತೆ ಪರಪ್ಪನ ಅಗ್ರಹಾರ ಸೇರಿದ ಅರುದ್ರಾ

ವಾರೀಸ್ ಪಠಾಣ ಮಾತನಾಡಿದ್ದೇನು..?
`ಮುಸ್ಲಿಮರ ಜನಸಂಖ್ಯೆ ದೇಶದಲ್ಲಿ 15 ಕೋಟಿಗಿಂತ ಕಮ್ಮಿ ಇರಬಹುದು. ಅಗತ್ಯ ಬಿದ್ದರೆ 100 ಕೋಟಿ ಬಹುಸಂಖ್ಯಾತರಿಗೆ ತಕ್ಕ ತಿರುಗೇಟು ನೀಡಬಲ್ಲರು. ಬರೀ ಮಹಿಳೆಯರು ಹೊರಗ ಬಂದಿದ್ದಕ್ಕೆ ನಿಮ್ಮ ಬೆವರು ಹರಿಯುತ್ತಿದೆ. ಇನ್ನು ಅವರ ಜೊತೆಗೆ ಪುರುಷರು ಹೊರಗ ಬಂದರೆ ಏನಾಗುತ್ತದೆ ನೋಡಿರಿ' ಎಂದು ವಾರೀಸ್ ಪಠಾಣ್ ಫೆ.15ರಂದು ಇಲ್ಲಿನ ಪೀರ್ ಬಂಗಾಲಿ ದರ್ಗಾ ಮೈದಾನದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕಲಬುರಗಿಯಲ್ಲಿ ಫೆ.15ರಂದು ರಾತ್ರಿ ನಡೆದಂತಹ ಸಮಾವೇಶದಲ್ಲಿ ಮಾಡಿರುವ ಆವೇಶದ, ಮತೀಯ ಕಿಡಿ ಹೊತ್ತಿಸುವಂತಹ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಗಮನ ಸೆಳೆದಿತ್ತು. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸದರಿ ಪ್ರಕರಣ ದಾಖಲಾಗಿದೆ, ಹೀಗಾಗಿ ಪೊಲೀಸರು ಮಾ. 29 ರಂದು ವಿಚಾರಣೆಗೆ ಹಾಜರಾಗುವಂತೆ ಪಠಾಣರಿಗೆ ಸೂಚನೆ ನೀಡಿದ್ದಾರೆ.