Asianet Suvarna News Asianet Suvarna News

SSLC ಪಾಸಾದವರಿಗೆ ಇಲ್ಲಿದೆ ಉದ್ಯೋಗಾವಕಾಶ

ಉದ್ಯೋಗ ಮೇಳ: 49 ಕಂಪನಿ, 1600 ಅಭ್ಯರ್ಥಿಗಳ ನೋಂದಣಿ| ಗ್ರಾಮೀಣ ಅಭ್ಯರ್ಥಿಗಳ ನೋಂದಣಿಗಾಗಿ ಹಾಗೂ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸಲಹೆ ನೀಡಲು ಹೋಬಳಿವಾರು ನೋಂದಣಿ ಕೌಂಟರ್‌ ಆರಂಭ| 
 

Job Fair Will Be Held on Feb 22nd in Haveri
Author
Bengaluru, First Published Feb 19, 2020, 8:06 AM IST

ಹಾವೇರಿ(ಫೆ.19): ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ ಆಯ್ಕೆಪೂರ್ವ ಸಂದರ್ಶನ ಆಯೋಜಿಸಲು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಸಲಹೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಅಂಗವಾಗಿ ಜಿಲ್ಲೆಯ ವೃತ್ತಿ ಕೌಶಲ್ಯ ತರಬೇತಿ ಕೇಂದ್ರಗಳ ಮುಖ್ಯಸ್ಥರ ಸಭೆ ನಡೆಸಿದ ಅವರು ಉದ್ಯೋಗ ಮೇಳದಲ್ಲಿ ತಾವು ಉದ್ಯೋಗದಾತರಾಗಿ ನೋಂದಾಯಿಸಿಕೊಳ್ಳಿ. ತಮ್ಮಲ್ಲಿ ತರಬೇತಿ ಪಡೆದು ಉದ್ಯೋಗಾವಕಾಶಗಳಿಲ್ಲದ ಅಭ್ಯರ್ಥಿಗಳಿಗೆ ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಂಡು ಉದ್ಯೋಗಾವಕಾಶ ಅವಕಾಶ ಪಡೆದುಕೊಳ್ಳಲು ಸಲಹೆ ನೀಡಿದ್ದಾರೆ.

ಯಾರು, ಯಾವ ಉದ್ಯೋಗ ಹೊಂದಲು ಆಸಕ್ತಿ ಹೊಂದಿದ್ದಾರೆ, ನೇಮಕಾತಿ ಮಾಡಿಕೊಳ್ಳುವ ಕಂಪನಿಯ ಮಾಲೀಕರು ಅಭ್ಯರ್ಥಿಗಳಿಂದ ಯಾವ ಕೌಶಲ್ಯಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಉದ್ಯೋಗದಾತರ ಈ ಕೌಶಲ್ಯಗಳಿಗೆ ಅನುಸಾರವಾಗಿ ಅಭ್ಯರ್ಥಿಗಳಿಗೆ ಪೂರ್ವಮುಖಾಮುಖಿ ಭೇಟಿ ಕಾರ್ಯಕ್ರಮವನ್ನು ಉದ್ಯೋಗಮೇಳದ ಮುನ್ನಾ ಯೋಜಿಸಲು ಸಲಹೆ ನೀಡಲಾಯಿತು. ಈ ಕುರಿತಂತೆ ಎಲ್ಲ ಖಾಸಗಿ ವೃತ್ತಿ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿಪಡೆದ ಅಭ್ಯರ್ಥಿಗಳನ್ನು ಆಹ್ವಾನಿಸಲು ಸೂಚಿಸಲಾಯಿತು.

ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ: ಬೃಹತ್ ಉದ್ಯೋಗ ಮೇಳ

ಜಿಲ್ಲೆಯ ಸ್ಥಳೀಯ ಟ್ರೇಡ​ರ್ಸ್‌ಗಳಿಗೆ ಬೇಕಾದ ಕೌಶಲ್ಯಾಧಾರಿತ ಅಭ್ಯರ್ಥಿಗಳನ್ನು ಆಯ್ಕೆಮಾಡಲು ಅವಕಾಶ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಉದ್ಯೋಗ ಮೇಳಕ್ಕೆ ಆವರಣದ ವ್ಯವಸ್ಥೆ, ಪ್ರಚಾರದ ವ್ಯವಸ್ಥೆ, ಭಿತ್ತಿ ಪತ್ರಗಳು, ಕೊಠಡಿಗಳು, ಕುಡಿಯುವ ನೀರಿನ ವ್ಯವಸ್ಥೆ, ಲಭ್ಯವಿರುವ ಮೂಲ ಸೌಕರ್ಯಗಳು ಸೇರಿದಂತೆ ಸಿದ್ಧತೆಗಳನ್ನು ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮಧ್ಯಾಹ್ನದ ವೇಳೆಯಲ್ಲಿ ಲಘು ಉಪಹಾರ ವ್ಯವಸ್ಥೆ ಕೈಗೊಳ್ಳಲು ಸೂಚಿಸಲಾಯಿತು.

ಗ್ರಾಮೀಣ ಅಭ್ಯರ್ಥಿಗಳ ನೋಂದಣಿಗಾಗಿ ಹಾಗೂ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸಲಹೆ ನೀಡಲು ಹೋಬಳಿವಾರು ನೋಂದಣಿ ಕೌಂಟರ್‌ಗಳನ್ನು ಆರಂಭಿಸಲಾಗಿದೆ. ಈವರೆಗೆ ಆನ್‌ಲೈನ್‌ನಲ್ಲಿ 1600 ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಮೂಲೆಯಿಂದ 50ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿವೆ ಎಂದು ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಉದ್ಯೋಗ ಮೇಳದಲ್ಲಿ ಅನಕ್ಷರಸ್ಥರು ಸೇರಿದಂತೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊಮಾ ಕೋರ್ಸ್‌ಗಳು ಸೇರಿದಂತೆ ವಿದ್ಯಾರ್ಹತೆಯ ಅನುಸಾರವಾಗಿ ಉದ್ಯೋಗಾವಕಾಶಗಳನ್ನು ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಹಾವೇರಿ ಜಿಲ್ಲಾಡಳಿತ ಭವನದ ಜಿಲ್ಲಾ ಕೌಶಲ್ಯ ಮಿಷನ್‌ 08375-249291, ಸಂಜಯ ಕೋರೆ ಮೊ.7338521583ನ್ನು ಸಂಪರ್ಕಿಸಬಹುದು.
 

Follow Us:
Download App:
  • android
  • ios