ಬೆಂಗಳೂರು(ಫೆ.27): ಮುಂಬರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ  ಕಾರ್ಯೋನ್ಮುಖವಾಗಿರುವ ಜೆಡಿಎಸ್‌ ಸರಣಿ ಸಭೆ ಆರಂಭಿಸಿದ್ದು, ಬುಧವಾರ ಯಲಹಂಕ ಮತ್ತು ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆ ನಡೆಸಲಾಯಿತು.

ಜೆಡಿಎಸ್‌ ಪಕ್ಷದ ಕಚೇರಿಯಲ್ಲಿ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್‌.ಪ್ರಕಾಶ್‌ ನೇತೃತ್ವದಲ್ಲಿ ಸಭೆ ಜರುಗಿತು. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆ, ಸದಸ್ಯತ್ವ ನೋಂದಣಿ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಜನತಾ ಪರಿವಾರದ ಕಾಲದಿಂದಲೂ ಪಕ್ಷವು ಜನಪರ ಯೋಜನೆಗಳನ್ನು ನೀಡಿದ್ದು, ಅವುಗಳನ್ನು ಜನರ ಮುಂದೆ ಯಾವ ರೀತಿಯಲ್ಲಿಡಬೇಕು ಎಂಬುದರ ಕುರಿತು ಚರ್ಚಿಸಲಾಯಿತು. ಅಲ್ಲದೇ, ಅದಕ್ಕೊಂದು ರೂಪುರೇಷೆ ರೂಪಿಸುವ ಕುರಿತು ಸಮಾಲೋಚನೆ ನಡೆಸಲಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಯಾವ ರೀತಿ ಸದೃಢಗೊಳಿಸಬೇಕು, ಕಾರ್ಯಕರ್ತರನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಅವರಿಗೆ ಪಕ್ಷದಲ್ಲಿ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆಯಿತು. ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಅವರ ವಾರ್ಡ್‌ಗಳಲ್ಲಿ ಪಕ್ಷದ ಬಲವರ್ಧನೆಗೆ ಮಾಡಿರುವ ಕಾರ್ಯಕ್ರಮಗಳ ಕುರಿತು ಆರ್‌.ಪ್ರಕಾಶ್‌ ಮಾಹಿತಿಯನ್ನು ಪಡೆದುಕೊಂಡರು. ಪಕ್ಷದ ಕಾರ್ಯಕರ್ತರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಆದ್ಯತೆ ನೀಡಬೇಕು. ಇತರೆ ಪಕ್ಷಗಳಿಂದ ಬರುವವರಿಗೆ ಮಣೆ ಹಾಕಬಾರದು. ಹೀಗಾದರೆ ಮಾತ್ರ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರನ್ನು ಶ್ರಮಿಸಲಿದ್ದಾರೆ ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು ಎಂದು ಹೇಳಲಾಗಿದೆ.

ಬುಧವಾರದಿಂದ ಆರಂಭವಾಗಿರುವ ಸರಣಿ ಸಭೆಯು ಮಾ.13ರವರೆಗೆ ನಡೆಯಲಿದೆ. ನಗರದ 28 ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ಸಭೆಯ ವಿವರಣೆ ನೀಡಲಾಗುತ್ತದೆ ಎನ್ನಲಾಗಿದೆ.