Asianet Suvarna News Asianet Suvarna News

ಪಂಚಮಸಾಲಿ ಪೀಠಗಳ ಒಗ್ಗಟ್ಟಿಗೆ ಮೃತ್ಯುಂಜಯ, ವಚನಾನಂದ ಶ್ರೀ ಒಗ್ಗೂಡಲಿ

ಮುಖಂಡರನ್ನು ಒಟ್ಟಿಗೆ ಕರೆದೊಯ್ಯಲಿ ಎಂದು ಸಮುದಾಯದ ಒತ್ತಾಸೆ|ಏನೇ ಭಿನ್ನಾಭಿಪ್ರಾಯಗಳಿದ್ದರೂ ಸಮುದಾಯದ ಏಳಿಗೆ ವಿಷಯ ಬಂದಾಗ ಅವೆಲ್ಲವನ್ನೂ ಮರೆತು ಹೋರಾಟ ನಡೆಸಬೇಕು| ಎರಡೂ ಪೀಠಗಳ ಕಾರ್ಯ ಪ್ರತ್ಯೇಕವಾಗಿಯೇ ನಡೆಯಲಿ|

Jayamrutunjaya Swamiji Vachanand Swami Should be Together work for Panchamasali Matha
Author
Bengaluru, First Published Feb 21, 2020, 10:39 AM IST

ಬೆಂಗಳೂರು(ಫೆ.21): ಪಂಚಮಸಾಲಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೂಡಲಸಂಗಮ ಪೀಠ ಮತ್ತು ಹರಿಹರ ಪೀಠ ಎರಡೂ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಒತ್ತಾಸೆ ಸಮುದಾಯದ ಜನರಿಂದ ವ್ಯಕ್ತವಾಗುತ್ತಿದೆ.

ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡಲು ಮತ್ತು ಸೂಕ್ತ ಪ್ರಾತಿನಿಧ್ಯ ಸಿಗಲು ಉಭಯ ಪೀಠಗಳ ಮಠಾಧೀಶರು ನಿರ್ದಿಷ್ಟ ಗುರಿ ಇಟ್ಟುಕೊಂಡು ಶ್ರಮಿಸಬೇಕು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಸಮುದಾಯದ ಏಳಿಗೆ ವಿಷಯ ಬಂದಾಗ ಅವೆಲ್ಲವನ್ನೂ ಮರೆತು ಹೋರಾಟ ನಡೆಸಬೇಕು. ಜತೆಗೆ ಸಮುದಾಯದ ಮುಖಂಡರನ್ನು ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ ಹೊರಬೇಕು. ಅಂದಾಗ ಮಾತ್ರ ಸಮುದಾಯಕ್ಕೆ ನ್ಯಾಯ ಸಿಗಲಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.
ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿಗಳಿಬ್ಬರೂ ಯುವಕರು. ಇನ್ನೂ ಹೆಚ್ಚು ಕಾಲ ಸಮುದಾಯವನ್ನು ಮುನ್ನಡೆಸಬಲ್ಲ ಶಕ್ತಿ ಹೊಂದಿದ್ದಾರೆ. ಎರಡೂ ಪೀಠಗಳ ಕಾರ್ಯ ಪ್ರತ್ಯೇಕವಾಗಿಯೇ ನಡೆಯಲಿ. ಅದರಲ್ಲೇನೂ ಸಮಸ್ಯೆಯಿಲ್ಲ. ಆದರೆ, ಸಮುದಾಯದ ಬೆಳವಣಿಗೆ ವಿಚಾರ ಬಂದಾಗ ಮಾತ್ರ ಒಂದಾಗಿ ಕುಳಿತು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಇದರಿಂದ ಸಮುದಾಯವನ್ನು ವಿಭಜಿಸುವ ಇತರರ ತಂತ್ರ ಸಫಲವಾಗುವುದಿಲ್ಲ. ಮೇಲಾಗಿ, ಸಮುದಾಯಕ್ಕೆ ಸಿಗಬೇಕಾದ ನ್ಯಾಯ ಸಿಗಲು ಹೆಚ್ಚು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಹೊರಬೀಳುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲಿಂಗಾಯತ ಸಮುದಾಯದಲ್ಲಿರುವ ಉಪಜಾತಿಗಳ ಪೈಕಿ ಪಂಚಮಸಾಲಿ ಸಮುದಾಯ ಹೆಚ್ಚಿನ ಜನಸಂಖ್ಯೆ ಹೊಂದಿದ್ದರೂ ರಾಜಕೀಯ ಲಾಭ ಪಡೆಯುವಾಗ ಹಿಂದೆ ಬೀಳುತ್ತಿದೆ. ಇತರ ಉಪಜಾತಿಗಳೇ ಹೆಚ್ಚಿನ ಪ್ರಾತಿನಿಧ್ಯ ಪಡೆಯುತ್ತಿವೆ. ಹೆಚ್ಚಿನ ಸಂಖ್ಯೆಯ ಶಾಸಕರು ಆಯ್ಕೆಯಾದರೂ ಸಚಿವ ಸ್ಥಾನ ಪಡೆಯುವಾಗ ಆ ಸಂಖ್ಯೆಗೆ ತಕ್ಕಂತೆ ಪ್ರಾಶಸ್ತ್ಯ ಸಿಗುವುದಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಉಭಯ ಮಠಗಳ ಪೀಠಾಧಿಪತಿಗಳು ಸಮುದಾಯಕ್ಕೆ ಸೇರಿದ ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಕ್ಕೊರಲಿನ ತೀರ್ಮಾನಗಳನ್ನು ಕೈಗೊಳ್ಳಬೇಕು. ಇದರಿಂದ ಸಮುದಾಯದ ಪ್ರಗತಿ ಸಾಧ್ಯ ಎಂಬ ಮಾತು ಹಲವು ಜನರಿಂದ ಕೇಳಿಬಂದಿದೆ.
 

Follow Us:
Download App:
  • android
  • ios