ಜಮಖಂಡಿ ಉಪಚುನಾವಣೆ: ಅನುಕಂಪದ ಅಲೆಯಲ್ಲಿ ತೇಲೋರು ಯಾರು?
- ತಂದೆಯ ಸಾವಿನ ಅನುಕಂಪದ ನಿರೀಕ್ಷೆಯಲ್ಲಿ ಕಾಂಗ್ರೆಸ್‌ನ ಆನಂದ ನ್ಯಾಮಗೌಡ
- 2 ಬಾರಿ ಸೋಲಿನ ಅನುಕಂಪ ಲಭಿಸಬಹುದು ಎಂಬ ಆಸೆಯಲ್ಲಿ ಬಿಜೆಪಿಯ ಕುಲಕರ್ಣಿ
- ಮತದಾರರಿಗೆ ಅನುಕಂಪ ಇದ್ದರೂ ಎಲ್ಲವೂ ಮತಗಳಾಗಿ ಪರಿವರ್ತನೆ ಆಗೋದು ಅನುಮಾನ
- ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ
- ಸಮ್ಮಿಶ್ರ ಸರ್ಕಾರದ ಎದುರು ನೈಜ ಸವಾಲು
ಬ್ರಹ್ಮಾನಂದ ಹಡಗಲಿ
ಕನ್ನಡಪ್ರಭ ವಾರ್ತೆ ಜಮಖಂಡಿ: ‘ಬ್ಯಾರೇಜ್ ಹೀರೋ’ ಎಂದೇ ಖ್ಯಾತರಾಗಿದ್ದ ಹಿರಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ಅಗಲಿಕೆ ಹಿನ್ನೆಲೆಯಲ್ಲಿ ಅನುಕಂಪದ ಅಲೆಯ ನಡುವೆ ನಡೆಯುತ್ತಿರುವ ಉಪಚುನಾವಣೆ ಇದಾಗಿರುವುದರಿಂದ ಜಮಖಂಡಿ ವಿಧಾನಸಭಾ ಕ್ಷೇತ್ರದ ಮತದಾರರು ಅನುಕಂಪಕ್ಕೆ ಸುಲಭವಾಗಿ ಜೈ ಎನ್ನುತ್ತಾರಾ ಅಥವಾ ಬಿಜೆಪಿಯನ್ನು ಬೆಂಬಲಿಸುತ್ತಾರಾ ಎಂಬುದು ಕುತೂಹಲಕರವಾಗಿದೆ.
ಕಾಂಗ್ರೆಸ್‌ನಿಂದ ದಿ.ಸಿದ್ದು ನ್ಯಾಮಗೌಡರ ಪುತ್ರ ಆನಂದ ನ್ಯಾಮಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಅನುಕಂಪದ ಆಧಾರದ ಮೇಲೆ ಇವರಿಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಸರ್ಕಾರದ ಪಾಲುದಾರಿಕೆ ಪಕ್ಷವಾಗಿರುವ ಜೆಡಿಎಸ್ ಕೂಡ ಸಹಮತ ಸೂಚಿಸಿದೆ.
ಆದರೆ ಆರಂಭದಲ್ಲಿ ಕಾಂಗ್ರೆಸ್ ಮುಖಂಡ ಸುಶೀಲಕುಮಾರ ಬೆಳಗಲಿ ಅವರು ಟಿಕೆಟ್ ಸಿಗದಿರುವುದಕ್ಕೆ ಕ್ಯಾತೆ ತೆಗೆದು, ತಮ್ಮ ಬೆಂಬಲಿಗರ ಸಭೆಯನ್ನೂ ನಡೆಸಿದ್ದರು. ಮಾತ್ರವಲ್ಲ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆಯನ್ನೂ ನೀಡಿದ್ದರು. ನಂತರ ಈ ವಿಚಾರ ಅರಿತ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಸಂದರ್ಭದಲ್ಲಿ ಜಮಖಂಡಿಗೆ ಬಂದಾಗ ಬೆಳಗಲಿ ಬಂಡಾಯವನ್ನು ತಣ್ಣಗಾಗಿಸಿದರು.
ಇನ್ನು ಬಿಜೆಪಿ ಎರಡು ಬಾರಿ ಸೋಲುಂಡಿದ್ದ ಶ್ರೀಕಾಂತ ಕುಲಕರ್ಣಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕಳೆದ ಬಾರಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಉದ್ಯಮಿ ಸಂಗಮೇಶ ನಿರಾಣಿ 24,461 ಮತಗಳನ್ನು ಪಡೆಯುವ ಮೂಲಕ ಕುಲಕರ್ಣಿ ಸೋಲಿಗೆ ಮಗ್ಗುಲ ಮುಳ್ಳಾಗಿದ್ದರು. ಈ ಸತ್ಯ ಅರಿತ ಬಿಜೆಪಿ ವರಿಷ್ಠರು ಈ ಬಾರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಂಗಮೇಶ ನಿರಾಣಿ ಅವರನ್ನು ಲೆಕ್ಕಕ್ಕೆ ಪರಿಗಣಿಸಿ ಸಂಧಾನ ನಡೆಸುವಲ್ಲಿ ಯಶಸ್ವಿಯಾದರು.
ಆನಂದಗೇನು ಅನುಕೂಲ?:
ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡರಿಗೆ ಅವರ ತಂದೆಯ ವರ್ಚಸ್ಸು, ಜತೆಗೆ ಅನುಕಂಪ ಎರಡೂ ಸಕಾರಾತ್ಮಕವಾಗಿವೆ. ಅಲ್ಲದೆ, ಜೆಡಿಎಸ್ ಕೂಡ ಬೆಂಬಲ ಇರುವುದರಿಂದ ಸಹಜವಾಗಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜತೆಗೆ ಇನ್ನಷ್ಟುಮತಗಳು ವರದಾನವಾಗಿ ಬರಲಿವೆ. ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಇವರ ಜತೆಗೆ ಸಿದ್ದರಾಮಯ್ಯ ಪರಮಾಪ್ತ, ಪ್ರಬಲ ಕುರುಬ ಪಂಗಡಕ್ಕೆ ಸೇರಿದ ಶ್ರೀಶೈಲ ದಳವಾಯಿ ಕೂಡ ಆನಂದ ಜತೆ ಪ್ರಚಾರ ಕಾರ್ಯದಲ್ಲೂ ತೊಡಗಿದ್ದಾರೆ. ಹೀಗಾಗಿ ಕೈ ಅಭ್ಯರ್ಥಿಗೆ ಮತ್ತಷ್ಟುಬಲ ಬಂದಂತಾಗಿದೆ.
ಶ್ರೀಕಾಂತ ಪರವೂ ಅನುಕಂಪ:
ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಸತತವಾಗಿ (2013, 2018) ಎರಡು ಬಾರಿ ಪರಾಭವಗೊಂಡಿದ್ದಾರೆ. ಹೀಗಾಗಿ ಕ್ಷೇತ್ರದ ಮತದಾರರಲ್ಲಿ ಅವರ ಪರವಾಗಿಯೂ ಅನುಕಂಪ ಇರದೇ ಇರದು. ಬಿಜೆಪಿ ರಾಜ್ಯ ನಾಯಕರ ಪ್ರಭಾವ, ಪ್ರಚಾರ ಅಭ್ಯರ್ಥಿಗೆ ವರದಾನವಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ಕುಲಕರ್ಣಿ ಸಮರ್ಥತೆಯನ್ನು ತೋರ್ಪಡಿಸುತ್ತಿದ್ದಾರೆ.
ಜಾತಿ ಲೆಕ್ಕಾಚಾರ:
ಜಮಖಂಡಿ ಮತಕ್ಷೇತ್ರದಲ್ಲಿ ಒಟ್ಟು 2,03,681 ಮತದಾರರಿದ್ದಾರೆ. ಈ ಪೈಕಿ 1,02,216 ಪುರುಷರು ಹಾಗೂ 1,01,460 ಮಹಿಳಾ ಹಾಗೂ 5 ‘ಇತರೆ’ ಮತದಾರರಿದ್ದಾರೆ. ಈ ಪೈಕಿ 80 ಸಾವಿರಕ್ಕೂ ಅಧಿಕ ವೀರಶೈವ ಲಿಂಗಾಯತ ಮತದಾರರೇ ಇದ್ದಾರೆ. ಈ ಪೈಕಿ ಗಾಣಿಗ, ಪಂಚಮಸಾಲಿ ಮತದಾರರೇ ಅತ್ಯಧಿಕ.
ಗಾಣಿಗ ಸಮಾಜಕ್ಕೆ ಸೇರಿದ ಆನಂದ ನ್ಯಾಮಗೌಡ ಅವರು ಅತಿ ಹೆಚ್ಚು ಮತ ಸೆಳೆಯುವುದರಲ್ಲಿ ಅನುಮಾನವಿಲ್ಲ. ಇದರ ಜತೆಗೆ 30 ಸಾವಿರ ಎಸ್‌ಸಿ, ಎಸ್‌ಟಿ ಹಾಗೂ 19 ಸಾವಿರ ಕುರುಬ ಮತದಾರರಿದ್ದಾರೆ. ಜತೆಗೆ 20 ಸಾವಿರ ಮುಸ್ಲಿಂ ಮತಗಳಿದ್ದು, ಕಾಂಗ್ರೆಸ್‌ಗೆ ಹೆಚ್ಚು ವರವಾಗುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ವೀರಶೈವ-ಲಿಂಗಾಯತ ಧರ್ಮ ವಿಭಜನೆ ಕುರಿತು ಇತ್ತೀಚೆಗೆ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕಾಂಗ್ರೆಸ್‌ಗೆ ಅಲ್ಪ ಪ್ರಮಾಣದ ಹೊಡೆತ ಬೀಳುವುದರಲ್ಲಿ ಅಚ್ಚರಿ ಇಲ್ಲ ಎನ್ನುವಂತಾಗಿದೆ.
ಆದರೆ ಜಿಪಂ ಮಾಜಿ ಉಪಾಧ್ಯಕ್ಷ, ಜೈನ ಧರ್ಮಕ್ಕೆ ಸೇರಿದ ಮುಖಂಡ ಸುಶೀಲಕುಮಾರ್ ಬೆಳಗಲಿ ಅವರು ಕ್ಷೇತ್ರದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆ ಧರ್ಮದ 10 ಸಾವಿರ ಮತದಾರರು ಯಾರತ್ತ ವಾಲುತ್ತಾರೆ ಎಂಬುವುದು ಕೂಡ ಕುತೂಹಲಕರ.
ಬಿಜೆಪಿ ಕೂಡ ಹೆಚ್ಚಾಗಿ ವೀರಶೈವ-ಲಿಂಗಾಯತ ಮತಗಳನ್ನೇ ನೆಚ್ಚಿಕೊಂಡಿದ್ದು, ಅದರಲ್ಲಿ ಯಶಸ್ಸು ಕಾಣುವುದರಲ್ಲಿ ಅನುಮಾನವೇ ಇಲ್ಲ. ಇದರ ಜತೆಗೆ 8ರಿಂದ 10 ಸಾವಿರ ಮರಾಠ ಮತಗಳು, 5 ಸಾವಿರಕ್ಕಿಂತ ಅಧಿಕವಾಗಿರುವ ಬ್ರಾಹ್ಮಣ ಮತಗಳು ಬಿಜೆಪಿಗೆ ಮತವಾಗಿ ಪರಿವರ್ತನೆಯಾಗುವುದರಲ್ಲಿ ಅನುಮಾನವೇ ಇಲ್ಲ. ಕಳೆದ ಬಾರಿ ಸಂಗಮೇಶ ನಿರಾಣಿ ಅವರು ಸಾಂಪ್ರದಾಯಿಕ ಮತಗಳಲ್ಲದೆ ಕಾಂಗ್ರೆಸ್‌ನ ಕೆಲವು ಮತಗಳನ್ನು ಪಡೆದಿದ್ದರು. ಈ ಬಾರಿ ಆ ಮತಗಳು ಕೂಡ ಬಿಜೆಪಿ ಅಭ್ಯರ್ಥಿಗೆ ಶಕ್ತಿ ತುಂಬಬಲ್ಲದು.
ಕಣದಲ್ಲಿರುವ ಅಭ್ಯರ್ಥಿಗಳು ಪಕ್ಷ
1.ಆನಂದ ನ್ಯಾಮಗೌಡ ಕಾಂಗ್ರೆಸ್
2.ಶ್ರೀಕಾಂತ ಕುಲಕರ್ಣಿ ಬಿಜೆಪಿ
3.ಪರಶುರಾಮ ಮಹಾರಾಜನವರ ಪ್ರಜಾ ಪರಿವರ್ತನಾ ಪಾರ್ಟಿ
4.ಯಮನಪ್ಪ ಗುಣದಾಳ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ
5.ಆ್ಯಂಬ್ರೋಸ್ ಡಿ ಮೆಲ್ಲೊ ಪಕ್ಷೇತರ
6.ರವಿ ಶಿವಪ್ಪ ಪಡಸಲಗಿ ಪಕ್ಷೇತರ
7.ಸಂಗಮೇಶ ಚಿಕ್ಕನರಗುಂದ ಪಕ್ಷೇತರ
ಮತದಾರರ ಸಂಖ್ಯೆ
ಒಟ್ಟು ಮತದಾರರು-2,03,681
ಪುರುಷರು-1,02,216
ಮಹಿಳೆಯರು-1,01,460
ಇತರೆ-05