ಬೆಳಗಾವಿ: ಜೈಲಧಿಕಾರಿಗಳಿಂದಲೇ ನನ್ನ ಮಗನ ಹತ್ಯೆಗೆ ಯತ್ನ, ಕೈದಿ ತಾಯಿ ಆರೋಪ
ಮಗನ ಸ್ಥಿತಿ ಗಂಭೀರವಾಗಿದೆ. ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ನನ್ನ ಮಗ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದರೂ ಐಸಿಯುವಿಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸುತ್ತಿಲ್ಲ. ಜೊತೆಗೆ ಭೇಟಿಗೂ ಅವಕಾಶ ನೀಡುತ್ತಿಲ್ಲ. ಮಗನ ಸ್ಥಿತಿ ಗಂಭೀರ ಇದ್ದರೂ ಜೈಲು ಅಧಿಕಾರಿಗಳು ನಮಗೆ ಏನೂ ಹೇಳಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ನೋಡಿ, ನಾವು ಮಗನ ಭೇಟಿಗೆ ಬಂದಿದ್ದೇವೆ ಎಂದು ಕಣ್ಣೀರು ಹಾಕಿದ ಕೈದಿ ಸಾಯಿಕುಮಾರ ತಾಯಿ ಪುಟ್ಟತಾಯಮ್ಮ
ಬೆಳಗಾವಿ(ಆ.04): ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಜೈಲಿನ ಅಧಿಕಾರಿಗಳೇ ನನ್ನ ಮಗನನ್ನು ಹತ್ಯೆ ಮಾಡಿಸಲು ಯತ್ನಿಸಿದ್ದಾರೆ ಎಂದು ಕೈದಿ ಸಾಯಿಕುಮಾರ ತಾಯಿ ಪುಟ್ಟತಾಯಮ್ಮ ಆರೋಪಿಸಿದರು.
ಜು.29ರಂದು ಇಬ್ಬರು ಕೈದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಮಂಡ್ಯದ ಸಾಯಿಕುಮಾರ ಆರೋಗ್ಯ ವಿಚಾರಣೆಗೆ ತಾಯಿ ಸೇರಿದಂತೆ ಆತನ ಕುಟುಂಬಸ್ಥರು ಬೆಳಗಾವಿಗೆ ಆಗಮಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟತಾಯಮ್ಮ, ನನ್ನ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಜೈಲಿನ ಅವ್ಯವಹಾರಗಳು ಗೊತ್ತಾಗಿದ್ದಕ್ಕೆ ಅಧಿಕಾರಿಗಳಿಂದಲೇ ನನ್ನ ಮಗನನ್ನು ಕೊಲ್ಲಿಸಲು ಯತ್ನಿಸಲಾಗಿದೆ ಎಂದು ದೂರಿದರು.
ಸೌಜನ್ಯ ಹತ್ಯೆ ಕೇಸ್‌ನಲ್ಲಿ ಡಾ.ಹೆಗ್ಗಡೆ ಹೆಸರು ಕೆಡಿಸುವ ಹುನ್ನಾರ: ಸಿದ್ದಸೇನ ಮುನಿ ಮಹಾರಾಜರು
ಶಂಕರ ಭಜಂತ್ರಿ ಎಂಬಾತ ನನ್ನ ಮಗ ಸಾಯಿಕುಮಾರ ಮೇಲೆ ಸ್ಕೂ್ರಡ್ರೈವರ್‌ನಿಂದ ಐದು ಬಾರಿ ಚುಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಜೈಲಿನಲ್ಲಿ ಸ್ಕೂ್ರಡ್ರೈವರ್ ಹೇಗೆ ಬಂತು? ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಲು ಏಕೆ ಯತ್ನಿಸಿದ್ದಾರೆ? ಈಗ ಕೊಲೆಗೆ ಯತ್ನಿಸಿದ ಕೈದಿ ಮಾನಸಿಕ ಅಸ್ವಸ್ಥನಾಗಿದ್ದಾನೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಆತ ಮಾನಸಿಕ ಅಸ್ವಸ್ಥನಾಗಿದ್ದರೆ ಸೆಲ್‌ನಲ್ಲಿ ಏಕೆ ಬಿಟ್ಟಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಮಗನ ಸ್ಥಿತಿ ಗಂಭೀರವಾಗಿದೆ. ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ನನ್ನ ಮಗ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದರೂ ಐಸಿಯುವಿಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸುತ್ತಿಲ್ಲ. ಜೊತೆಗೆ ಭೇಟಿಗೂ ಅವಕಾಶ ನೀಡುತ್ತಿಲ್ಲ. ಮಗನ ಸ್ಥಿತಿ ಗಂಭೀರ ಇದ್ದರೂ ಜೈಲು ಅಧಿಕಾರಿಗಳು ನಮಗೆ ಏನೂ ಹೇಳಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ನೋಡಿ, ನಾವು ಮಗನ ಭೇಟಿಗೆ ಬಂದಿದ್ದೇವೆ ಎಂದು ಕಣ್ಣೀರು ಹಾಕಿದರು. ಕೈದಿ ಸಾಯಿಕುಮಾರ ಗಾಯಗೊಂಡು ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.