*    ಪರ್ಯಾಯ ರೀತಿಯಲ್ಲಿ ಅನುಷ್ಠಾನ*   ಮಧ್ಯಪ್ರದೇಶ, ಆಂಧ್ರ ಪ್ರದೇಶ ಮಾದರಿ ಜಾರಿ*   ಚೇಂಬರ್‌ ನಿರ್ಮಿಸಿ, ರೈತರ ತಮ್ಮ ಹೊಲಕ್ಕೆ ಪೂರೈಸಿಕೊಳ್ಳುವ ಯೋಜನೆ ಜಾರಿಗೆ ಚಿಂತನೆ 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಅ.11): ರಾಜ್ಯ ಹಾಗೂ ದೇಶದಾದ್ಯಂತ ಬಹುತೇಕ ಹನಿ ನೀರಾವರಿ ಯೋಜನೆಗಳು ವೈಫಲ್ಯ ಕಂಡಿರುವ ಹಿನ್ನೆಲೆಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ(Singatalur Drip Irrigation) ಹನಿ ನೀರಾವರಿಯನ್ನೇ ರಾಜ್ಯ ಸರ್ಕಾರ(State Government) ಕೈಬಿಡಲು ಚಿಂತನೆ ನಡೆಸಿದೆ. ಇದಕ್ಕಾಗಿಯೇ ಪರ್ಯಾಯ ಯೋಜನೆಯನ್ನು ಸಹ ರೂಪಿಸುತ್ತಿದೆ.

ಇದರಿಂದ ರೈತರ(Farmers) ಹಕ್ಕೊತ್ತಾಯಕ್ಕೆ ಬೆಲೆ ಸಿಕ್ಕಂತೆ ಆಗಿದ್ದು, ಬಹುದಿನಗಳಿಂದ ನಡೆಯುತ್ತಿದ್ದ ಸರಣಿ ಹೋರಾಟಕ್ಕೂ ಸರ್ಕಾರ ಮಾನ್ಯತೆ ನೀಡಿದಂತೆ ಆಗಿದೆ. ಆದರೆ, ಇದಿನ್ನು ಶೈಶಾವಸ್ಥೆಯಲ್ಲಿಯೇ ಇದ್ದು, ಬೇಗನೆ ಪರ್ಯಾಯ ಯೋಜನೆ ಕಾರ್ಯಗತವಾಗಬೇಕಾಗಿದೆ.

ಯೋಜನೆ(Plan) ಲೋಕಾರ್ಪಣೆಗೊಂಡು 9 ವರ್ಷಗಳು ಪೂರ್ಣಗೊಂಡಿವೆ. ಇಷ್ಟಾದರೂ ಎಡಭಾಗದಲ್ಲಿ ಒಂದು ಎಕರೆ ಭೂಮಿಯೂ ನೀರಾವರಿಯಾಗುತ್ತಿಲ್ಲ. ಹನಿ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ಮಾಡಿದ ಫೈಲಟ್‌ ಯೋಜನೆಯೂ ಮಣ್ಣುಪಾಲಾಗಿದೆ. 3 ಸಾವಿರ ಕೋಟಿ ಖರ್ಚು ಮಾಡಿದರೂ ಹನಿ ನೀರು ರೈತರ ಭೂಮಿಗೆ ತಲುಪಿಲ್ಲ. ಮಾಡಿದ್ದಕ್ಕೆ ಸಾಕ್ಷಿಗೂ ಒಂದು ಹನಿ ನೀರಾವರಿ ಪೈಪ್‌ ಇಲ್ಲ.

ಬಳ್ಳಾರಿ: ಕಿತ್ತು ಹೋದ ಸಿಂಗಟಾಲೂರು ಏತ ನೀರಾವರಿ ಕಾಲುವೆಗಳಿಗೆ ಮುಕ್ತಿ ಎಂದು?

ಎಚ್ಚೆತ್ತ ಸರ್ಕಾರ:

ಈಗ ಇದರಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ಮಧ್ಯಪ್ರದೇಶ(Madhya Pradesh) ಮತ್ತು ಆಂಧ್ರ ಪ್ರದೇಶದಲ್ಲಿ(Andhra Pradesh) ಮಾಡಿರುವ ನೀರಾವರಿ(Irrigation) ಮಾದರಿಯನ್ನೇ ಇಲ್ಲಿಯೂ ಅನುಷ್ಠಾನ ಮಾಡಲು ಮುಂದಾಗಿದೆ. ಇದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಹಾವೇರಿ(Haveri) ಜಿಲ್ಲೆಯಲ್ಲಿಯೂ ಹನಿ ನೀರಾವರಿ ಯಶಸ್ವಿಯಾಗಿಲ್ಲವಾದ್ದರಿಂದ ಸಿಂಗಟಾಲೂರು ಏತನೀರಾವರಿ ಯೋಜನೆಯನ್ನು ಪರ್ಯಾಯ ರೀತಿಯಲ್ಲಿಯೇ ಅನುಷ್ಠಾನ ಮಾಡಬೇಕು ಎಂದು ಸರ್ಕಾರ ಮುಂದಾಗಿದೆ.

ಮೊದಲು ಕಾಲುವೆ ಯೋಜನೆ:

ಸಿಂಗಟಾಲೂರು ಏತನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡುವ ವೇಳೆಯಲ್ಲಿ ಕಾಲುವೆ ನೀರಾವರಿ ಯೋಜನೆಯನ್ನೇ ರೂಪಿಸಲಾಗಿದೆ. ಬಲಭಾಗದಲ್ಲಿ ಬಳ್ಳಾರಿ(Ballari) ಜಿಲ್ಲೆಯ ಹೂವಿನಹಡಗಲಿಯಲ್ಲಿ ಕಾಲುವೆ ನೀರಾವರಿಯನ್ನೇ ಮಾಡಲಾಗಿದೆ. ಆದರೆ, ಎಡಭಾಗದಲ್ಲಿ ಮಾತ್ರ ಅದನ್ನು ಹನಿನೀರಾವರಿ ಯೋಜನೆಯಾಗಿ ಪರಿವರ್ತನೆ ಮಾಡಿ, ಅನುಷ್ಠಾನ ಮಾಡುವ ಕಾರ್ಯ ಕುಂಟುತ್ತಾ, ತೆವಳುತ್ತಾ ಸಾಗಿದೆ. ಅದನ್ನು ಕೈಬಿಟ್ಟು ಈಗ ಪರ್ಯಾಯ ಯೋಜನೆ ರೂಪಿಸಲಾಗುತ್ತಿದೆ.

ಏನಿದು ಪರ್ಯಾಯ ಯೋಜನೆ?:

ಕಾಲುವೆ ಮೂಲಕವೂ ನೀರಾವರಿಯಲ್ಲ ಮತ್ತು ಹನಿ ನೀರಾವರಿಯೂ ಅಲ್ಲ. ಇದು ಹೊಸ ರೀತಿಯ ಯೋಜನೆಯಾಗಿದೆ. ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಗೊತ್ತುಮಾಡಿರುವ ಪ್ರದೇಶದಲ್ಲಿ ಚೆಂಬರ್‌ಗಳನ್ನು ಕೂಡ್ರಿಸಲಾಗುತ್ತದೆ. ಅಲ್ಲಿಂದ ರೈತರೇ ತಮ್ಮ ಹೊಲಗಳಿಗೆ ನೀರು ತೆಗೆದುಕೊಂಡು ಹೋಗಬೇಕು. ಇದರಿಂದ ನೀರು ಉಳಿತಾಯವಾಗುತ್ತದೆ ಮತ್ತು ರೈತರೇ ವೈಯಕ್ತಿಕ ಉಸ್ತುವಾರಿ ಮಾಡಿಕೊಳ್ಳುವುದರಿಂದ ಹಾಳಾಗುವುದಿಲ್ಲ ಎನ್ನುವ ಲೆಕ್ಕಾಚಾರ.

100 ಎಕರೆಗೊಂದು ಚೇಂಬರ್‌ ನಿರ್ಮಾಣ ಮಾಡಿ, ಅಲ್ಲಿಗೆ ಏತ ನೀರಾವರಿಯ ನೀರು ಪೂರೈಕೆ ಮಾಡಿ ಸಂಗ್ರಹ ಮಾಡುವುದು. ಅಲ್ಲಿಂದ ವೈಯಕ್ತಿಕವಾಗಿ ರೈತರು ತಮ್ಮ ಹೊಲಗಳಿಗೆ ನೀರು ಪೂರೈಕೆ ಮಾಡಿಕೊಳ್ಳಬೇಕು ಎನ್ನುವ ಯೋಜನೆ ಪ್ರಾಥಮಿಕ ಹಂತದಲ್ಲಿ ಈಗತಾನೆ ಸಿದ್ಧವಾಗುತ್ತಿದೆ. ಇದರಲ್ಲಿ ಇನ್ನು ಹಲವಾರು ರೀತಿಯಲ್ಲಿ ಮಾರ್ಪಾಡು ಮಾಡಲಾಗುತ್ತಿದ್ದು, ಉನ್ನತಮಟ್ಟದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಗದಗ: ಹನಿ ನೀರಾವರಿ ಪೈಪ್‌ಗಳೀಗ ರೈತರ ಹೊಲಕ್ಕೆ ಬೇಲಿ..!

ತಗ್ಗಲಿರುವ ವ್ಯಾಪ್ತಿ:

ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ ಮೊದಲು ಕಾಲುವೆ ಮೂಲಕ ನೀರಾವರಿ ಯೋಜನೆಯಲ್ಲಿ ಸುಮಾರು 1 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಯೋಜನೆ ರೂಪಿಸಲಾಗಿತ್ತು. ಇದಾದ ಮೇಲೆ ಹನಿ ನೀರಾವರಿ ಯೋಜನೆಯನ್ನು ಸಿದ್ಧ ಮಾಡಿದಾಗ 2.65 ಲಕ್ಷ ಎಕರೆ ಪ್ರದೇಶ ನೀರಾವರಿ ಕಲ್ಪಿಸುವ ಯೋಜನೆ ರೂಪಿಸಲಾಯಿತು. ಆದರೆ, ಇದನ್ನು ಈಗ ಪರ್ಯಾಯ ಯೋಜನೆಯಡಿ ನಿರ್ಮಾಣಕ್ಕೆ ಮುಂದಾಗಿರುವುದರಿಂದ ನೀರಾವರಿ ವ್ಯಾಪ್ತಿ ತಗ್ಗಲಿದೆ. ಶೇ. 30-40ರಷ್ಟು ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಈಗಾಗಲೇ ಹಲವಾರು ಕಡೆ ಹನಿ ನೀರಾವರಿ ಯೋಜನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗದೆ ಇರುವುದರಿಂದ ಉನ್ನತಮಟ್ಟದಲ್ಲಿ ಪರ್ಯಾಯ ರೀತಿಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ಆದಷ್ಟು ಬೇಗನೆ ರೈತರ ಭೂಮಿಗೆ ನೀರು ಕೊಡುವ ಪ್ರಯತ್ನ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ತಿಳಿಸಿದ್ದಾರೆ.

ಸಿಂಗಟಾಲೂರು ಏತನೀರಾವರಿ ಯೋಜನೆ ಅನುಷ್ಠಾನಕ್ಕಾಗಿಯೇ ನಾನು ಪಕ್ಷ ಬದಲಾಯಿಸಿದ್ದೇನೆ. ಈಗ ಸಬೂಬ ಹೇಳುವುದಿಲ್ಲ ಮತ್ತು ಈ ಕುರಿತ ಪ್ರಶ್ನೆಯನ್ನು ನಾನು ಅಲ್ಲಗಳೆಯುವುದಿಲ್ಲ. ಮಧ್ಯಪ್ರದೇಶ ಮತ್ತು ಆಂಧ್ರ ಪ್ರದೇಶದಲ್ಲಿ ಈಗಾಗಲೇ ಮಾಡಿರುವಂತೆ ಚೇಂಬರ್‌ ಮೂಲಕ ನೀರು ಕೊಡುವ ಪರ್ಯಾಯ ಯೋಜನೆ ಶೀಘ್ರ ಜಾರಿ ಮಾಡುವ ಪ್ರಯತ್ನ ನಡೆದಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ(Sangannna Karadi) ಹೇಳಿದ್ದಾರೆ.

ಹನಿ ನೀರಾವರಿ ಯೋಜನೆ ಯಶಸ್ವಿಯಾಗುವುದಿಲ್ಲ ಎಂದೇ ಈಗಾಗಲೇ 16 ಕೆರೆ ತುಂಬಿಸುವ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಆ ಮೂಲಕ ನೀರು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ(Raghavendra Hitnal) ತಿಳಿಸಿದ್ದಾರೆ.