ಹುಕ್ಕೇರಿ: ಚರಂಡಿ ನೀರು ಶುದ್ಧಿಗೆ ಇನ್‌ಲೈನ್ ಟ್ರೀಟ್‌ಮೆಂಟ್..!
ಸ್ವಚ್ಛ ಭಾರತ ಮಿಷನ್, ನರೇಗಾ ಹಾಗೂ 15ನೇ ಹಣಕಾಸು ಯೋಜನೆಗಳಡಿ ಈ ವೈಜ್ಞಾನಿಕ ಮಾದರಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ಈಗಾಗಲೇ ಹುಕ್ಕೇರಿ ತಾಲೂಕಿನ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇನ್‌ಲೈನ್ ಮಾದರಿ ಅಳವಡಿಸಲಾಗಿದೆ.
ರವಿ ಕಾಂಬಳೆ
ಹುಕ್ಕೇರಿ(ನ.04): ನದಿ ಮೂಲಗಳಿಗೆ ಸೇರುವ ಕೊಳಚೆ ನೀರು ಶುದ್ಧೀಕರಿಸುವ ಬೂದು ನೀರು (ಎಲ್‌ಡಬ್ಲ್ಯೂಎಂ) ನಿರ್ವಹಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುಕ್ಕೇರಿ ತಾಲೂಕಿನಲ್ಲಿ ಹೊಸ ಮಾದರಿ ಅನುಷ್ಠಾನ ಕೈಗೆತ್ತಿಕೊಂಡಿದೆ. ತಾಲೂಕಿನ 52 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊಳಚೆ ನೀರು ನಿರ್ವಹಿಸಲು ವಿಶೇಷ ಕ್ರಿಯಾಯೋಜನೆ ರೂಪಿಸಿದ್ದು, ಇದಕ್ಕಾಗಿ ಸುಮಾರು ₹10 ಕೋಟಿ ಕಾಯ್ದಿರಿಸಲಾಗಿದೆ. ನದಿ ಮೂಲಗಳಿಗೆ ಸೇರುವ ತ್ಯಾಜ್ಯ ನೀರನ್ನು ಶುದ್ಧೀಕರಿಸಲು ಇನ್‌ಲೈನ್ ಟ್ರೀಟ್‌ಮೆಂಟ್ ಮಾದರಿಯ ಚರಂಡಿ ನಿರ್ಮಾಣ ಕಾಮಗಾರಿಗಳು ಸಮರೋಪಾದಿಯಲ್ಲಿ ಸಾಗಿವೆ.
ಸ್ವಚ್ಛ ಭಾರತ ಮಿಷನ್, ನರೇಗಾ ಹಾಗೂ 15ನೇ ಹಣಕಾಸು ಯೋಜನೆಗಳಡಿ ಈ ವೈಜ್ಞಾನಿಕ ಮಾದರಿಯನ್ನು ಅನುಷ್ಠಾನಕ್ಕೆ ತರಲಾಗಿದೆ. ಈಗಾಗಲೇ ಹುಕ್ಕೇರಿ ತಾಲೂಕಿನ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇನ್‌ಲೈನ್ ಮಾದರಿ ಅಳವಡಿಸಲಾಗಿದೆ.
ಗ್ರಾಹಕರೇ ಎಚ್ಚರದಿಂದಿರಿ... ಪೂರೈಕೆಯಾಗುತ್ತಿದೆ ಕಲಬೆರಕೆ ಹಾಲು..!
ಈ ವಿಶೇಷ ಮಾದರಿಯ ಚರಂಡಿ ನಿರ್ಮಾಣ ಕಾರ್ಯದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಎಂಜನಿಯರಿಂಗ್ ಉಪವಿಭಾಗ ಹಾಗೂ ಗ್ರಾಪಂಗಳು ತೊಡಗಿಸಿಕೊಂಡಿವೆ. ತನ್ಮೂಲಕ ಗ್ರಾಮೀಣ ಪರಿಸರ ಶುದ್ಧವಾಗಿಟ್ಟುಕೊಂಡು ನೈರ್ಮಲ್ಯ ಕಾಪಾಡುವುದರ ಜೊತೆಗೆ ಜಲಮೂಲಗಳ ಸ್ಚಚ್ಛತೆಗೆ ಮಹತ್ವದ ಹೆಜ್ಜೆ ಇಟ್ಟಂತಾಗಿದೆ.
ಬಹುನಿರೀಕ್ಷಿತ ಸ್ವಚ್ಛ ಭಾರತ ಮಿಷನ್ ಅಡಿ ಮೊದಲ ಹಂತದಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ಇದೀಗ 2ನೇ ಹಂತದಲ್ಲಿ ಕೊಳಚೆ ನೀರು ನಿರ್ವಹಿಸಲು ಪಣ ತೊಟ್ಟಿದೆ. ಮಹತ್ವಾಕಾಂಕ್ಷಿ ಎಲ್‌ಡಬ್ಲ್ಯೂಎಂ ಯೋಜನೆ ಗ್ರಾಮೀಣ ಜನರಲ್ಲಿ ಸ್ವಚ್ಛತೆ ಅರಿವು ಮೂಡಿಸಲು ನೆರವಾಗಲಿದೆ ಎಂಬ ಉದ್ದೇಶ ಹೊಂದಲಾಗಿದೆ.
ಗುಡಸ, ಸಾರಾಪುರ, ಚಿಕ್ಕಾಲಗುಡ್ಡ, ಗೋಟೂರ, ಕೊಟಬಾಗಿ, ಮದಮಕ್ಕನಾಳ, ಕೋಚರಿ, ಮಣಗುತ್ತಿ, ಯರನಾಳ, ಹೊಸೂರ, ರಕ್ಷಿ, ಶೇಲಾಪುರ ಮತ್ತಿತರ ಹಳ್ಳಿಗಳಲ್ಲಿ ಇನ್‌ಲೈನ್ ಟ್ರೀಟ್‌ಮೆಂಟ್ ಮಾದರಿಯ ಚರಂಡಿ ನಿರ್ಮಾಣವಾಗಿವೆ. ಇನ್ನುಳಿದ ಹಳ್ಳಿಗಳಲ್ಲಿ ಭರದಿಂದ ಕಾಮಗಾರಿಗಳು ಪ್ರಗತಿಯಲ್ಲಿವೆ.
ಗ್ರಾಮೀಣ ಭಾಗದಲ್ಲಿ ಮನೆ ಹಾಗೂ ಸಣ್ಣ ಕೈಗಾರಿಕಾ ಘಟಕಗಳಿಂದ ಉತ್ಪತ್ತಿಯಾಗುವ ಕೊಳಚೆ ನೀರು ಸಂಸ್ಕರಣೆಯಾಗದೆ ನೇರವಾಗಿ ನದಿ ಮೂಲಗಳಿಗೆ ಸೇರುತ್ತಿದೆ. ಇದರಿಂದ ನದಿ ಮೂಲಗಳು ಮಲೀನಗೊಳ್ಳುವ ಜತೆಗೆ ಜಲಚರಗಳು ಅಪಾಯಕ್ಕೆ ಸಿಲುಕುತ್ತಿವೆ. ಇನ್‌ಲೈನ್ ವಿಧಾನ ಅನುಷ್ಠಾನದಿಂದ ದುಸ್ಥಿತಿಯಲ್ಲಿರುವ ಚರಂಡಿಗಳು ಹೊಸ ರೂಪ ಪಡೆಯಲಿವೆ. ಅದರ ಜೊತೆಗೆ ಗ್ರಾಮೀಣ ಜನರಿಗೆ ತ್ಯಾಜ್ಯ ವಿಲೇವಾರಿ ಬಗ್ಗೆ ಅರಿವು ಮೂಡಿಸುವುದು ಕೂಡ ಯೋಜನೆಯ ಉದ್ದೇಶವಾಗಿದೆ.
ಬೆಳಗಾವಿ: ಗಂಡನಿಗೆ ಚಟ್ಟಕಟ್ಟಿ ಜೈಲು ಪಾಲಾದ ಪತ್ನಿ, ಮಕ್ಕಳಿಬ್ಬರು ಅನಾಥ..!
ಏನಿದು ಎಲ್‌ಡಬ್ಲ್ಯೂಎಂ?
ಗ್ರಾಮದಿಂದ ಚರಂಡಿ ಮೂಲಕ ಹರಿದು ಬರುವ ಕಸ, ತ್ಯಾಜ್ಯ ಹಾಗೂ ಕಲುಷಿತ ನೀರನ್ನು ಹಂತ ಹಂತವಾಗಿ ಶುದ್ಧೀಕರಿಸಲು ಚರಂಡಿಗೆ ವೈಜ್ಞಾನಿಕ ಇಂಗುಗುಂಡಿ ಹಾಗೂ ಕಬ್ಬಿಣದ ಮೆಶ್ ಅಳವಡಿಸಲಾಗುತ್ತದೆ. ಇದು ಕಸವನ್ನು ತಡೆದು, ಶೇಖರಣೆ ಮಾಡುವುದರ ಜತೆಗೆ ನೀರು ಭೂಮಿಯಲ್ಲಿ ಇಂಗಲು ಸಹಕಾರಿಯಾಗುತ್ತದೆ. ಮೆಶ್‌ನಲ್ಲಿ ಶೇಖರಣೆಗೊಂಡ ಕಸ ವಿಲೇವಾರಿ ಮಾಡಲು ಸ್ಥಳೀಯ ಸ್ವಚ್ಛತಾ ಸಿಬ್ಬಂದಿಗೆ ಅನುಕೂಲವಾಗಲಿದೆ.
ಹುಕ್ಕೇರಿ ತಾಲೂಕಿನಾದ್ಯಂತ ಎಲ್‌ಡಬ್ಲ್ಯೂಎಂ ಯೋಜನೆ ತ್ವರಿತಗತಿಯಲ್ಲಿ ಜಾರಿಗೊಳಿಸಲಾಗುತ್ತಿದೆ. ಹಳ್ಳಿಗಳ ಸ್ವಚ್ಛ ಪರಿಸರ, ಸದೃಢ ಆರೋಗ್ಯ ಸ್ಥಿತಿ ಕಾಪಾಡಲು ಈ ಯೋಜನೆ ನೆರವಾಗಲಿದೆ. ಹಳ್ಳಿಗಳ ಅಭಿವೃದ್ಧಿ ಮತ್ತು ನದಿ ಮೂಲಗಳ ಜೀವಂತಿಕೆ ಕಾಪಾಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಎಇಇ ಆರ್‌ಡಿಡಬ್ಲ್ಯೂಎಸ್ ವಿಜಯ ಮಿಶ್ರಿಕೋಟಿ ತಿಳಿಸಿದ್ದಾರೆ.