ಗುರುರಾಜ ವಾಳ್ವೇಕರ 

ಜಮಖಂಡಿ:(ಸೆ.26) ಮಳೆ ನಿಂತರು ಮಳೆ ಹನಿ ನಿಲ್ಲದು ಎಂಬ ಮಾತಿನಂತೆ ಪ್ರವಾಹ ಬಂದು ಜನರ ಬದುಕು ಕಸಿದುಕೊಂಡು ಹೋದ ಮೇಲೂ ಜನರ ಕಷ್ಟಗಳು ಮಾತ್ರ ನಿಂತಿಲ್ಲ. ಇದರೊಟ್ಟಿಗೆ ಇವರಿಗೆ ಇದೀಗ ರೋಗಗಳ ಕಾಟ ಬೇರೆ. ಇದರಿಂದ ನೆರೆ ಸಂತ್ರಸ್ತರು ಕಂಗಾಲಾಗಿದ್ದಾರೆ.

ಕೃಷ್ಣಾ ನದಿ ಪ್ರವಾಹದಿಂದ ತಾಲೂಕಿನ 23 ಗ್ರಾಮಗಳಲ್ಲಿ ನೀರು ಹೋಗಿ ಕೆಲವು ದಿನಗಳಿಂದ ಕೃಷ್ಣಾ ನದಿಯಲ್ಲೂ ನೆರೆ ಇಳಿದಿದೆ. ಆದರೆ, ಆಗಾಗ ಬೀಳುತ್ತಿರುವ ತುಂತುರು ಅಥವಾ ಸಾಧಾರಣ ಮಳೆಯಿಂದಾಗಿ ವಾತಾವರಣದಲ್ಲಿ ವೈಪರೀತ್ಯ ಕಂಡು ಬರುತ್ತಿದೆ. ಅತ್ತ ಬಿಸಿಲೂ ಇಲ್ಲದ, ಇತ್ತ ಚಳಿಯೂ ಅಲ್ಲದ, ಜೋರು ಮಳೆ ಬೀಳದಂತಹ ಮೋಡ ಮುಸುಕಿದ ಹವಾಮಾನದಿಂದಾಗಿ ದಿನದಿಂದ ದಿನಕ್ಕೆ ತಾಲೂಕಿನಲ್ಲಿ ಅನಾರೋಗ್ಯಗಳು ಕಾಣಿಸಿಕೊಳ್ಳುತ್ತಿವೆ. 
ಪ್ರವಾಹಬಾಧಿತ ಪ್ರದೇಶಗಳಲ್ಲಿ ಸಾವಿರಾರು ಮಂದಿ ವೈರಲ್‌ ಜ್ವರದಿಂದ ಹೈರಾಣು ಮಾಡುತ್ತಿದೆ. ತಲೆನೋವು, ಮೂಗು ಕಟ್ಟುವುದು, ಮೈಕೈ ನೋವು, ನೆಗಡಿ, ಕೆಮ್ಮು, ವಾಂತಿಭೇದಿ, ಗಂಟಲು ಉರಿ, ಕಣ್ಣು ಉರಿ ಮೊದಲಾದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ.

ವಿಪರೀತವಾಗಿ ಕಾಡುತ್ತಿವೆ ಸೊಳ್ಳೆಗಳು:

ಈ ಬಗ್ಗೆ ಮಾತನಾಡಿದ ಆಲಗೂರು ಗ್ರಾಮದ ಪ್ರಗತಿಪರ ರೈತ ರಾಜೂ ಪೋತರಾಜ್‌ ಅವರು, ಪ್ರವಾಹ ಬಂದಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ನೀರು ನಿಂತಿವೆ. ಹೀಗಾಗಿ ಈ ರೀತಿಯಾಗಿ ನಿಂತ ನೀರಿನಿಂದ ಸೊಳ್ಳೆಗಳು ಉತ್ಪಾದನೆಯಾಗುತ್ತಿವೆ. ಇದರಿಂದಾಗಿ ಮಲೇರಿಯಾ, ಡೆಂಘೀಗಳಂತಹ ಕಾಯಿಲೆ ಹರಡುವ ಮುನ್ಸೂಚನೆ ದೊರೆತಿದ್ದು, ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಆರೋಗ್ಯ ಇಲಾಖೆ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಡಿಟಿಟಿ ಪೌಡರ್‌ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸರ್ವೆಯ ನೆಪವನ್ನು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಂತ್ರಸ್ತರು ಸ್ಥಳವನ್ನು ಬದಲಾಯಿಸುತ್ತಿದ್ದಾರೆ. ಅವರು ಬದಲಾಗ ಜಾಗಗಳಲ್ಲಿ ಇರುವ ನೀರನ್ನೇ ಕುಡಿಯುತ್ತಿರುವುದರಿಂದ, ನೀರಿನಲ್ಲಿಯೂ ವ್ಯತ್ಯಾಸವಾಗುತ್ತಿದೆ. ಇದು ರೋಗಗಳು ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗುತ್ತಿದೆ. ಸಂತ್ರಸ್ತರು ತಮ್ಮ ಮನೆಯನ್ನೇ ಶುದ್ಧಗೊಳಿಸುವುದು ಕಠಿಣ ಸವಾಲಾಗಿದೆ. ಇದರ ನಡುವೆ ಅವರಿಗೆ ಶುದ್ಧ ಕುಡಿಯುವ ನೀರು, ಇಲ್ಲವೆ ನೀರು ಕಾಯಿಸಿ, ಸೋಸಿ ಕುಡಿಯುವುದು ದೂರದ ಮಾತು. ಈ ಹಿನ್ನೆಲೆಯಲ್ಲಿ ಸರ್ಕಾರ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ಆದರೆ, ಸಂತ್ರಸ್ತರು ವೈಯಕ್ತಿಕ ಸ್ವಚ್ಛತೆಯೆಡೆಗೆ ಗಮನ ನೀಡಬೇಕು ಎಂಬುದು ಆರೋಗ್ಯ ಇಲಾಖೆಯ ಸೂಚನೆ.

ಈ ಬಗ್ಗೆ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಶ್ರೀಶೈಲ್‌ ಹಟ್ಟಿ ಅವರು, ಮನೆಯ ಸುತ್ತಲಿನ ಪರಿಸರ ಚೆನ್ನಾಗಿಟ್ಟುಕೊಳ್ಳಬೇಕು. ಶುದ್ಧ ಅಥವಾ ಕಾಯಿಸಿ ಆರಿಸಿದ ನೀರು ಸೇವಿಸಬೇಕು. ಜನದಟ್ಟಣೆಯ ಪ್ರದೇಶಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗದಿರುವುದು ಉತ್ತಮ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.  

ನೆರೆ ಇಳಿದ ಪ್ರದೇಶಗಳಲ್ಲಿ ಅಲ್ಲಲ್ಲಿ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿವೆ. ಹಲವು ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಹೊರ ರೋಗಿಗಳ ಸಂಖ್ಯೆಯಲ್ಲಿ ಸಾಮಾನ್ಯ ದಿನಗಳಿಗಿಂತ ಶೇ.40 ರಷ್ಟುಏರಿಕೆಯಾಗಿದ್ದು, 18 ವರ್ಷದ ಒಳಗಿನವರು ಹಾಗೂ 40 ವರ್ಷ ವಯಸ್ಸಿನವರಲ್ಲಿ ವೈರಲ್‌ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೃಷ್ಣಾ ಬಣ್ಣದ ಅವರು ತಿಳಿಸಿದರು.