ಬೆಂಗಳೂರು [ಜು.3]:  ನಗರದ ಇಂದಿರಾ ಕ್ಯಾಂಟೀನ್‌ ಗುತ್ತಿಗೆ ಅವಧಿ ಆಗಸ್ಟ್‌ಗೆ ಅಂತ್ಯಗೊಳ್ಳಲಿದ್ದು, ಗುತ್ತಿಗೆ ಬದಲಾವಣೆ ಜತೆಗೆ ಕ್ಯಾಂಟೀನ್‌ನಲ್ಲಿ ನೀಡಲಾಗುತ್ತಿರುವ ಆಹಾರದ ಮೆನು ಬದಲಾವಣೆಗೆ ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ನಗರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಗೊಂಡು ಆಗಸ್ಟ್‌ 16ಕ್ಕೆ ಎರಡು ವರ್ಷ ಪೂರೈಸಲಿದೆ. ಚೆಫ್‌ಟಾಕ್‌ ಹಾಗೂ ರಿವಾರ್ಡ್‌ ಸಂಸ್ಥೆಗೆ ಆಹಾರ ಸರಬರಾಜು ಗುತ್ತಿಗೆ ನೀಡಲಾಗಿತ್ತು. ಎರಡು ವರ್ಷದಿಂದ ಈ ಸಂಸ್ಥೆಗಳು ಸ್ಥಿರ ಹಾಗೂ ಮೊಬೈಲ್‌ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ತಯಾರಿಸಿ ಸರಬರಾಜು ಮಾಡುತ್ತಿವೆ. ಗುತ್ತಿಗೆ ಸಂಸ್ಥೆಗೆ ಮೊದಲ ವರ್ಷ ನೀಡಿದ ಗುತ್ತಿಗೆ ಅವಧಿಯನ್ನು ಕಳೆದ ವರ್ಷ ಟೆಂಡರ್‌ ಕರೆಯದೇ ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗಿತ್ತು. ಕಾನೂನು ಪ್ರಕಾರ ಈ ವರ್ಷ ಗುತ್ತಿಗೆ ಆಹ್ವಾನಿಸಬೇಕಾಗಿದೆ. ಗುತ್ತಿಗೆ ಆಹ್ವಾನಿಸುವುದರ ಜತೆಗೆ ಈಗ ಇರುವ ಆಹಾರದ ಮೆನು ಬದಲಾವಣೆಗೆ ಬಿಬಿಎಂಪಿ ಚಿಂತನೆ ನಡೆಸಿದೆ.

ಕ್ಯಾಂಟೀನ್‌ನಲ್ಲಿ ಅನ್ನ-ಸಾಂಬಾರ್‌, ಇಡ್ಲಿ ಹಾಗೂ ಕೇವಲ ರೈಸ್‌ ಪದಾರ್ಥಗಳನ್ನು ನೀಡುವುದರಿಂದ ಹಿರಿಯ ನಾಗರಿಕರಿಗೆ, ಮಧುಮೇಹ ಕಾಯಿಲೆ ಅವರು ಊಟ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಮುದ್ದೆ, ಚಪಾತಿ, ಟೀ-ಕಾಫಿ ನೀಡುವಂತೆ ಮನವಿ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೆನು ಬದಲಾವಣೆಗೆ ಮುಂದಾಗಿದೆ.

ಟೆಂಡರ್‌ಗೆ ಸಿದ್ಧತೆ:

ಆಗಸ್ಟ್‌ಗೆ ಕ್ಯಾಂಟೀನ್‌ ಟೆಂಡರ್‌ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಹೊಸ ಟೆಂಡರ್‌ ಆಹ್ವಾನಿಸಲು ಪಾಲಿಕೆ ಸಿದ್ಧತೆ ಮಾಡಲಾಗುತ್ತಿದೆ. ಟೆಂಡರ್‌ನಲ್ಲಿ ಸಾರ್ವಜನಿಕರು ಬೇಡಿಕೆಯಂತೆ ರಾಗಿ ಮುದ್ದೆ, ಚಪಾತಿ, ಟೀ-ಕಾಫಿ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಇಂದಿರಾ ಕ್ಯಾಂಟೀನ್‌ ಸರ್ಕಾರ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಮುಂದುವರೆದ ಯೋಜನೆ ಆಗಿರುವುದರಿಂದ ಅನುದಾನದ ಕೊರತೆ ಇಲ್ಲ ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

 ಕ್ಯಾಂಟೀನ್‌ ಸ್ವಚ್ಛತೆ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆ ಇಲ್ಲ, ಸಾರ್ವಜನಿಕರು ಊಟ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸೋಮವಾರ ನಗರದ ಬಿಇಎಲ್‌ ರಸ್ತೆ, ಬಳ್ಳಾರಿ ರಸ್ತೆಯ ವಿವಿಧ ವಾರ್ಡ್‌ಗಳ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ವೇಳೆ ಆಹಾರದ ಗುಣಮಟ್ಟ, ಕ್ಯಾಂಟೀನ್‌ ಸ್ವಚ್ಛತೆ ಬಗ್ಗೆ ಗ್ರಾಹಕರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಸಾರ್ವಜನಿಕರು ಕ್ಯಾಂಟೀನ್‌ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌  ತಿಳಿಸಿದ್ದಾರೆ.