Harsha Murder Case: ಶಿವಮೊಗ್ಗದಲ್ಲಿ ಮತ್ತೆ ಅನಿರ್ದಿಷ್ಟ ಕರ್ಫ್ಯೂ ಜಾರಿ: ಶಾಲೆ, ಕಾಲೇಜಿಗೆ ರಜೆ
* 10 ಮಂದಿ ಹತ್ಯೆ ಆರೋಪಿಗಳು 11 ದಿನ ಪೊಲೀಸ್ ಕಸ್ಟಡಿಗೆ
* ಗುರುವಾರದಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ
* ಶಾಲಾ-ಕಾಲೇಜುಗಳಿಗೂ ಮುಂದಿನ ಆದೇಶದವರೆಗೆ ರಜೆ ಘೋಷಣೆ
ಶಿವಮೊಗ್ಗ(ಫೆ.26): ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಉದ್ರಿಕ್ತ ಸ್ಥಿತಿ ತಲುಪಿದ್ದ ಶಿವಮೊಗ್ಗ(Shivamogga) ನಗರ ಇದೀಗ ಬಹುತೇಕ ಶಾಂತವಾಗಿದೆ. ಗುರುವಾರದಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂ(Curfew) ಅನ್ನು ಅನಿರ್ದಿಷ್ಟ ಕಾಲದವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಶಾಲಾ-ಕಾಲೇಜುಗಳಿಗೂ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ.
ಸೋಮವಾರ ಪರಿಸ್ಥಿತಿ ನೋಡಿಕೊಂಡು ಕರ್ಫ್ಯೂ ರದ್ದತಿ ಹಾಗೂ ಶಾಲಾ-ಕಾಲೇಜು(School-College) ಆರಂಭಕ್ಕೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.
ಇದೇ ವೇಳೆ ಹರ್ಷ ಹತ್ಯೆ(Harsha Murder) ಪ್ರಕರಣದ 10 ಆರೋಪಿಗಳನ್ನು ಜೆಎಂಎಫ್‌ಸಿ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ 11 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
Harsha Murder Case ಹರ್ಷ ಕೊಲೆ ಕೇಸ್, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಿವಮೊಗ್ಗ ಎಸ್‌ಪಿ
ಹರ್ಷ ಕಗ್ಗೊಲೆ ಬಳಿಕ ಭಾನುವಾರ ರಾತ್ರಿ ಮತ್ತು ಸೋಮವಾರ ನಗರದ ಸೀಗೆಹಟ್ಟಿ, ಆಜಾದ್ ನಗರ, ಭಾರತಿ ಕಾಲೋನಿ, ಕೆ.ಆರ್.ಪುರಂ ಪ್ರದೇಶಗಳಲ್ಲಿ ಗಲಭೆ ಸಂಭವಿಸಿ ಸಾಕಷ್ಟು ಆಸ್ತಿ ಹಾನಿಯಾಗಿತ್ತು. ಕಂಡ ಕಂಡಲ್ಲಿ ಬೆಂಕಿ ಇಡುವ, ಕಲ್ಲೆಸೆಯುವ ಪ್ರವೃತ್ತಿಯಿಂದ ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಹತೋಟಿಗೆ ತರಲು ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿತ್ತು. ನಗರದ ಎಲ್ಲ ಭಾಗಗಳಲ್ಲಿಯೂ ಪೊಲೀಸ್ ಬಂದೋಬಸ್ತ್(Police Security) ಮುಂದುವರೆಸಲಾಗಿದ್ದು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಇನ್ನಷ್ಟು ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ವ್ಯಾಪಾರಿಗಳಿಗೆ ಆಗುತ್ತಿರುವ ತೊಂದರೆ ಮನಗಂಡು ಸದ್ಯಕ್ಕೆ ಶನಿವಾರ ವ್ಯಾಪಾರ ವಹಿವಾಟನ್ನು ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಸಲು ಅವಕಾಶ ನೀಡಲಾಗಿದೆ.
35 ಎಫ್‌ಐಆರ್ ದಾಖಲು:
ಹರ್ಷ ಹತ್ಯೆ ಪ್ರಕರಣದ ಬಳಿಕ ಸಂಭವಿಸಿದ ಗಲಭೆಗೆ ಸಂಬಂಧಿಸಿ ಒಟ್ಟು 35 ಎಫ್‌ಐಆರ್(FIR) ಅನ್ನು ದಾಖಲಿಸಲಾಗಿದೆ. 144ನೇ ಸೆಕ್ಷನ್ ಉಲ್ಲಂಘನೆ, ಕೆಎಸ್‌ಆರ್‌ಟಿಸಿ ಮತ್ತು ಕೆಎಸ್‌ಆರ್‌ಪಿ ವಾಹನಗಳ ಜಖಂಗೊಳಿಸಿರುವುದು, ಖಾಸಗಿ ಬಸ್ ಹಾನಿಗೊಳಿಸಿರುವುದು, ಉಳಿದಂತೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಮಾಡಿರುವ ಸಂಬಂಧ ಎಫ್‌ಐಆರ್ ದಾಖಲಾಗಿದೆ.
ಯುವತಿ ಫೋನ್ ಕರೆಗೂ, ಕೊಲೆಗೂ ಸಂಬಂಧ ಇಲ್ಲ
ಹರ್ಷನ ಕಾಲ್ ಡಿಟೈಲ್ ಪ್ರಕಾರ ಹರ್ಷ ಹತ್ಯೆಗೂ ಮೊದಲು ಯುವತಿಯೊಬ್ಬಳು ಕರೆ ಮಾಡಿದ್ದಳು. ಹಂತಕರು ಯುವತಿಯರ ಮೂಲಕ ಕರೆ ಮಾಡಿ ಹರ್ಷನನ್ನು ಹೊರ ಕರೆಸಿ ಹತ್ಯೆಮಾಡಿದ್ದರೆಂಬ ಆರೋಪ ಕೇಳಿಬಂದಿದ್ದು, ಅದನ್ನು ಸದ್ಯ ಪೊಲೀಸರು ತಳ್ಳಿಹಾಕಿದ್ದಾರೆ. ಆಕೆಗೂ ಕೊಲೆಗೂ ಸಂಬಂಧ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಷ ಕೊಲೆ ಪ್ರಕರಣದ ತನಿಖೆ ಚುರುಕು, ಮತ್ತಿಬ್ಬರ ಬಂಧನ, ಹತ್ಯೆಗೆ ಬಳಸಿದ್ದ ಮಾರಕಾಸ್ತ್ರಗಳು ಪತ್ತೆ
ಮಚ್ಚು, ಲಾಂಗು ಝಳಪಿಸಿದ್ದೇ ಗಲಭೆಗೆ ಕಾರಣ: ವಿಜಯೇಂದ್ರ
ಶಿವಮೊಗ್ಗ: ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ(Harsha) ಪಾರ್ಥಿವ ಶರೀರ ಮೆರವಣಿಗೆ ವೇಳೆ ಒಂದು ಗುಂಪು ಕಟ್ಟಡದ ಮೇಲಿನಿಂದ ಕಲ್ಲು ತೂರಾಟ ನಡೆಸಿದ್ದಲ್ಲದೆ, ಲಾಂಗು, ಮಚ್ಚು ಹಿಡಿದು ಬೆದರಿಕೆ ಹಾಕಿದರು. ಇದಕ್ಕೆ ಮೆರವಣಿಗೆಯಲ್ಲಿದ್ದ ಕಾರ್ಯಕರ್ತರು ಪ್ರಕ್ರಿಯಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ವ್ಯಾಖ್ಯಾನಿಸಿದ್ದರು.
ಗುಂಪೊಂದು ಪ್ರಚೋದನಾಕಾರಿಯಾಗಿ ವರ್ತಿಸಿತ್ತು. ಇದರಿಂದಾಗಿ ಗಲಭೆಯಾಗಿದೆ(Riots). ಇಲ್ಲದೆ ಹೋಗಿದ್ದರೆ ಶಿವಮೊಗ್ಗದಲ್ಲಿ ಈ ರೀತಿ ಘಟನೆ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ. ಮೃತ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಬಜರಂಗದಳ ಕಾರ್ಯಕರ್ತನ ಹರ್ಷನ ಬರ್ಬರ ಹತ್ಯೆ(Murder) ವ್ಯರ್ಥವಾಗಲು ಬಿಡುವುದಿಲ್ಲ. ಈ ತರಹದ ಗೂಂಡಾವರ್ತನೆ ಸಹಿಸುವುದಿಲ್ಲ. ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಕಣ್ಣುಮುಚ್ಚಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ, ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.