ಈ ಊರಲ್ಲಿ ಸಂಜೆ 7ಕ್ಕೆ ಸೈರನ್ ಕೂಗ್ತಿದ್ದಂತೆ ಮೊಬೈಲ್, ಟಿವಿ ಬಂದ್!
ಸಂಜೆ 7 ಗಂಟೆಗೆ ದೇವಸ್ಥಾನದ ಸೈರನ್ ಆದ ತಕ್ಷಣ ಗ್ರಾಮದ ಪ್ರತಿಯೊಬ್ಬರೂ ಸಹ ತಮ್ಮ ಕೈಯಲ್ಲಿರುವ ಮೊಬೈಲ್, ಟಿವಿ ಬಿಟ್ಟು ಸಂಬಂಧಿಕರೊಂದಿಗೆ ಅಕ್ಕಪಕ್ಕದವರೊಂದಿಗೆ ಬೆರೆತು ಮಾತಾನಾಡುವುದು ಮಾಡಬೇಕು
ಚಿಕ್ಕೋಡಿ (ಅ.2) : ಡಿಜಿಟಲ್ ಯುಗದಲ್ಲಿ ಮೊಬೈಲ್ ಒಂದು ಕೈಲಿ ಇದ್ರೆ ಸಾಕು ಜಗತ್ತೇ ನಮ್ಮ ಅಂಗೈಲಿದ್ದ ಹಾಗೆ ಫೀಲ್ ಆಗುತ್ತೆ. ಫೇಸ್‌ಬುಕ್, ವಾಟ್ಸಪ್, ಇನ್ಸ್‌ಟಾಗ್ರಾಂ, ಹೀಗೆ ಸಮಯ ಹಾಳು ಮಾಡೋಕೆ ಮೊಬೈಲ್ ಒಂದು ಉತ್ತಮ ಸಾಧನವೆಂದೇ ಹೇಳಬಹುದು. ಇತ್ತೀಚೆಗೆ ಯಾರ ಕೈಯಲ್ಲಿ ನೋಡಿದ್ರೂ ಒಂದು ಮೊಬೈಲ್(Mobile) ಹಾಗೂ ಫೇಸ್‌ಬುಕ್(Facebook) ಅಕೌಂಟ್ ಇದ್ದೇ ಇರುತ್ತೆ. ಆದರೆ ಮಹಾರಾಷ್ಟ್ರ(Maharashtra)ದ ಸಾಂಗ್ಲಿ(Sangli) ಜಿಲ್ಲೆಯ ಮೊಹಿತೆ ವಡಗಾಂವ್(Vadagaon) ಗ್ರಾಮದಲ್ಲಿ ಎಲ್ಲಾ ಜನರ ಕೈಯಲ್ಲಿ ಮೊಬೈಲ್ ಇದ್ದರೂ ಸಹ ದಿನಕ್ಕೆ ಎರಡು ಗಂಟೆ ಅವರು ಆ ಮೊಬೈಲ್ ನಿಂದ ದೂರ ಉಳಿಯಲೇಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಲ್ಲಿನ ಗ್ರಾಮದ ಹಿರಿಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ತೆಗೆದುಕೊಂಡ ನಿರ್ಧಾರವಿದು.
ಹೌದು, ಸುಮಾರು 7 ಸಾವಿರ ಜನಸಂಖ್ಯೆ ಹೊಂದಿರುವ ಮೊಹಿತೆ ವಡಗಾಂವ್ ಗ್ರಾಮದಲ್ಲಿ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿ(Student)ಗಳಿದ್ದಾರೆ. ಕೋವಿಡ್(Covid) ನಿಂದ ಆರಂಭವಾದ ಆನ್ ಲೈನ್ ಕ್ಲಾಸ್(online class) ಭರಾಟೆಯಿಂದ ಮಕ್ಕಳ ಕೈಗೂ ಮೊಬೈಲ್ ಸಿಕ್ಕಿತ್ತು. ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರದಿರಲಿ ಅಂತ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ್ ಮೊಹಿತೆ(Vijaya mohite) ಹಾಗೂ ಊರಿನ ಗ್ರಾಮಸ್ಥರು ನಿರ್ಣಯ ಮಾಡಿಕೊಂಡು ಇಂತಹ ನಿರ್ಧಾರ ಕೈಗೊಂಡಿದ್ದಾರೆ.
ಮಕ್ಕಳು ದಿನವಿಡೀ ಮೊಬೈಲ್ ನೋಡ್ತಾ ಕೂರ್ತಾರಾ ? ಹೀಗೆ ಮಾಡಿ ಕೆಟ್ಟ ಅಭ್ಯಾಸ ತಪ್ಪಿಸಿ
ಸಂಜೆ 7 ಗಂಟೆಗೆ ದೇವಸ್ಥಾನದ ಸೈರನ್(Siren) ಆದ ತಕ್ಷಣ ಗ್ರಾಮದ ಪ್ರತಿಯೊಬ್ಬರೂ ಸಹ ತಮ್ಮ ಕೈಯಲ್ಲಿರುವ ಮೊಬೈಲ್, ಟಿವಿ ಬಿಟ್ಟು ಸಂಬಂಧಿಕರೊಂದಿಗೆ ಅಕ್ಕಪಕ್ಕದವರೊಂದಿಗೆ ಬೆರೆತು ಮಾತಾನಾಡುವುದು ಮಾಡಬೇಕು. ಇನ್ನು ಮಕ್ಕಳು ಈ ಸಮಯದಲ್ಲಿ ಕಡ್ಡಾಯವಾಗಿ ಅಧ್ಯಯನ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಮೂಲಕ ಸೂಚಿಸಲಾಗಿದೆ.
ಅದರಂತೆ ದೇವಸ್ಥಾನದ ಸೈರನ್ ಆದ ತಕ್ಷಣ ಗ್ರಾಮದ ಜನ ಹಾಗೂ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿ ಆಫ್ ಮಾಡಿ ಅಧ್ಯಯನ ಹಾಗೂ ಸಂಬಂಧಿಕರೊಡನೆ ಅಕ್ಕಪಕ್ಕದ ಜನರೊಂದಿಗೆ ಮಾತಾಡ್ತಾ ಕಾಲಕಳೆಯುತ್ತಾರೆ. ಎರಡು ಗಂಟೆಯ ನಂತರ ಮತ್ತೊಮ್ಮೆ ಸೈರನ್ ಆದಾಗ ಎಂದಿನಂತೆ ಜನರು ತಮ್ಮ ಕೆಲಸಗಳಲ್ಲಿ ತೊಡಗುತ್ತಾರೆ.
ಮಕ್ಕಳ ಆನ್‌ಲೈನ್ ಗೇಮಿಂಗ್ ಅಡಿಕ್ಷನ್ ಕಡಿಮೆ ಮಾಡೋದು ಹೇಗೆ?
ದಿನದ ಇಪ್ಪತ್ತುನಾಲ್ಕು ಗಂಟೆಯೂ ಮೊಬೈಲ್‌ನಲ್ಲಿ ಬೇಕು, ಬೇಡದ್ದನ್ನೆಲ್ಲ ನೋಡುತ್ತಾ ಕಾಲಕಳೆಯುವ ಇಂದಿನ ಯುವಜನತೆ, ಮಕ್ಕಳನ್ನು ನೋಡಿದರೆ. ಇಂಥದೊಂದು ಅಗತ್ಯ ಇದೆ ಅನಿಸುತ್ತದೆ. ಇಂದು ಮೊಬೈಲ್ ಮತ್ತು ಅದರ ವಿವಿಧ ಗೇಮ್ ಅಪ್ಲಿಕೇಶನ್‌ಗಳಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಸಮಯ ಪೋಲಾಗುತ್ತಿದೆ. ಈ ಕಾರಣದಿಂದಲೇ ಶೈಕ್ಷಣಿಕವಾಗಿ ಮಕ್ಕಳು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಮಯದಲ್ಲಿ ನಮ್ಮಲ್ಲೂ ಹೀಗೆ ಸೈರನ್ ಮಾದರಿ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು ಅಂತಾ ಅನಿಸದೆ ಇರದು.