ಹುನಗುಂದ: (ಸೆ.22) ಮುಳುಗಡೆ ಪರಿಹಾರ ಹಣ ಪಡೆದ ನಂತರದ ದಿನಗಳಲ್ಲಿ ನಿರ್ಮಾಣವಾದ 200 ಕ್ಕೂ ಹೆಚ್ಚು ಮನೆಗಳನ್ನು ಗ್ರಾಪಂ ಆಸ್ತಿ ನೋಂದಣಿಯಲ್ಲಿ ಕಾನೂನು ಬಾಹಿರವಾಗಿ ದಾಖಲಿಸಿಕೊಂಡಿರುವ ಮಹಾ ಪ್ರಕರಣ ಹುನಗುಂದ ತಾಲೂಕಿನ ಧನ್ನೂರ ಗ್ರಾಪಂನಲ್ಲಿ ನಡೆದಿದೆ.

ನಾರಾಯಣಪೂರ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಗ್ರಾಮವೆಂದು 1984ರಲ್ಲಿ ಘೋಷಣೆಯಾಗಿದ್ದ ಧನ್ನೂರ ಗ್ರಾಮದ ಎಲ್ಲ ಕುಟುಂಬಗಳಿಗೆ 1994ರಲ್ಲಿ ಸಂಪೂರ್ಣ ಪರಿಹಾರದ ಹಣ ನೀಡಿದ್ದರೂ, ನಂತರದ ದಿನಗಳಲ್ಲಿ ನಿರ್ಮಾಣವಾದ 203 ಮನೆಗಳನ್ನು ಗ್ರಾಪಂ ಅಧಿಕಾರಿಗಳು ತಮ್ಮ ಆಸ್ತಿ ನೋಂದಣಿಯಲ್ಲಿ ಕಾನೂನು ಬಾಹಿರವಾಗಿ ದಾಖಲಿಸಿಕೊಂಡಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಕ್ರಮವಾಗಿ ಮನೆ ನಿರ್ಮಿಸಿಕೊಂಡು ಪಂಚಾಯತಿ ರಜಿಸ್ಟರ್‌ನಲ್ಲಿ ತಮ್ಮ ಹೆಸರು ದಾಖಲಾದ ವ್ಯಕ್ತಿಗಳು ಈಗ ತಮಗೆ ಪರಿಹಾರ ಮತ್ತು ನಿವೇಶನ ಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ಈಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

1996 ರಿಂದ 2005ರ ಅವಧಿಯಲ್ಲಿ ಈ ಪ್ರಕರಣ ಜರುಗಿದ್ದು, ಈ ಅವ್ಯವಹಾರದಲ್ಲಿ ಆಗಿನ ಗ್ರಾಪಂ ಪಿಡಿಒ ಹಾಗೂ ಆಡಳಿತ ಮಂಡಳಿ ಸದಸ್ಯರು ಸಂಪೂರ್ಣ ಶಾಮೀಲಾಗಿದ್ದಾರೆ. ಇದರಲ್ಲಿ ಲಕ್ಷಾಂತರ ರುಪಾಯಿ ವ್ಯವಹಾರವೂ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ತನಿಖೆ ನಡೆದರೆ ಸತ್ಯ ಬಯಲಾಗಲಿದೆ ಎಂಬುವುದು ಸಾರ್ವಜನಿಕರ ಆಗ್ರಹ.

ನ್ಯಾಯಾಲಯಕ್ಕೆ ಮೊರೆ:

ಮುಳುಗಡೆ ಪರಿಹಾರ ಹಣ ನೀಡಿದ ನಂತರ ನಿರ್ಮಾಣಗೊಂಡ ಮನೆಯಾಗಿರುವುದರಿಂದ ಈ ಮನೆಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಅಲ್ಲದೆ, ಈ ಕುಟುಂಬದ ಸದಸ್ಯರಿಗೆ ಪುನರ್ವಸತಿ ಸ್ಥಳದಲ್ಲಿ ನಿವೇಶನಗಳ ಹಕ್ಕುಪತ್ರ ನೀಡಲು ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ, ಪುನರ್‌ ನಿರ್ಮಾಣ ಅಧಿಕಾರಿಗಳು ಸಾರಾಸಗಟಾಗಿ ನಿರಾಕರಿಸಿದ್ದರಿಂದ ಈ ಕುಟುಂಬದ ಕೆಲವರು ಪರಿಹಾರ ಹಣಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಒಂದು ವೇಳೆ ನ್ಯಾಯಾಲಯ ಇವರಿಗೂ ಪರಿಹಾರ ಹಣ ನೀಡಬೇಕೆಂದು ಆದೇಶಿಸಿದಲ್ಲಿ ಗ್ರಾಪಂ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಮಾಡಿದ ಕರ್ತವ್ಯಲೋಪಕ್ಕೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ಹೊರೆಯಾಗುವ ಸಂಭವವಿದೆ.

ಅನಧಿಕೃತವಾಗಿ ತಲೆ ಎತ್ತಿದ ಅಂಗಡಿಗಳು:

ಧನ್ನೂರ ಗ್ರಾಮದ ಮಧ್ಯೆ ಹಾದು ಹೋದ ಹುನಗುಂದ-ಮುದ್ದೇಬಿಹಾಳ ಹೆದ್ದಾರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತಿದೆ. ಇದೇ ರಸ್ತೆ ಪಕ್ಕ ನಿರ್ಮಿಸಿದ್ದ ಅಂಗಡಿಗಳ ಮಾಲೀಕರಿಗೂ ಮಾನವೀಯ ಅನುಕಂಪದ ಮೇರೆಗೆ 1994ರಲ್ಲಿ ಪರಿಹಾರ ನೀಡಿ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ಈ ಸ್ಥಳದಲ್ಲಿ ಮತ್ತೆ ಅನಧಿಕೃತ ಅಂಗಡಿಗಳು ತಲೆ ಎತ್ತಿ ನಿಂತಿದ್ದು, ಅವುಗಳಿಗೆ ಗ್ರಾಪಂ ಅಧಿಕಾರಿಗಳು ವ್ಯಾಪಾರ ಮಾಡಲು ಪರವಾನಗಿ ನೀಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಇದರಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಮತ್ತೊಂದೆಡೆ ಧನ್ನೂರ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಹಕ್ಕುಪತ್ರ ಪಡೆದ ಜನ ವಾಸ ಮಾಡದ ಕಾರಣ ಈ ಸ್ಥಳದಲ್ಲಿ ಸರ್ಕಾರ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಕಟ್ಟಿದ ಅನೇಕ ಸರ್ಕಾರಿ ಕಟ್ಟಡಗಳು ಅನಾಥ ಪ್ರಜ್ಞೆ ಎದುರಿಸುವುದರ ಜೊತೆಗೆ ಅವುಗಳು ಈಗ ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. 


ಈ ಗ್ರಾಮದ ಜನರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಗ್ರಾಮದ ಸಮೀಪ ಸುಮಾರು 60 ಹೆಕ್ಟೇರ್‌ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಅಭಿವೃದ್ಧಿಪಡಿಸಿ 1994ರಲ್ಲಿಯೇ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಅಲ್ಲದೇ ಹಳೆ ಗ್ರಾಮದಲ್ಲಿರುವ ಅವರ ಮೂಲ ಆಸ್ತಿಗೆ ಯುಕೆಪಿ ಮಾದರಿಯಲ್ಲಿ ಪೂರ್ಣ ಪ್ರಮಾಣದ ಪರಿಹಾರ ಹಣವನ್ನು ನೀಡಲಾಗಿದೆ. ನಿವೇಶನ ಹಾಗೂ ಪರಿಹಾರ ಹಣ ನೀಡಿ 25 ವರ್ಷಗಳು ಕಳೆದಿವೆ. 
ಸರ್ಕಾರ ನೀಡಿದ ಪರಿಹಾರದ ಹಣವೂ ಖರ್ಚಾಗಿ ಹೋಗಿರಬಹುದು. ಆದರೆ, ಬೆರಳೆಣಿಕೆಯಷ್ಟುಜನರನ್ನು ಬಿಟ್ಟರೆ ಬಹುತೇಕರು ಇನ್ನೂ ಮೂಲ ಗ್ರಾಮ ಬಿಟ್ಟು ಬಂದಿಲ್ಲ. ಗ್ರಾಮಸ್ಥರು ಸ್ಥಳಾಂತರಗೊಳ್ಳಲು ಕೈಗೊಳ್ಳಬೇಕಾದ ಕಾನೂನು ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳದಿರುವುದು ಇದಕ್ಕೆ ಕಾರಣವಾಗಿದೆ.

ನಿರುಪಯುಕ್ತವಾದ ಕಟ್ಟಡಗಳು:

ಪುನರ್ವಸತಿ ಕೇಂದ್ರದಲ್ಲಿ ಯುಕೆಪಿ ಮೂಲಕ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದೆ. ನೀರು, ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ ಸೇರಿದಂತೆ ಇತರೆ ಸರ್ಕಾರಿ ಕಟ್ಟಡಗಳನ್ನು ಕಟ್ಟಲಾಗಿದ್ದು, ಇದಕ್ಕಾಗಿ ಕೋಟ್ಯಂತರ ರುಪಾಯಿ ಖರ್ಚು ಮಾಡಲಾಗಿದೆ. ಇಷ್ಟೆಲ್ಲ ಹಣ ಖರ್ಚು ಮಾಡಿದರೂ ಇಲ್ಲಿ ಜನ ವಸತಿಯೇ ಇಲ್ಲದ ಕಾರಣ ಇವು ಯಾವುದು ಬಳಕೆಯಾಗುತ್ತಿಲ್ಲ.

ಹಣ ನೀರಲ್ಲಿ ಹೋಮ:

ಜನ ವಸತಿ ಇಲ್ಲದಿದ್ದರೂ ರಾತ್ರಿ ಬೀದಿ ದೀಪಗಳು ಉರಿದು ವಿನಾಕಾರಣ ವಿದ್ಯುತ್‌ ಬಿಲ್‌ ಪಾವತಿಸಲಾಗುತ್ತಿದೆ. ಅಭಿವೃದ್ಧಿಪಡಿಸಿದ ಸ್ಥಳದಲ್ಲಿ ಪ್ರತಿ ವರ್ಷವೂ ಬೆಳೆಯುತ್ತಿರುವ ಗಿಡ, ಗಂಟೆಗಳನ್ನು ಸ್ವಚ್ಛಗೊಳಿಸಲು ಲಕ್ಷಗಟ್ಟಲೆ ಹಣ ಖರ್ಚಾಗುತ್ತಿದೆ. ಇನ್ನು ನಿರ್ಮಿಸಿದ ಒಂದು ಕಟ್ಟಡಗಳು ಸಾರ್ವಜನಿಕ ಉಪಯೋಗವಾಗದಿರುವುದಕ್ಕೆ ಈಗ ಅವುಗಳೆಲ್ಲ ನಿರುಪಯುಕ್ತ ಕಟ್ಟಡಗಳಾಗಿ, ಅನೈತಿಕ ಚಟುವಟಿಕೆಗಳಿಗೆ ತಾಣಗಳಾಗಿ ಮಾರ್ಪಟ್ಟಿವೆ. ಎಲ್ಲ ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವುದರಿಂದ ಇವುಗಳಿಗೆ ಖರ್ಚು ಮಾಡಿದ ಲಕ್ಷಾಂತರ ರುಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಅಧಿಕಾರಿಗಳ ಕರ್ತವ್ಯ ಲೋಪವೂ ಕಾರಣ:

ಪುನರ್ವಸತಿ ಕೇಂದ್ರಕ್ಕೆ ಗ್ರಾಮಸ್ಥರು ಸ್ಥಳಾಂತರಗೊಳ್ಳದಿರುವುದಕ್ಕೆ ಅಧಿಕಾರಿಗಳ ಕರ್ತವ್ಯ ಲೋಪವೂ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಯಾವುದೇ ಒಂದು ಗ್ರಾಮವನ್ನು ಸ್ಥಳಾಂತರಿಸಿ, ಗ್ರಾಮಸ್ಥರಿಗೆ ಹರಿಹಾರ ಮತ್ತು ನಿವೇಶನ ನೀಡಿದ ನಂತರ ಅವರು ಮೂಲ ಗ್ರಾಮದಲ್ಲಿಯೇ ಮುಂದುವರೆದರೆ ಅವರಿಗೆ ಯಾವುದೇ ಮೂಲಭೂತ ಸೌಲಭ್ಯವನ್ನು ಕಲ್ಪಿಸಬಾರದು. ಆದರೆ, ಈ ಗ್ರಾಮದ ಜನರು ಪರಿಹಾರ ಹಣ ಪಡೆದು ಎರಡು ದಶಕಗಳು ಕಳೆದರೂ ಮೂಲ ಗ್ರಾಮದಲ್ಲಿಯೇ ವಾಸವಾಗಿದ್ದು, ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವುದು ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಗ್ರಾಪಂ ಕಟ್ಟಡ ಶಿಥಿಲ

ಗ್ರಾಮದ ಜನತೆ ಅಷ್ಟೇ ಅಲ್ಲ ಗ್ರಾಮದ ಆಡಳಿತ ನಡೆಸುವ ಗ್ರಾಪಂ ಕಚೇರಿಯೇ ಪುನರ್ವಸತಿ ಸ್ಥಳಕ್ಕೆ ಸ್ಥಳಾಂತರಗೊಂಡಿಲ್ಲ. ಹೀಗಾಗಿ ಪುನರ್ವಸತಿ ಕೇಂದ್ರದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕಟ್ಟಿದ್ದ ಗ್ರಾಪಂ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿದೆ. ಊರಿನ ಆಡಳಿತ ನಡೆಸುವ ಕಚೇರಿಯೇ ಪುನರ್ವಸತಿ ಸ್ಥಳಕ್ಕೆ ಸ್ಥಳಾಂತರಗೊಳ್ಳದಿರುವಾಗ ಗ್ರಾಮಸ್ಥರಿಗೆ ಸ್ಥಳಾಂತರಗೊಳ್ಳಿ ಎನ್ನುವ ನೈತಿಕತೆಯನ್ನು ಅಧಿಕಾರಿಗಳು ಉಳಿಸಿಕೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಮಾಹಿತಿ ನೀಡಿದ ಹುನಗುಂದ ತಾಪಂ ಇಒ ಪುಷ್ಪಾ ಕಮ್ಮಾರ ಅವರು, 4/1 ಅಧಿಸೂಚನೆ ಪ್ರಕಟವಾದ ನಂತರ 203 ಮನೆಗಳನ್ನು ಗ್ರಾಮ ಪಂಚಾಯತಿ ಆಸ್ತಿ ರಜಿಸ್ಟರ್‌ನಲ್ಲಿ ದಾಖಲಾಗಿದೆ ಎಂಬ ಮಾಹಿತಿ ಗಮನಕ್ಕೆ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಕೇಳಿದ್ದಾರೆ. 4/1 ಅಧಿಸೂಚನೆ ನಂತರ ಮನೆ ಕಟ್ಟಿದ ನಿವೇಶನಕ್ಕೆ ಪರಿಹಾರ ಪಡೆದಿದ್ದರೆ ಈ ಎಲ್ಲ ಮನೆಗಳು ಅನಧಿಕೃತವಾಗಲಿದೆ. ಈ ಕುರಿತು ಸಮಗ್ರ ಮಾಹಿತಿ ನೀಡುವಂತೆ ಧನ್ನೂರ ಗ್ರಾಪಂ ಪಿಡಿಒ ಅವರಿಗೆ ಸೂಚಿಸಲಾಗಿದೆ. ಮಾಹಿತಿ ಪಡೆದ ನಂತರ ಈ ಮನೆಗಳನ್ನು ಅನಧಿಕೃತವಾಗಿ ದಾಖಲಿಸಿಕೊಂಡಿರುವುದು ಕಂಡು ಬಂದರೆ ಸಂಬಂಧಿಸಿದ ಪಿಡಿಒ.ವಿರುದ್ದ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಪಾರಸು ಮಾಡಲಾಗುವುದು ಎಂದು ಹೇಳಿದರು.