ಆಲಮೇಲ(ಏ.30): ಪತ್ನಿಯ ಶೀಲ ಶಂಕಿಸಿ ಮಾರ​ಕಾ​ಸ್ತ್ರ​ಗ​ಳಿಂದ ಕೊಚ್ಚಿ ಅವಳನ್ನು ಹತ್ಯೆ ಮಾಡಿದ ಪತಿ, ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸಂಭ​ವಿ​ಸಿದೆ. ನಾಗರಹಳ್ಳಿ ಗ್ರಾಮದ ಹಣಮಂತ ವಗ್ಗಪ್ಪ ಪೂಜಾರಿ (30) ಹಾಗೂ ಯಲ್ಲವ್ವ ಹಣಮಂತ ಪೂಜಾರಿ (25) ಎಂಬಾ​ತರೆ ಮೃತ ಪತಿ, ಪತ್ನಿ.

ಆಲಮೇಲ ಪಟ್ಟಣದ ಕಡಣಿ ರಸ್ತೆಗೆ ಹೊಂದಿಕೊಂಡ ಪ್ರದೇಶದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಕೂಲಿ ಕೆಲ​ಸ​ಕ್ಕಾಗಿ ಬಂದು ಬಾಡಿಗೆ ಮನೆ​ಯಲ್ಲಿ ನೆಲೆಸಿದ್ದ ಈ ದಂಪತಿ ಮಧ್ಯೆ ಪತ್ನಿಯ ಅನೈತಿಕ ಸಂಬಂಧದ ​ವಿ​ಚಾ​ರ​ವಾಗಿ ಆಗಾಗ ಜಗಳ ನಡೆ​ಯು​ತ್ತಿತ್ತು. ಮಂಗಳವಾರ ರಾತ್ರಿಯೂ ಅನೈತಿಕ ಸಂಬಂಧ ಕುರಿತು ದಂಪತಿ ಮಧ್ಯೆ ಆರಂಭಗೊಂಡ ಜಗಳ ತಾರಕಕ್ಕೇರಿದ್ದು ದುರಂತದಲ್ಲಿ ಅಂತ್ಯ ಕಂಡಿದೆ.

ಕ್ಷುಲ್ಲಕ ಕಾರಣಕ್ಕೆ ಮಾಜಿ ಯೋಧ, ಪತ್ನಿಯ ಬರ್ಬರ ಹತ್ಯೆ..!

ಮಾರಕಾಸ್ತ್ರದಿಂದ ಪತ್ನಿಯನ್ನು ಹತ್ಯೆ ಮಾಡಿದ ಪತಿ ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ. ಬುಧವಾರ ನಸುಕಿನಲ್ಲಿ ದಂಪತಿಯ 3 ವರ್ಷದ ಮಗು ಹೆತ್ತವರ ದುರಂತ ಕಂಡು ಕಿರುಚಾಟ ಆರಂಭಿಸಿದೆ. ಮಗುವಿನ ಆಕ್ರಂದನ ಕೇಳಿದ ಅಕ್ಕಪಕ್ಕದ ಮನೆಯವರು ಮನೆಯ ಬಾಗಿಲು ಮುರಿದು ನೋಡಿದಾಗ ಈ ದುರ್ಘ​ಟನೆ ಬೆಳಕಿಗೆ ಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಆಲಮೇಲ ಪೊಲೀಸರು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರುಸ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.