ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.01): ಕೊರೋನಾ ನಿಯಂತ್ರಣದ ಮುಂದಿನ ಹೆಜ್ಜೆಯಾಗಿ ಅಕ್ಕಪಕ್ಕದ ರಾಜ್ಯಗಳ ಗಡಿಯ ಕಳ್ಳದಾರಿ (ಕಾಲುದಾರಿ)ಗಳಿಂದ ಬರುವವರನ್ನು ತಡೆಯಲು ರಾಜ್ಯ ಸರ್ಕಾರ ಇದೀಗ ಪ್ರತಿ ಕಾಲುದಾರಿಯಲ್ಲೂ ಚೆಕ್‌ಪೋಸ್ಟ್‌ ನಿರ್ಮಿಸಲು ಮುಂದಾಗಿದೆ.

ಕಾಲ್ನಡಿಗೆಯಿಂದಲೇ ರಾಜ್ಯ ಪ್ರವೇಶಿಸುವವರ ಮೇಲೆ ನಿಗಾ ವಹಿಸಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್‌ ಇಲಾಖೆ ಆಯಾ ಗಡಿ ಭಾಗದ ಠಾಣೆಗಳಿಗೆ ನಿರ್ದೇಶನ ನೀಡಿದೆ. ಈ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಹೌದು, ಕೊರೋನಾ ನಿಯಂತ್ರಣವನ್ನು ಅತ್ಯಂತ ಸಮರ್ಥವಾಗಿ ರಾಜ್ಯ ಸರ್ಕಾರ ನಿರ್ವಹಿಸಿದೆ. ಆದರೆ ಹೊರರಾಜ್ಯಗಳಿಂದ ಬರುವವರಿಗೆ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಹೊರರಾಜ್ಯಗಳಿಂದ ಬರುವವರನ್ನು ನೇರವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೊಳಪಡಿಸುವ ಮೂಲಕ ಇದನ್ನು ನಿಯಂತ್ರಿಸಲಾಗುತ್ತಿದೆ. ಇನ್ನೂ ಇದೀಗ ಕಳೆದ ಒಂದು ವಾರದಿಂದ ಕಳ್ಳದಾರಿಗಳಿಂದ ಅಕ್ಕಪಕ್ಕದ ರಾಜ್ಯಗಳಿಂದ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಗೆ ದುಡಿಯಲು ತೆರಳಿದ್ದವರು. ಅಲ್ಲಿ ಸೇವಾ ಸಿಂಧು ಮೂಲಕ ನೋಂದಣಿ ಮಾಡಿಸಿಕೊಳ್ಳಲು ಆಗದವರು, ದುಡ್ಡು ಇಲ್ಲದ ಕಾರ್ಮಿಕರೆಲ್ಲ ತಲೆಮೇಲೆ ಗಂಟು ಇಟ್ಟುಕೊಂಡು, ಕಂಕುಳಲ್ಲಿ ಕೂಸುಗಳನ್ನು ಹೊತ್ತುಕೊಂಡು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ನಡೆದುಕೊಂಡೇ ಆಗಮಿಸುತ್ತಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ, ಸಂಕಷ್ಟದಲ್ಲಿ ಅಲೆಮಾರಿ ಕುಟುಂಬ

ಹಾಗಂತ ರಾಜ್ಯದ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳೇ ಇಲ್ಲ ಅಂತೇನೂ ಅಲ್ಲ. ಈ ರೀತಿ ಬರುವ ಕಾರ್ಮಿಕರು ಮುಖ್ಯದಾರಿಯನ್ನು ಹಿಡಿದುಕೊಂಡು ಬರುತ್ತಿಲ್ಲ. ಆದರೆ ಗಡಿಭಾಗದ ಗ್ರಾಮ, ಕಾಡುಮೇಡುಗಳಲ್ಲಿ ಸಂಚರಿಸುತ್ತಾ ಆಗಮಿಸುತ್ತಿದ್ದಾರೆ. ಇದರಿಂದಾಗಿ ಗಡಿಭಾಗದ ಹೆದ್ದಾರಿಗಳಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಗೊತ್ತೇ ಆಗುತ್ತಿಲ್ಲ. ಯಾರು ರಾಜ್ಯವನ್ನು ಪ್ರವೇಶಿಸಿದರು; ಹೇಗೆ ಪ್ರವೇಶಿಸಿದರು ಎಂಬುದು ಗೊತ್ತಾಗುತ್ತಿಲ್ಲ. ಹೀಗೆ ಕಳ್ಳದಾರಿಗಳಲ್ಲಿ ಪ್ರವೇಶಿಸುವ ಕಾರ್ಮಿಕರಿಗೆ ಸರಿಯಾಗಿ ಕ್ವಾರಂಟೈನ್‌ಗೆ, ಕೋವಿಡ್‌ ಪರೀಕ್ಷೆಗೊಳಪಡಿಸುವುದು ರಾಜ್ಯದ ಆಡಳಿತ ಯಂತ್ರಕ್ಕೆ ದೊಡ್ಡ ಸವಾಲಿನ ಕೆಲಸವಾದಂತಾಗಿದೆ. ಕಳ್ಳದಾರಿಗಳ ಮೂಲಕ ಪ್ರವೇಶಿಸುವ ಕಾರ್ಮಿಕರಿಗೆ ಕೋವಿಡ್‌ ಇದ್ದರೆ ಅದು ಸಮುದಾಯಕ್ಕೆ ಹಬ್ಬುವ ಸಂಭವವನ್ನು ತಳ್ಳಿಹಾಕುವಂತಿಲ್ಲ. ಆ ಭೀತಿ ಇದೀಗ ರಾಜ್ಯ ಸರ್ಕಾರವನ್ನು ಕಾಡುತ್ತಿದೆ.

ನಿವಾರಣೆ ಹೇಗೆ?:

ಈ ಕಾರಣದಿಂದಾಗಿ ಇದೀಗ ಗೃಹ ಇಲಾಖೆ ಗಡಿ ಭಾಗಗಳ ಗ್ರಾಮಗಳಲ್ಲಿ, ಕಾಡು ಮೇಡುಗಳ ಪ್ರವೇಶಕ್ಕೂ ಮುನ್ನವೇ ಚೆಕ್‌ಪೋಸ್ಟ್‌ ಸ್ಥಾಪಿಸಲು ನಿರ್ಧರಿಸಿದೆ. ಈ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ. ಬೆಳಗಾವಿ, ಬೀದರ, ವಿಜಯಪುರ ಸೇರಿದಂತೆ ಅಂತಾರಾಜ್ಯದ ಗಡಿಯನ್ನು ಸಂದಿಸುವ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯವನ್ನು ಪ್ರವೇಶಿಸುವ ಕಳ್ಳಮಾರ್ಗಗಳು ಯಾವವು? ಯಾವ ಗ್ರಾಮಗಳ ಮೂಲಕ ಈ ಕಳ್ಳದಾರಿಗಳು ಸಿಗುತ್ತವೆ ಎಂಬುದನ್ನೆಲ್ಲ ಪತ್ತೆ ಹಚ್ಚಿ, ಇನ್ನು ಮೇಲೆ ಅಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಿ ಎಂದು ಮೌಖಿಕ ಆದೇಶ ನೀಡಿದ್ದಾರೆ.

ಶನಿವಾರವಷ್ಟೇ ಗೃಹ ಸಚಿವರು ಈ ಆದೇಶ ನೀಡಿದ್ದು, ಬಹುಶಃ ಇನ್ನೆರಡು ಮೂರು ದಿನಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪನೆಯಾಗಬಹುದು. ಹೇಗಾದರೂ ಇದೀಗ ಊರಲ್ಲಿರುವ ಚೆಕ್‌ಪೋಸ್ಟ್‌ಗಳ ಕೆಲಸ ಬಹುತೇಕ ಪೂರ್ಣವಾಗಿದೆ. ಅವು ಅಷ್ಟೊಂದು ಅಗತ್ಯವಿಲ್ಲ. ಈ ಕಾರಣದಿಂದಾಗಿ ಈ ಚೆಕ್‌ಪೋಸ್ಟ್‌ಗಳನ್ನೇ ಕಾಲುದಾರಿಗಳನ್ನು ಸಂಧಿಸುವೆಡೆಗೆ ತಿರುಗಿಸುವ ಯೋಜನೆ ಸರ್ಕಾರದ್ದು. ಈ ಮೂಲಕ ಕಳ್ಳದಾರಿ ಮೂಲಕ ಪ್ರವೇಶಿಸುವ ಕಾರ್ಮಿಕರನ್ನು ಗಡಿ ಭಾಗದಲ್ಲೇ ತಡೆದು ಅವರ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ರೋಗದ ಲಕ್ಷಣಗಳಿದ್ದರೆ, ಅಂಥವರನ್ನು ಕ್ವಾರಂಟೈನ್‌ಗೊಳಪಡಿಸಿ ಪರೀಕ್ಷಿಸುವುದು, ಒಂದು ವೇಳೆ ರೋಗದ ಲಕ್ಷಣಗಳಿಲ್ಲದಿದ್ದಲ್ಲಿ ಅಂಥ ಕಾರ್ಮಿಕರನ್ನು ಸೇವಾ ಸಿಂಧು ಯೋಜನೆಯಡಿ ನೋಂದಣಿ ಮಾಡಿಸಿಕೊಂಡು ಅವರನ್ನು ಅವರ ಗಮ್ಯಸ್ಥಳಕ್ಕೆ ತಲುಪಿಸುವುದು. ಇದು ಸರ್ಕಾರದ ಯೋಚನೆಯಾಗಿದೆ. ಒಟ್ಟಿನಲ್ಲಿ ಕಳ್ಳದಾರಿ ಮೂಲಕ ಆಗಮಿಸುವ ಕಾರ್ಮಿಕರನ್ನು ರಾಜ್ಯದ ಗಡಿಯಲ್ಲೇ ತಡೆದು ಕೊರೋನಾವನ್ನು ಇನ್ನಷ್ಟು ನಿಯಂತ್ರಿಸಲು ಹೊರಟಿರುವುದಂತೂ ಸತ್ಯ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೆಂಬುದನ್ನು ಕಾಯ್ದು ನೋಡಬೇಕಷ್ಟೇ!

ಹೌದು, ರಾಜ್ಯದ ಗಡಿ ಜಿಲ್ಲೆಗಳಲ್ಲಿನ ಕಾಲುದಾರಿಗಳ ಮೂಲಕ ಕಾರ್ಮಿಕರು ಬರುತ್ತಿದ್ದಾರೆ. ಇದರಿಂದಲೂ ಕೊರೋನಾ ಹಬ್ಬುವ ಸಂಭವವಿರುವುದರಿಂದ ತಡೆಯುವುದಕ್ಕಾಗಿ ಕಳ್ಳದಾರಿಗಳು ಸಂಧಿಸುವ ಕಡೆಗಳಲ್ಲೇ ಚೆಕ್‌ಪೋಸ್ಟ್‌ ಸ್ಥಾಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಅಂತಾರಾಜ್ಯ ಗಡಿ ಭಾಗಗಳಲ್ಲಿನ ಪೊಲೀಸ್‌ ಇಲಾಖೆ ಅಧಿಕಾರಿಗಳೊಂದಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಿದ್ದೇನೆ. ಶೀಘ್ರದಲ್ಲೇ ಚೆಕ್‌ಪೋಸ್ಟ್‌ ಸ್ಥಾಪಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.