ಪುತ್ತೂರು [ಸೆ.05]:  ಪುತ್ತೂರು ತಾಲೂಕು ಹಿಂಜಾವೇ ಸಮಿತಿಯ ಕಾರ್ಯದರ್ಶಿ, ಆರ್ಯಾಪು ಗ್ರಾಮದ ಮೇರ್ಲ ಕಾರ್ತಿಕ್‌ ಸುವರ್ಣ (27) ಎಂಬವರನ್ನು ತಂಡವೊಂದು ಕತ್ತಿಯಿಂದ ಕಡಿದು ಕೊಂದ ಘಟನೆ ಪುತ್ತೂರು ಗ್ರಾಮಾಂತರ ಠಾಣೆಯ ಮುಂಭಾಗದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಪ್ರಕರಣದ ವಿವರ: ಪುತ್ತೂರು ಗ್ರಾಮಾಂತರ ಠಾಣೆಯ ಮುಂಭಾಗದಲ್ಲಿ ಸ್ಥಳೀಯ ಯುವಕಮಂಡಲದ ವತಿಯಿಂದ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಗಣೇಶ ವಿಗ್ರಹದ ಶೋಭಾ ಯಾತ್ರೆ ಹೊರಟು ಅರ್ಧ ದಾರಿ ತಲುಪಿದ ಬಳಿಕ ವೇದಿಕೆಯಲ್ಲಿ ಯಕ್ಷಗಾನ ನಡೆಯುತ್ತಿತ್ತು. ಕಾರ್ತಿಕ್‌ ಸುವರ್ಣ ಅವರು ಶೋಭಾ ಯಾತ್ರೆಯಲ್ಲಿ ತೆರಳದೆ ಸಭೆಯ ಕೊನೆಯ ಸಾಲಿನಲ್ಲಿ ನಿಂತು ಯಕ್ಷಗಾನ ವೀಕ್ಷಣೆ ಮಾಡುತ್ತಿದ್ದರು.

ಆ ವೇಳೆ ಅಲ್ಲಿಗೆ ಬಂದ ಸಂಪ್ಯ ನಿವಾಸಿಗಳಾದ ಚರಣ್‌ರಾಜ್‌, ಕಿರಣ್‌ ಮತ್ತು ಕಾರು ಚಾಲಕ ಪ್ರೀತೇಶ್‌ ಎಂಬವರು ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ತಿಕ್‌ ಸುವರ್ಣ ಬಳಿ ಬಂದು ಕಿರಣ್‌ ಅವರ ಕೈಯನ್ನು ಹಿಡಿದುಕೊಂಡಿದ್ದು ಆ ವೇಳೆ ಪ್ರೀತೇಶ್‌ ಕತ್ತಿಯಿಂದ ಕಾರ್ತಿಕ್‌ ಎದೆಭಾಗಕ್ಕೆ ತಿವಿದಿದ್ದಾನೆ. ಹಲ್ಲೆಯಿಂದ ತಕ್ಷಣ ತೀವ್ರ ರಕ್ತಸ್ರಾವದಿಂದ ಕಾರ್ತಿಕ್‌ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ವಾಹನ ವೊಂದರಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕತ್ತಿಯಿಂದ ತಿವಿದ ಬಳಿಕ ಮೂವರು ಆರೋಪಿಗಳು ತಿವಿದ ಕತ್ತಿಯ ಜೊತೆಗೆ ಕಾರಿನಲ್ಲಿ ಪರಾರಿಯಾಗಿದ್ದಾರೆ. ಹಳೆಯ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಂಪ್ಯ ಗ್ರಾಮಾಂತರ ಎಸ್‌ ಐ ಸತ್ತಿವೇಲು ಮಾಹಿತಿ ನೀಡಿದ್ದಾರೆ.

ಹಳೆಯ ದ್ವೇಷಕ್ಕೆ ಕೊಲೆ?

2018 ಜನವರಿಯಲ್ಲಿ ಇದೇ ತಂಡದೊಳಗೆ ಠಾಣೆಯ ಬಳಿಯೇ ಮಾರಾಮಾರಿ ನಡೆದಿತ್ತು. ಕಿಶೋರ್‌ ಪೂಜಾರಿ ಎಂಬವರಿಗೆ ಕಾರ್ತಿಕ್‌ ಚಿಟ್‌ ಫಂಡ್‌ ಹಣವನ್ನು ನೀಡುವುದು ಬಾಕಿ ಇರಿಸಿದ್ದ. ಈ ವಿಚಾರವಾಗಿ ಕಾರ್ತಿಕ್‌ನ್ನು ಪ್ರಶ್ನಿಸಲು ಚರಣ್‌ರಾಜ್‌, ಕಿಶೋರ್‌ ಅವರನ್ನೊಳಗೊಂಡ ತಂಡ ಸಂಪ್ಯಕ್ಕೆ ಬಂದಾಗ ಅಲ್ಲಿ ಇವರೊಳಗೆ ಮಾರಾಮಾರಿ ನಡೆದಿತ್ತು. ಈ ಪ್ರಕರಣದಲ್ಲಿ ಮೃತ ಕಾರ್ತಿಕ್‌ ಆರೋಪಿಯೂ ಆಗಿದ್ದ. ಇವರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 307 ಐಪಿಸಿ ಸೆಕ್ಷನ್‌ ನಡಿ ಪ್ರಕರಣ ದಾಖಲಾಗಿತ್ತು. ಇದೇ ದ್ವೇಷದಲ್ಲಿ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.