ಜಿಹಾದಿ ಮನಸ್ಥಿತಿಗಳ ಕುರಿತು ಹಿಂದೂ ಮಹಿಳೆಯರು ಜಾಗೃತರಾಗಿ: ಚಕ್ರವರ್ತಿ ಸೂಲಿಬೆಲೆ
ದೇಶದ ಹಿಂದೂ ಮಹಿಳೆಯರು ಜಿಹಾದಿ ಮನಸ್ಥಿತಿಗಳ ಕುರಿತು ಜಾಗೃತರಾಗುವ ಮೂಲಕ ಅದರ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದ ಚಕ್ರವರ್ತಿ ಸೂಲಿಬೆಲೆ
ಹುಬ್ಬಳ್ಳಿ(ಏ.28): ನೇಹಾ ಹಿರೇಮಠ ಹತ್ಯೆ ಖಂಡಿಸಿ ಶನಿವಾರ ಸಂಜೆ ನಗರದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಾಗೂ ಪಂಜಿನ ಮೆರವಣಿಗೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಯುವ ಸಮೂಹ ಈ ಮೆರವಣಿಗೆಯಲ್ಲಿ ಭಾಗವಹಿಸಿ ನೇಹಾ ಹತ್ಯೆಯ ನ್ಯಾಯಕ್ಕೆ ಆಗ್ರಹಿಸಿದರು.
ಮೂರುಸಾವಿರಮಠದ ಮೈದಾನದಿಂದ ಆರಂಭವಾದ ಮೌನ ಮೆರವಣಿಗೆಯು ಮಹಾವೀರ ಗಲ್ಲಿ, ತುಳಜಾಭವಾನಿ ವೃತ್ತ, ದಾಜಿಬಾನ್ ಪೇಟ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ವರೆಗೆ ನಡೆಯಿತು. ನಂತರ ಇಲ್ಲಿ ಸಭೆಯಾಗಿ ಮಾರ್ಪಟ್ಟು ಲವ್ ಜಿಹಾದ್‌ಗೆ ಬಲಿಯಾದ ಯುವತಿಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ನೇಹಾ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲಿ: ವಿಜಯೇಂದ್ರ ಆಗ್ರಹ
ಸದ್ಭಾವನಾ ವೇದಿಕೆ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ದೇಶದ ಹಿಂದೂ ಮಹಿಳೆಯರು ಜಿಹಾದಿ ಮನಸ್ಥಿತಿಗಳ ಕುರಿತು ಜಾಗೃತರಾಗುವ ಮೂಲಕ ಅದರ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈಚೆಗೆ ನಡೆದ ನೇಹಾ ಹತ್ಯೆಯಿಂದಾಗಿ ಇಡೀ ದೇಶವೇ ಭಯಬೀತವಾಗಿದೆ. ಇದೊಂದು ವ್ಯವಸ್ಥಿತವಾಗಿ ಸಂಚು ರೂಪಿಸಿ ಮಾಡಿರುವ ಹತ್ಯೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ದೇಶದಲ್ಲಿ ದಿನ ಬೆಳಗಾದರೆ ಲವ್ ಜಿಹಾದ್ ನಂತಹ ಸಾಕಷ್ಟು ಪ್ರಕರಣಗಳು ನಡೆಯುತ್ತಿವೆ. 2017ರಿಂದ 3 ವರ್ಷಗಳಲ್ಲಿ 21 ಸಾವಿರ ಯುವತಿಯರು ಕಾಣೆಯಾದ ಬಗ್ಗೆ ಗೃಹ ಸಚಿವರೆ ಹೇಳಿಕೆ ನೀಡಿದ್ದಾರೆ. ಮುಸಲ್ಮಾನ್ ಆಕ್ರಮಣ ಈ ದೇಶದ ಮೇಲೆ ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತಾ ಬಂದಿದೆ. ಇದಕ್ಕೆಲ್ಲ ಜಿಹಾದಿ ಮನಸ್ಥಿತಿಯೇ ಕಾರಣ. ಇಷ್ಟೆಲ್ಲ ದಾಳಿಯ ನಡುವೆಯೂ ನಮ್ಮ ಪೂರ್ವಜರು ಹಿಂದೂ ಧರ್ಮವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಮುಂದಾದರೂ ಈ ಜಿಹಾದ್‌ನ ಮೂಲ ಹುಡುಕಿ ಅದರ ಬೇರು ಕಿತ್ತೆಸೆಯುವ ಕಾರ್ಯವಾಗಬೇಕಿದೆ ಎಂದರು.
ಹಿಂದೂ ಧರ್ಮ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲು ಹಿಂದೇಟು ಹಾಕುತ್ತಿಲ್ಲ. ಆ ಸ್ವಾತಂತ್ರ್ಯವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳಲು ಹೊಂಚು ಹಾಕುತ್ತಾರೆ ಇದನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಎಂದರು.
ನೇಹಾ ಹತ್ಯೆ ಪ್ರಕರಣವನ್ನು ನಾವು ಲವ್ ಜಿಹಾದ್ ಎಂದು ಧೈರ್ಯವಾಗಿ ಹೇಳುವಂತಾಗಬೇಕು. ಎಲ್ಲ ಮಠಾಧೀಶರು, ಸಂತರು, ಹಿಂದೂ ಸಮಾಜ ಒಂದು ಎಂದು ಹೇಳುವ ಮೂಲಕ ಈ ಲವ್ ಜಿಹಾದ್‌ನ ಮೂಲ ಬೇರನ್ನು ಕಿತ್ತೆಸೆಯಬೇಕು. ಈ ಹೋರಾಟ ಹುಬ್ಬಳ್ಳಿಯಿಂದಲೇ ಆರಂಭವಾಗಲಿ ಎಂದರು.
ಹುಬ್ಬಳ್ಳಿ: ನೇಹಾ ತಂದೆಗೆ ಧೈರ್ಯ ತುಂಬಿ, ನಿಮ್ಮ ಜೊತೆ ನಾವಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ
ಸಾನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀ ಮಾತನಾಡಿ, ಮಹಿಳೆಯರನ್ನು ಗೌರವದಿಂದ ಕಾಣುವಂತಹ ಈ ನಾಡಿನಲ್ಲಿ ನೇಹಾ ಭೀಕರ ಹತ್ಯೆ ನಮಗೆ ತೀವ್ರ ನೋವುಂಟು ಮಾಡಿದೆ. ಸರ್ಕಾರ, ನ್ಯಾಯಾಂಗ ವ್ಯವಸ್ಥೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ಶಿವಾನಿ ಶೆಟ್ಟಿ, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ಭಾಗ್ಯಶ್ರೀ ಬೆಳ್ಳಿ ಮಾತನಾಡಿದರು. ಈ ಸಂದರ್ಭದಲ್ಲಿ ಶಂಕ್ರಣ್ಣ ಮುನವಳ್ಳಿ, ಮಹಾದೇವ ಕರಮರಿ, ಸುಭಾಷಸಿಂಗ್ ಜಮಾದಾರ ಸೇರಿದಂತೆ ಹಲವರಿದ್ದರು.