ಗಂಗಾವತಿ(ಫೆ.16): ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವಿರೂಪಾಪುರಗಡ್ಡೆಯಲ್ಲಿರುವ ಅನಧಿಕೃತ ರೆಸಾರ್ಟ್‌ಗಳನ್ನು ತಕ್ಷಣದಿಂದಲೇ ತೆರವುಗೊಳಿಸಬೇಕೆಂಬ ಜಿಲ್ಲಾಡಳಿತ, ಹಂಪಿ ಪ್ರಾಧಿಕಾರದ ಕಾರ್ಯಕ್ಕೆ ಹೈಕೋರ್ಟ್‌ ಶನಿವಾರ 10 ದಿನಗಳ ತಡೆಯಾಜ್ಞೆ ನೀಡಿದೆ. 

ಮೂವತ್ತು ವರ್ಷಗಳಿಂದ ಅಕ್ರಮವಾಗಿ ನಿರ್ಮಿಸಿಕೊಂಡಿರುವ ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ ಫೆ.11ರಂದು ಆದೇಶ ಹೊರಡಿಸಿತ್ತು. ಜತೆಗೆ, ಸ್ವಯಂಪ್ರೇರಿತವಾಗಿ ರೆಸಾರ್ಟ್‌ ತೆರವುಗೊಳಿಸಲು ಅನುಕೂಲವಾಗುವಂತೆ ಒಂದು ತಿಂಗಳ ಕಾಲಾವಕಾಶವನ್ನೂ ನೀಡಿತ್ತು. ಆದರೆ, ಜಿಲ್ಲಾಡಳಿತ ಮತ್ತು ಹಂಪಿ ಪ್ರಾಧಿಕಾರವು ರೆಸಾರ್ಟ್‌ ಮಾಲೀಕರಿಗೆ ಶನಿವಾರದೊಳಗೆ ರೆಸಾರ್ಟ್‌ ತೆರವುಗೊಳಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ 15ಕ್ಕೂ ಹೆಚ್ಚು ರೆಸಾರ್ಟ್‌ ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿಯಲ್ಲಿ ಹಂಪಿ ಮಹಾಯೋಜನೆ ಕುರಿತು ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಂಪಿ ಮಹಾಯೋಜನೆ ಸಿದ್ಧಪಡಿಸಿದ ಮಾಹಿತಿಯೇ ಸರಿಯಿಲ್ಲ ಎಂದು ಅರ್ಜಿ ಸಲ್ಲಿಸಿದ್ದರಿಂದ ಕೋರ್ಟ್‌ ಈ ತಡೆಯಾಜ್ಞೆ ನೀಡಿದೆ. ಫೆ.24ರಂದು ಈ ಕುರಿತು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್‌ ನಿರ್ದೇಶನ ನೀಡಿದೆ.