Asianet Suvarna News Asianet Suvarna News

Heavy Rain: ಭಾರಿ ಮಳೆಗೆ ಕೊಚ್ಚಿ ಹೋದ ರಸ್ತೆಗಳು

ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ತಾಲೂಕಿನ ಜನರು ತತ್ತರಗೊಳ್ಳುವಂತೆ ಮಾಡಿದೆ. ತಡರಾತ್ರಿ ಸುರಿದ ಮಳೆಗೆ ಹಲವು ಸೇತುವೆಗಳು ಮುಳುಗಡೆಯಾಗಿದ್ದು, ಹಲವು ರಸ್ತೆಗಳ ಮೇಲೆ ನೀರು ಹರಿದು ಸಾರ್ವಜನಿಕರು ಪರದಾಡಿದರು.

Heavy rainfall washed away raod at lakshmeshwar gadag rav
Author
First Published Sep 3, 2022, 1:08 PM IST

ಲಕ್ಷ್ಮೇಶ್ವರ (ಸೆ.3) : ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ತಾಲೂಕಿನ ಜನರು ತತ್ತರಗೊಳ್ಳುವಂತೆ ಮಾಡಿದೆ. ತಡರಾತ್ರಿ ಸುರಿದ ಮಳೆಗೆ ಹಲವು ಸೇತುವೆಗಳು ಮುಳುಗಡೆಯಾಗಿದ್ದು, ಹಲವು ರಸ್ತೆಗಳ ಮೇಲೆ ನೀರು ಹರಿದು ಸಾರ್ವಜನಿಕರು ಪರದಾಡಿದರು. ಸಮೀಪದ ಶೆಟ್ಟಿಕೇರಿ ಕೆರೆಯ ನೀರು ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ಹರಿದು ಹೋಗುವ ಜೊತೆಯಲ್ಲಿ ರೈತರ ಹೊಲಗಳಿಗೆ ನುಗ್ಗಿ ಬೆಳೆಗಳು ನಾಶವಾಗಿವೆ. ಶೆಟ್ಟಿಕೇರಿ ಗ್ರಾಮದ ಲಂಬಾಣಿ ಮಹಿಳೆಯರು ರಸ್ತೆ ಹಾಳಾಗಿರುವ ಘಟನೆಯ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿರುವ ಘಟನೆ ಕಂಡು ಬಂದಿದೆ. ಹೊಲಗಳಲ್ಲಿ ಎಲ್ಲಿ ನೋಡಿದಲ್ಲಿ ನೀರಿನ ಹೊಂಡಗಳು ಸೃಷ್ಟಿಯಾಗಿವೆ. ವಿಪರೀತ ಮಳೆಗೆ ಹೊಲಗಳು ಜವಳು ಬಿದ್ದು ಹೋಗಿ ಬೆಳೆಗಳು ಕೊಳೆತು ಹೋಗುವ ಸ್ಥಿತಿ ತಲುಪಿದೆ. ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿರುವ ಘಟನೆ ಸಮೀಪದ ಹುಲ್ಲೂರ ಹಾಗೂ ಯಲ್ಲಾಪುರದಲ್ಲಿ ಕಂಡು ಬಂದಿವೆ.

ಕುಂಭದ್ರೋಣ ಮಳೆಗೆ ಕಪ್ಪತ್ತಗುಡ್ಡ ಕುಸಿತ

ಶೆಟ್ಟಿಕೇರಿ(Shettikere) ಕೆರೆಗೆ ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ಶೆಟ್ಟಿಕೇರಿ ಗ್ರಾಮದಿಂದ ಶಿರಹಟ್ಟಿ(Shirahatti)ಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕೊಚ್ಚಿಕೊಂಡು ಹೋಗಿದೆ. ಅದೆ ರೀತಿ ಪು.ಬಡ್ನಿಯಿಂದ ಆದ್ರಳ್ಳಿ, ದೇವಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ದೊಡ್ಡ ಹಳ್ಳದ ನೀರು ಸೇತುವೆ ಮೇಲೆ ಹರಿಯುವ ಮೂಲಕ ಅಕ್ಕ ಪಕ್ಕದಲ್ಲಿನ ಹೊಲಗಳಿಗೆ ನುಗ್ಗಿ ಫಲವತ್ತಾದ ಮಣ್ಣನ್ನು ಕೊಚ್ಚಿಕೊಂಡು ಹೋಗಿದೆ.

ಲಕ್ಷ್ಮೇಶ್ವರ(Lakshmeshwar)ದಿಂದ ಪು.ಬಡ್ನಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸಂಪೂರ್ಣ ಹದಗೆಟ್ಟು ಹೋಗಿದ್ದು, ಹಲವು ಬೈಕ್‌ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಕಾರುಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು ಪ್ರಯಾಣಿಕರು ಪರದಾಡಿದ್ದಾರೆ. ಈ ರಸ್ತೆಯ ಮೇಲೆ ಅದ್ರಳ್ಳಿ ಗ್ರಾಮದ ಕಡೆಗೆ ಕೋಳಿಗಳನ್ನು ಹೇರಿಕೊಂಡು ಹೋಗುತ್ತಿದ್ದ ಟೆಂಪೋ ಕೆಸರಲ್ಲಿ ಸಿಕ್ಕಿಕೊಂಡು ಗಾಡಿಯು ಮುಗುಚಿ ಬಿದ್ದು ಕೋಳಿಗಳು ಹಾರಾಡಿ ಹೋಗಿರುವ ಘಟನೆ ಶುಕ್ರವಾರ ನಡೆದಿದೆ. ಹುಲ್ಲೂರು. ಬಟ್ಟೂರ, ಅಕ್ಕಿಗುಂದ, ದೊಡ್ಡೂರ, ಅಮರಾಪೂರ, ಹರದಗಟ್ಟಿ, ಪು.ಬಡ್ನಿ. ಯಳವತ್ತಿ, ಮಾಡಳ್ಳಿ, ಯ್ತತಿನಹಳ್ಳಿ ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಬಂದ್‌ ಆಗಿದೆ. ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ ಗ್ರಾಮಗಳಲ್ಲಿ ಮಳೆಯ ನೀರು ಮನೆಯೊಳಗೆ ಹೊಕ್ಕು ದವಸ ಧಾನ್ಯ, ಬಟ್ಟೆಬರೆ ನೀರು ಪಾಲಾಗಿರುವ ಘಟನೆ ನಡೆದಿದೆ. ಲಕ್ಷ್ಮೇಶ್ವರ ಪಟ್ಟಣದಲ್ಲಿನ ಇಟ್ಟಿಗೇರಿ ಕೆರೆಯಲ್ಲಿ ಈಚೆಗೆ ನಿರ್ಮಾಣಗೊಂಡಿರುವ ಶಿರಡಿ ಸಾಯಿಬಾಬಾ ಮಂದಿರದೊಳಗೆ ಮಳೆಯ ನೀರು ಹೊಕ್ಕಿದೆ. ಅಕ್ಕಪಕ್ಕದಲ್ಲಿನ ಮನೆಗಳಿಗೂ ನೀರು ಹೊಕ್ಕು ಹಲವು ಆವಾಂತರ ಸೃಷ್ಟಿಮಾಡಿದೆ.

ಶಾಸಕ ರಾಮಣ್ಣ ಭೇಟಿ: ಮಳೆ ನೀರು ಹೊಕ್ಕಿರುವ ಸಾಯಿಬಾಬಾ ಮಂದಿರಕ್ಕೆ ಶಾಸಕ ರಾಮಣ್ಣ(MLA Ramanna) ಲಮಾಣಿ ಭೇಟಿ ನೀಡಿ ದೇವಸ್ಥಾನದ ಅರ್ಚಕರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಟ್ಟಿಗೇರಿ ಕೆರೆಯ ಅಂಗಳದಲ್ಲಿ ಮನೆ ಕಟ್ಟಿಸಿಕೊಂಡಿರುವ ಜನರು ಸದ್ಯ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನಲ್ಲಿ ಈ ವರ್ಷ ಅತಿವೃಷ್ಟಿಅಪಾರ ಸಂಕಷ್ಟಸೃಷ್ಟಿಮಾಡಿದೆ. ವಿಪರೀತ ಮಳೆಗೆ ತಾಲೂಕಿನ ಬಹುತೇಕ ರಸ್ತೆಗಳು ಕಿತ್ತು ಹೋಗಿವೆ. ವಿಪರೀತ ಮಳೆಗೆ ತಾಲೂಕಿನಾದ್ಯಂತ ನೂರಾರು ಮನೆಗಳು ಜಖಂಗೊಂಡಿವೆ. ಮನೆಯೊಳಗೆ ಮಳೆ ನೀರು ಹೊಕ್ಕು ತೊಂದರೆ ಅನುಭವಿಸುತ್ತಿರುವ ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಸಮಗ್ರ ವರದಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಕೈಸೇರಿದ ತಕ್ಷಣ ಸರ್ಕಾರಕ್ಕೆ ಹೆಚ್ಚಿನ ಅನುಧಾನ ನೀಡುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

Heavy Rain: ಧಾರವಾಡ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆ: ಒಂದು ಬಲಿ

ಶಾಲಾ ಮೈದಾನದಲ್ಲಿ ಸಿಲುಕಿದ ಬಿಸಿಯೂಟದ ಅಕ್ಕಿ ಲಾರಿ

ಲಕ್ಷ್ಮೇಶ್ವರ ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಸರ್ಕಾರಿ ಪ್ರೌಢಶಾಲೆಗೆ ಬಿಸಿಯೂಟದ ಅಕ್ಕಿ ಚೀಲ ಇಳಿಸಲು ಬಂದ ಟ್ರಕ್‌ ಆಟದ ಮೈದಾನದಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಶುಕ್ರವಾರ ನಡೆದಿದೆ. ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಹಲವಾರು ಆವಾಂತರ ಉಂಟಾಗುತ್ತಿದೆ. ಪಟ್ಟಣದ ಮಹಾಂತಿನ ಮಠದ ಹತ್ತಿರ ಇರುವ ಸರ್ಕಾರಿ ಪ್ರೌಢಶಾಲೆಗೆ ಬಿಸಿಯೂಟದ ಅಕ್ಕಿ ಚೀಲಗಳನ್ನು ಇಳಿಸಲು ಬಂದ ಟ್ರಕ್‌ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಟ್ರಕ್‌ನ್ನು ಹೊರ ತರಲು ಜನರು ಹರಸಾಹಸಪಟ್ಟರು. ಆದರೂ ಲಾರಿ ಹೊರಬರಲಿಲ್ಲ, ಆಗ ಜೆಸಿಬಿ ಯಂತ್ರ ಬಳಸಿ ಲಾರಿಯನ್ನು ಹೊರ ತರುವ ಕಾರ್ಯ ಮಾಡಲಾಯಿತು ಎಂದು ಮುಖ್ಯೋಪಾಧ್ಯಾಯಿನಿ ಡಾ. ಜಯಶ್ರೀ ಹೊಸಮನಿ ಹೇಳಿದರು.

Follow Us:
Download App:
  • android
  • ios