ಹಾವೇರಿ To ಹುಬ್ಬಳ್ಳಿ ಜೀರೋ ಟ್ರಾಫಿಕ್‌: ಪುಟ್ಟ ಕಂದಮ್ಮನ ಪ್ರಾಣ ಉಳಿಸಿದ ಪೊಲೀಸರು

ಹಾವೇರಿಯಿಂದ ಪೊಲೀಸ್‌ ಎಸ್ಕಾರ್ಟ್‌ನಲ್ಲಿ ಬಂದಿದ್ದ 2 ಶಿಶುಗಳು| ಒಂದು ಮಾರ್ಗಮಧ್ಯದಲ್ಲೇ ಸಾವು|ಇನ್ನೊಂದರ ಆರೋಗ್ಯ ಚೇತರಿಕೆ| ತಾಯಿಯ ಆರೋಗ್ಯವೂ ಸ್ಥಿರ, ಕಿಮ್ಸ್‌ನಲ್ಲಿ ಮಗುವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ|

Haveri to Hubballi Zero Traffic Infant Health Stable in KIMS in Hubballi

ಹುಬ್ಬಳ್ಳಿ(ಜ.30): ಹಾವೇರಿಯಿಂದ ಪೊಲೀಸ್‌ ಎಸ್ಕಾರ್ಟ್‌ ಮೂಲಕ ಜೀರೋ ಟ್ರಾಫಿಕ್‌ನಲ್ಲಿ ಚಿಕಿತ್ಸೆಗೆ ಕಿಮ್ಸ್‌ಗೆ ತಂದ ಅವಳಿ ಗಂಡು ನವಜಾತ ಶಿಶುಗಳಲ್ಲಿ ಒಂದು ಶಿಶು ಸಾವನ್ನಪ್ಪಿದರೆ, ಇನ್ನೊಂದು ಶಿಶು ಆರೋಗ್ಯವಾಗಿದ್ದು ಚೇತರಿಸಿಕೊಳ್ಳುತ್ತಿದೆ. ಈ ನಡುವೆ ತಾಯಿಯ ಆರೋಗ್ಯವೂ ಸ್ಥಿರವಾಗಿದ್ದು, ಕಿಮ್ಸ್‌ನಲ್ಲಿ ಮಗುವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆಗಿದ್ದೇನು?:

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಬೆನಕನಹಳ್ಳಿ ಲಕ್ಷ್ಮಿ ದುರ್ಗಪ್ಪ ಕುಳ್ಳಣ್ಣವರ (33) ಅವರಿಗೆ ಅವಧಿ ಪೂರ್ವ ಹೆರಿಗೆಯಾಗಿತ್ತು. ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಳು. ಹೆರಿಗೆಯಾದ ಒಂದು ದಿನದ ಬಳಿಕ ಎರಡು ಶಿಶುಗಳ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಆಧುನಿಕ ಚಿಕಿತ್ಸಾ ವ್ಯವಸ್ಥೆ ಇಲ್ಲದ ಕಾರಣ ಹುಬ್ಬಳ್ಳಿ ಕಿಮ್ಸ್‌ಗೆ ರವಾನಿಸಲು ಅಲ್ಲಿನ ವೈದ್ಯರು ನಿರ್ಧರಿಸಿದ್ದರು. ಆದರೆ, ಟ್ರಾಫಿಕ್‌ ಜಾಮ್‌ ಉಂಟಾಗಿ ಆ್ಯಂಬುಲೆನ್ಸ್‌ ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡರೆ ಎರಡು ಶಿಶುಗಳ ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು. ಈ ಕಾರಣಕ್ಕಾಗಿ ಅಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಈ ಮಾಹಿತಿಯನ್ನು ವೈದ್ಯರು ತಿಳಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಜೀರೋ ಟ್ರಾಫಿಕ್‌ ಮಾಡಿ, ಪೊಲೀಸ್‌ ಎಸ್ಕಾರ್ಟ್‌ನಲ್ಲಿ ಆ್ಯಂಬುಲೆನ್ಸ್‌ ಕಳುಹಿಸಲು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಪೊಲೀಸ್‌ ಎಸ್ಕಾರ್ಟ್‌ ಮೂಲಕ ಎರಡು ಶಿಶುಗಳನ್ನು ಇನ್‌ಕ್ಯೂಬೆಟರ್‌ನಲ್ಲಿ ತಂದಿದ್ದಾರೆ. ಆದರೆ, ಮಾರ್ಗ ಮಧ್ಯದಲ್ಲೇ ಒಂದು ಶಿಶು ಕೊನೆಯುಸಿರೆಳೆದಿದೆ. ಇನ್ನೊಂದು ಶಿಶುವಿನ ಆರೋಗ್ಯ ಗಂಭೀರವಾಗಿತ್ತು. ಕಿಮ್ಸ್‌ಗೆ ತರುತ್ತಿದ್ದಂತೆ ಇಲ್ಲಿನ ವೈದ್ಯರು ತಕ್ಷಣವೇ ತುರ್ತು ಚಿಕಿತ್ಸಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದ್ದಾರೆ. ಇದರ ಪರಿಣಾಮದಿಂದ ಇದೀಗ ಶಿಶುವಿನ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದೆ.

ನಂತರ ಬಂದ ತಾಯಿ:

ಈ ನಡುವೆ ತಾಯಿ ಲಕ್ಷ್ಮಿ ಕುಳ್ಳಣ್ಣವರ ಅವಳನ್ನು ಹಾವೇರಿ ಜಿಲ್ಲಾಸ್ಪತ್ರೆಯಲ್ಲೇ ಬಿಟ್ಟು ಶಿಶುಗಳನ್ನು ಕರೆದುಕೊಂಡು ಬರಲಾಗಿತ್ತು. ಬಳಿಕ ತಾಯಿ ಲಕ್ಷ್ಮಿ ಹಾವೇರಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿ ಕಿಮ್ಸ್‌ಗೆ ಬಂದಿದ್ದು, ತನ್ನ ಮಗುವಿನ ಆರೈಕೆ ಮಾಡುತ್ತಿದ್ದಾಳೆ. ತಾಯಿಗೆ ಯಾವುದೇ ಸಮಸ್ಯೆಯಿಲ್ಲ. ಅಗತ್ಯಬಿದ್ದರೆ ಅವಳಿಗೂ ಚಿಕಿತ್ಸೆ ನೀಡಲಾಗುವುದು ಎಂದು ಕಿಮ್ಸ್‌ ಮೂಲಗಳು ತಿಳಿಸಿವೆ. ಜೀರೋ ಟ್ರಾಫಿಕ್‌ನಲ್ಲಿ ಶಿಶುಗಳನ್ನು ಕರೆದುಕೊಂಡು ಬಂದು ಒಂದು ಶಿಶುವಿನ ಜೀವ ಉಳಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಕಿಮ್ಸ್‌ ಅಧೀಕ್ಷಕ ಡಾ. ಅರುಣಕುಮಾರ ಅವರು, ಹಾವೇರಿ ಜಿಲ್ಲಾಸ್ಪತ್ರೆಯಿಂದ ಮಂಗಳವಾರ ಜೀರೋ ಟ್ರಾಫಿಕ್‌ನಲ್ಲಿ ಎರಡು ಶಿಶುಗಳನ್ನು ಪೊಲೀಸರು ಕರೆದುಕೊಂಡು ಬಂದಿದ್ದರು. ಅದರಲ್ಲಿ ಒಂದು ಮಗು ಇಲ್ಲಿಗೆ ಬರುವಾಗಲೇ ಮೃತಪಟ್ಟಿತ್ತು. ಇನ್ನೊಂದು ಶಿಶು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಇದೀಗ ಅದರ ಆರೋಗ್ಯ ಸ್ಥಿರವಾಗಿದ್ದು ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios