ಹಾಸನ (ಫೆ.23): ಮದುವೆ ಕಾರ್ಯಕ್ರಮ ಮುಗಿಸಿ ಮನೆ ಕಡೆ ಬೈಕ್ ನಲ್ಲಿ ತೆರಳುತ್ತಿದ್ದಾಗ ತಮ್ಮ ಮೇಲೆರಗಿದ ಚಿರತೆಯನ್ನೇ ವ್ಯಕ್ತಿಯೋರ್ವ  ಹತ್ಯೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬೆಂಡೆಕರೆ ತಾಂಡ್ಯ ಬಳಿಯಲ್ಲಿ ಈ ಘಟನೆ ನಡೆದಿದೆ.  ಬೆಂಡೆಕೆರೆಯ ರಾಜಗೋಪಾಲ್ ನಾಯ್ಕ್ ಎಂಬುವವರು ಚಿರತೆ ಕೊಂದು ಪ್ರಾಣ  ರಕ್ಷಿಸಿಕೊಂಡಿದ್ದಾರೆ. 

ಮಗಳು, ಪತ್ನಿ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಚಿರತೆ ಮೇಲೆರಗಿದೆ. ಈ ವೇಳೆ ಪ್ರಾಣ ರಕ್ಷಣೆಗೆ ಹರಸಾಹಸ ಮಾಡಿ ಸುಮಾರು 20 ನಿಮಿಷಗಳ ಕಾಲ ಚಿರತೆಯೊಂದಿಗೆ ಕಾದಾಡಿದ್ದಾರೆ. 
ಕಂಕುಳಲ್ಲಿ ಚಿರತೆ ಕುತ್ತಿಗೆ ಹಿಡಿದುಕೊಂಡು ಪ್ರಾಣ ತೆಗೆದಿದ್ದಾರೆ. 

ಕೊನೆಗೂ ಸೆರೆಸಿಕ್ಕ ನರಭಕ್ಷಕ ಹೆಣ್ಣು ಹುಲಿ.. ಕಾರ್ಯಾಚರಣೆ ಹೇಗಿತ್ತು? ಪೋಟೋಸ್

ಇದಕ್ಕೂ  ಮುನ್ನ  ಇಲ್ಲಿಯೇ ತಾಯಿ ಮಗನ ಮೇಲೆ ಇದೇ ಚಿರತೆ ದಾಳಿ ಮಾಡಿತ್ತು. ಚಂದ್ರಮ್ಮ ಪುತ್ರ ಕಿರಣ್ ಮೇಲೆ ದಾಳಿ ಮಾಡಿದ್ದು, ಕಿರಣ್ ಸಹ 15 ನಿಮಿಷ ಚಿರತೆ ಜೊತೆ ಕಾದಾಡಿ ತನ್ನ ತಾಯಿ ಪ್ರಾಣ ರಕ್ಷಣೆ ಮಾಡಿದ್ದರು.  

ಈಗ ರಾಜಗೋಪಾಲ ನಾಯ್ಕ್ ತಮ್ಮ ಮೇಲೆರಗಿದ ಚಿರತೆ ಕೊಂದು ಹಾಕಿದ್ದಾರೆ. ಮೊದಲು ರಾಜಗೋಪಾಲ್ ಅವರ ಮಗಳ ಮೇಲೆ ಚಿರತೆ ದಾಳಿ ಮಾಡಿದ್ದು, ಬಳಿಕ ಅವರ ಮೇಲೆರಗಿತ್ತು. ತಕ್ಷಣ ಚಿರತೆಯ ಕತ್ತನ್ನು ಬಿಗಿಯಾಗಿ ಹಿಡಿದುಕೊಂಡು ಮೊಣಕೈನಿಂದ ಗುದ್ದಿ ಹತ್ಯೆ ಮಾಡಿದ್ದಾರೆ. ಪ್ರಾಣ ರಕ್ಷಣೆಗಾಗಿ ಕೊಲ್ಲಬೇಕಾಯಿತು ಎಂದು ರಾಜಗೋಪಾಲ್ ಹೇಳಿದ್ದಾರೆ.