Asianet Suvarna News Asianet Suvarna News

ಕಲಬುರಗಿ ಜನರ ಕನ್ನಡ ಪ್ರೇಮಕ್ಕೆ ಮನ ಸೋತಿದ್ದೇನೆ: ಎಚ್ಚೆಸ್ವಿ

ನಾನಂತು ಪುಳಕಿತನಾದೆ, ಇಲ್ಲಿನ ಸಾಮರಸ್ಯ, ಕನ್ನಡಪರ ಪ್ರೀತಿ, ಪ್ರೇಮದಿಂದ ಮೂಕನಾದೆ: ಎಚ್ಚೆಸ್ವಿ| ಕಲಬುರಗಿ ತವರು ಮನೆ ಪ್ರೀತಿ ನೀಡಿತು|ಕನ್ನಡಪ್ರಭ ವರದಿಗಳಿಗೆ ಎಚ್ಚೆಸ್ವಿ ಮೆಚ್ಚುಗೆ|
 

H S Venkateshamurthy Talks Over Kalaburagi Kannnada Sahitya Sammelana
Author
Bengaluru, First Published Feb 9, 2020, 11:03 AM IST

ಕಲಬುರಗಿ(ಫೆ.09): ಕಲಬುರಗಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಳೆದ 3 ದಿನಗಳ ಕಾಲ ಅಕ್ಷರ ಜಾತ್ರೆ ಅಗ್ರ ಪೀಠದಲ್ಲಿ ವಿರಾಜಮಾನರಾಗಿದ್ದ ಒಲವಿನ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಕಲಬುರಗಿ ನಗರ, ಇಲ್ಲಿ ಉಕ್ಕಿ ಹರಿದ ಕನ್ನಡ ವಾತಾವರಣ ಕಂಡು ಮೂಕವಿಸ್ಮಿತರಾಗಿದ್ದಾರೆ. 

ಅವರ ಕಾವ್ಯ, ಇವರ ಧ್ವನಿ ಸೇರಿ ಆಯ್ತು ಭಾವಗೀತೆ; ಇದು ಎಚ್‌ಎಸ್‌ವಿ ಸಂದರ್ಶನ!

ಸಮ್ಮೇಳನದ 3 ದಿನಗಳ ಸತತ ಕಾರ್ಯಕ್ರಮ, ಗೋಷ್ಠಿಗಳು, ಸಾಂಸ್ಕೃತಿಕ ಸಂಜೆಯಂತಹ ಸರಣಿ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದ ವೆಂಕಟೇಶಮೂರ್ತಿ ಅವರು ಶನಿವಾರ ಕೊಂಚ ವಿರಮಿಸುವ ಹೊತ್ತಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಅವರನ್ನು ಕಲಬುರಗಿ ಅನುಭವಗಳ ಕುರಿತಂತೆ ಮಾತಿಗೆ ಎಳೆದಾಗ ತುಂಬ ಸಂತಸಗೊಂಡರು. ‘ನಾನು ಕಲಬುರಗಿಗೆ 3 ಬಾರಿ ಬಂದಿದ್ದೇನೆ. ಆದರೆ ಈ ಸಮ್ಮೇಳನ ಅಧಕ್ಷನಾಗಿ ಬಂದಿರುವ ನನಗೆ ಕಲಬುರಗಿ ಅಂತರಂಗ ದರುಶನವಾಗಿದೆ. ಜನರ ಪ್ರೀತಿ ನನ್ನನ್ನು ಮೂಕ ವಿಸ್ಮಿತನನ್ನಾಗಿಸಿದೆ. ಕಲಬುರಗಿ ಜನರ ಪ್ರೀತಿ, ಅಲ್ಲಿನ ಕನ್ನಡತನದ ದರುಶನ ನನಗಾಯ್ತು. ನನ್ನನ್ನು 3 ದಿನ ಮನೆ ಮಗನಂತೆ ನೋಡಿಕೊಂಡರು. ಹೆಣ್ಣು ಮಗಳು ತವರು ಮನೆಗೆ ಬಂದಾಗ ಅಲ್ಲಿನವರು ಹೇಗೆ ಪ್ರೀತಿ ತೋರುತ್ತಾರೋ ಹಾಗೆಯೇ ಕಲಬುರಗಿ ಜನ ನನಗೆ ತವರೂರಿನ ಪ್ರೀತಿ ನೀಡಿದರು ಎಂದು ವೆಂಕಟೇಶ ಮೂರ್ತಿ ಹೇಳಿದರು. 

ಚಲಿಸುತ್ತಿದ್ದ ರೈಲಿನಲ್ಲಿ ಎಚ್‌ಎಸ್ವಿ ಕುರಿತ ಪುಸ್ತಕ ಬಿಡುಗಡೆ!

ಸಮ್ಮೇಳನದ ಮಾರನೇ ದಿನ ವೆಂಕಟೇಶ ಮೂರ್ತಿ ಶರಣಬಸವೇಶ್ವರ ಮಂದಿರ, ಖಾಜಾ ಬಂದೇ ನವಾಜರ ಸಮಾಧಿ ಸ್ಥಳ, ಬುದ್ಧ ವಿಹಾರ ಹಾಗೂ ವೈಷ್ಣೋದೇವಿ ಮಂದಿರಗಳಿಗೆ ಭೇಟಿ ನೀಡಿ ಬಂದರು. ಕಲಬುರಗಿಯಲ್ಲಿನ ಜನರ ಕನ್ನಡ ಪ್ರೇಮಕ್ಕೆ ನಾನಂತೂ ಮನ ಸೋತಿದ್ದೇನೆ. ಅತ್ಯಂತ ಅಚ್ಚ ಕಟ್ಟಾಗಿ ನಡೆದ ಸಮ್ಮೇಳನದ ಅಧ್ಯಕ್ಷನಾಗಿರೋದು ನನಗೆ ಹೆಮ್ಮೆಯ ವಿಚಾರ ಎಂದರು. 

ಜಿಲ್ಲಾಡಳಿತದವರು, ಕಸಾಪದವರು ಎಲ್ಲರೂ ತುಂಬ ಪ್ರೀತಿಯಿಂದ ನೋಡಿಕೊಂಡರು. ಇಲ್ಲಿನ ಜನ, ಮಕ್ಕಳು, ಯುವಕರು ತುಂಬ ಹೆಚ್ಚಿನ ಸಮಯ ಸಮ್ಮೇಳನದಲ್ಲಿ ಕಳೆದು ಕನ್ನಡ ತೇರನ್ನೆಳೆದ ಪರಿ ಎಂದಿಗೂ ಮರೆಯಲಾರೆ. ನನ್ನ ಮೇಲಿನ ಅಭಿಮಾನ, ಕನ್ನಡದ ಮೇಲಿನ ಪ್ರೀತಿ, ಗೌರವ ಅದೆಷ್ಟಿತ್ತು ಎಂದರೆ ಮೆರವಣಿಗೆಯಿಂದ ಹಿಡಿದು ಕೊನೆಯ ದಿನದ ಸಮಾರೋಪದವರೆಗೂ ನನಗಂತೂ ಕಲಬುರಗಿ ಜನರ ಹೃದಯ ವೈಶಾಲ್ಯತೆ ಪ್ರತಿ ಹಂತ ದಲ್ಲೂ ಕಂಡಿತು ಎಂದರು. 

ಕನ್ನಡ ಸಾಹಿತ್ಯ ಸಮ್ಮೇಳನ: ತಾಯಿ ಭುವನೇಶ್ವರಿಗೆ ಪದಾರತಿ ಎತ್ತಿದ ಎಚ್‌ಎಸ್‌ವಿ!

ಪತ್ರಿಕೆಯವರೊಂದಿಗೆ ಸಂಬಂಧ ಇತ್ತು. ಆದರೆ ಈ ಪರಿಯಾಗಿ ಪತ್ರಿಕೆಯವರು ನನಗೆ ಬಡ್ಡಿ ಸಮೇತ ಋಣ ತೀರಿಸುತ್ತಾರೆಂದು ಅಂದುಕೊಂಡಿರಲಿಲ್ಲ. ನನಗೆ ಜನ ನೀಡಿದ ಪ್ರೀತಿ, ಪ್ರೇಮ, ಮಾಧ್ಯಮದವರ ಸಂಬಂಧ ಎಂದಿಗೂ ಮರೆಯದ ಅನುಭವ. ಅಚ್ಚುಕಟ್ಟಾಗಿ ನಡೆದ ಸಮ್ಮೇಳನ, ಕಲಬುರಗಿಗೆ ನಾನು ಎಂದಿಗೂ ಆಭಾರಿ ಎಂದು ತಿಳಿಸಿದರು. 

ಕನ್ನಡಪ್ರಭ ವರದಿಗಳಿಗೆ ಎಚ್ಚೆಸ್ವಿ ಮೆಚ್ಚುಗೆ: 

ಕನ್ನಡಪ್ರಭ ಪತ್ರಿಕೆ ಕಲಬುರಗಿ ಸಮ್ಮಳನದ ಹಿನ್ನೆಲೆಯಲ್ಲಿ ಹೊರ ತಂದಿರುವ ಕನ್ನಡ ತಾಯಿ ಮುಡಿಗೆ ಗುಲ್ಬರ್ಗ ಮಲ್ಲಿಗೆ ಪುರವಣಿ ಹಾಗೂ ಆ ದಿನದ ಎಚ್ಚೆಸ್ವಿ ಸಂದರ್ಶನವಿರುವ ರಾಜ್ಯ ಮಟ್ಟದ ವಿಶೇಷ ಪುರವಣಿ ಸೇರಿದಂತೆ ಸಮ್ಮೇಳನದ ೩ ದಿನಗಳ ಸರಣಿ ವರದಿಗಳು ತಮಗೆ ತುಂಬ ಹಿಡಿಸಿದವು. ಸಮ್ಮೇಳನದ ಇಂಚಿಂಚೂ ಮಾಹಿತಿ ಕನ್ನಡಪ್ರಭ ಹೊತ್ತು ತಂದು ಓದುಗರಿಗೆ ನೀಡಿದ್ದು ತುಂಬ ಖುಷಿ ಕೊಟ್ಟಿತು. ಪತ್ರಿಕೆಯ ಈ ಕೆಲಸ ಶ್ಲಾಘನೀಯ ಎಂದು ಡಾ. ವೆಂಕಟೇಶಮೂರ್ತಿ ಹೇಳಿದರು.

Follow Us:
Download App:
  • android
  • ios