ಸೋರುತ್ತಿದೆ ಗುರುಮಠಕಲ್ ಉಪ ತಹಸೀಲ್ದಾರ್ ಕಚೇರಿ ಮಾಳಿಗೆ!
ಮಳೆ ಬಂದರೆ ಸಾಕು ಜೀವ ಭಯದಿಂದ ಇಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಾಹಿಸುವ ಅನಿವಾರ್ಯ ಇದೆ| ಇಂತಹ ಹಳೆಯ ಕಟ್ಟಡದಲ್ಲಿ ಅಧಿಕಾರಿಗಳು ತಹಸೀಲ್ ಮತ್ತು ನಾಡಕಚೇರಿ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ| ಇಕ್ಕಟಿನ ಸ್ಥಳ ಇರುವುದರಿಂದ ಪುರಸಭೆಯಲ್ಲಿ ಒಂದು ಕೋಣೆಯನ್ನು ಪಡೆದು ತಹಸೀಲ್ದಾರ್ ಕಚೇರಿಯ ಕೆಲವು ಸಿಬ್ಬಂದಿ ಅಲ್ಲಿಗೆ ಕಳಿಸಿ ಕಂದಾಯ ಇಲಾಖೆಯ ಕಾರ್ಯವನ್ನು ಮಾಡಲಾಗುತ್ತಿದೆ| ಮಳೆ ಬಂದರೆ ಶಿಥಿಲೀಕರಣ ಗೋಡೆಯಿಂದ ಕಚೇರಿ ಸೋರುವುದರಿಂದ ರೈತರ ಪಹಣಿ ದಾಖಲಾತಿಗಳು ಮಳೆ ನೀರಿಗೆ ಹಾನಿ ಆಗುತ್ತದೆ ಎಂಬ ಭಯದ ವಾತಾವರಣ ರೈತರಿಗೆ ಮತ್ತು ಅಲ್ಲಿನ ಅಧಿಕಾರಿಗಳಿಗೆ ಇಬ್ಬರಿಗೂ ಇದೆ|
ಮೊಗುಲಪ್ಪ ಬಿ. ನಾಯಕಿನ್
ಗುರುಮಠಕಲ್[ಅ.4]: ಇಕ್ಕಟ್ಟಿನಲ್ಲಿ ಕಾರ್ಯ, ಶಿಥಿಲಗೊಂಡಿರುವ ಗೋಡೆಗಳು, ಮಳೆ ನೀರಿನಿಂದ ಸೋರುವುದನ್ನು ತಡೆಯಲು ಪ್ಲಾಸ್ಟಿಕ್ ಚೀಲದ ಹೊದಿಕೆಯೊಂದಿಗೆ ಚಾವಣಿಯ ರಕ್ಷಣೆ, ಮುಂತಾದ ದೃಶ್ಯ ಗಳು ಗುರುಮಠಕಲ್ ಪಟ್ಟಣದಲ್ಲಿರುವ ಉಪತಹಸೀಲ್ದಾರ್ ಕಚೇರಿ ಕಟ್ಟಡದಲ್ಲಿ ಕಂಡುಬರುತ್ತವೆ.
ರೈತರಿಗೆ ಅಭಯ, ಕಂದಾಯ ದಾಖಲೆಗಳು ಸುರಕ್ಷಿತವಾಗಿರಬೇಕಾಗಿರುವ ಸ್ಥಳದಲ್ಲಿ ಮಳೆ ಬಂದರೆ ಸಾಕು ಕಚೇರಿ ನೆಲದೊಳಗೆ 3 ಇಂಚು ಎತ್ತರ ತನಕ ನೀರು ತುಂಬಿ ಬಾವಿಯಂತೆ ಆಗಿರುತ್ತದೆ. ನೀರು ತುಂಬಿದರೂ ಅಧಿಕಾರಿಗಳು ಹಾಗೇಯೆ ಕಚೇರಿಯೊಳಗೆ ಹೋಗಿ ಕೆಲಸ ಮಾಡುವ ದುಸ್ಥಿತಿ ಒದಗಿ ಬಂದಿದೆ. ಉಪ ತಹಸೀಲ್ದಾರ್‌ರಾದ ಎಜಾಜ್ ಹುಲ್ ಹಕ್ ಮತ್ತು ಸಿಬ್ಬಂದಿ ವಿದ್ಯುತ್ ಸ್ಪರ್ಶ (ಶಾರ್ಟ್ ಸರ್ಕ್ಯೂಟ್)ದಿಂದ ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಳೆ ಬಂದರೆ ಸಾಕು ಜೀವ ಭಯದಿಂದ ಇಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಾಹಿಸುವ ಅನಿವಾರ್ಯ ಇದೆ. ಇಂತಹ ಹಳೆಯ ಕಟ್ಟಡದಲ್ಲಿ ಅಧಿಕಾರಿಗಳು ತಹಸೀಲ್ ಮತ್ತು ನಾಡಕಚೇರಿ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇಕ್ಕಟಿನ ಸ್ಥಳ ಇರುವುದರಿಂದ ಪುರಸಭೆಯಲ್ಲಿ ಒಂದು ಕೋಣೆಯನ್ನು ಪಡೆದು ತಹಸೀಲ್ದಾರ್ ಕಚೇರಿಯ ಕೆಲವು ಸಿಬ್ಬಂದಿ ಅಲ್ಲಿಗೆ ಕಳಿಸಿ ಕಂದಾಯ ಇಲಾಖೆಯ ಕಾರ್ಯವನ್ನು ಮಾಡಲಾಗುತ್ತಿದೆ. ಆದರೆ ಕಂದಾಯ ಇಲಾಖೆಯ ಮುಖ್ಯ ಕಾರ್ಯಗಳಾದ ಅಭಿಲೇಖಾಲಯ (ಹಳೆಯ ಪಹಣಿ ದಾಖಲೆಗಳು), ಭೂಮಿ ಪಹಣಿ ಮುಂತಾದವುಗಳನ್ನು ಸ್ಥಳಾಂತರಿಸಿಲ್ಲ. ಮಳೆ ಬಂದರೆ ಶಿಥಿಲೀಕರಣ ಗೋಡೆಯಿಂದ ಕಚೇರಿ ಸೋರುವುದರಿಂದ ರೈತರ ಪಹಣಿ ದಾಖಲಾತಿಗಳು ಮಳೆ ನೀರಿಗೆ ಹಾನಿ ಆಗುತ್ತದೆ ಎಂಬ ಭಯದ ವಾತಾವರಣ ರೈತರಿಗೆ ಮತ್ತು ಅಲ್ಲಿನ ಅಧಿಕಾರಿಗಳಿಗೆ ಇಬ್ಬರಿಗೂ ಇದೆ.
ಅಭಿಲೇಖಾಲಯ ಕಚೇರಿಯಲ್ಲಿ ದಾಖಲಾತಿಗಳು ಮಳೆಯಿಂದ ಹಾನಿಗೆ ಒಳಗಾದರೆ ರೈತರ ಗತಿಯೇನು ಎಂಬ ಪ್ರಶ್ನೆ ಕಾಡುತ್ತಿದೆ. ಫೆಬ್ರುವರಿ 2018ರಂದು ಗುರುಮಠಕಲ್ ತಾಲೂಕು ರಚನೆಯಾಗಿದರೂ ಉತ್ತಮವಾದ ತಹಸೀಲ್ದಾರ್ ಕಚೇರಿ ಹೊಂದಿಲ್ಲದಿರುವುದು ವಿಷಾದಕಾರವಾಗಿದೆ ಎಂದು ರೈತರು ಅಸಮಾ ಧಾನಗೊಂಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಉತ್ತಮ ಕಟ್ಟಡಕ್ಕೆ ತಹಸೀಲ್ ಮತ್ತು ನಾಡ ಕಚೇರಿಯನ್ನು ಸ್ಥಳಾಂತರಿಸಬೇಕು ಎಂಬುದು ರೈತರ ಮತ್ತು ನಾಗರಿಕರ ಒತ್ತಾಯವಾಗಿದೆ. ಗುರುಮಠಕಲ್ ಪಟ್ಟಣದಲ್ಲಿ ನಾಡಕಚೇರಿಯ ಚಾವಣಿಯ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿರುವುದು.
ಈ ಬಗ್ಗೆ ಮಾತನಾಡಿದ ಸ್ಥಳೀಯ ರೈತ ಮಲ್ಲಪ್ಪ ಪೂಜಾರಿ ಅವರು, ಸುರಕ್ಷಿತವಾದ ಕಟ್ಟಡದಲ್ಲಿ ರೈತರ ಹೊಲದ ದಾಖಲಾತಿಗಳನ್ನು ರಕ್ಷಣೆ ಕಲ್ಪಿಸಬೇಕು. ಮಳೆಗೆ ರೈತರ ಪಹಣಿ ದಾಖಲಾತಿಗಳು ಹಾನಿಯಾದರೆ ರೈತರಿಂದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಉಪ ತಹಸೀಲ್ದಾರ್ ಮೊಹ್ಮದ್ ಇಜಾಜ್ ಹುಲ್ ಹಕ್ ಅವರು, ಮನೆ ಜೋಪಾನ ಇಟ್ಟುಕೊಳ್ಳವಂತೆ ಕಚೇರಿಯನ್ನು ನೋಡಿಕೊಳ್ಳುತ್ತಿದ್ದೇವೆ. ಮಳೆ ಸೋರದಂತೆ ಚಾವಣಿ ಮೇಲೆ ಪ್ಲಾಸ್ಟಿಕ್ ಹೊದಿಕೆ ಮಾಡಿದ್ದೇವೆ. ಶಾಶ್ವತ ಅಥವಾ ಬಾಡಿಗೆ ಉತ್ತಮ ಕಟ್ಟಡ ಲಭಿಸಿದರೆ ಒಳಿತು. ಇದರ ಕುರಿತು ಮೇಲಧಿಕಾರಿಗಳಿಗೆ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.
ಇದ್ದ ಸೌಲಭ್ಯಗಳನ್ನು ಬಳಸಿಕೊಂಡು ಹಳೆಯ ಕಟ್ಟಡದಲ್ಲಿ ಮಳೆ ಸೋರದಂತೆ ಕ್ರಮ ಕೈಗೊಂಡಿದ್ದೇವೆ. ರೈತರ ಪಹಣಿಗಳಿಗೆ ಏನು ಆಗದಂತೆ ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ ಎಂದು ಗುರುಮಠಕಲ್ ನ ತಹಸೀಲ್ದಾರ್ ಶ್ರೀಧರಚಾರ್ಯ ಅವರು ಹೇಳಿದ್ದಾರೆ.