Asianet Suvarna News Asianet Suvarna News

'ಅಧಿಕಾರಿಗಳ ತಪ್ಪಿನಿಂದ ಸರ್ಕಾರಕ್ಕೆ ಮುಜುಗರವಾಗುತ್ತಿದೆ'

ಮೂರು ದಿನಗಳ ಒಳಗಾಗಿ ಲೋಪ ಸರಿಪಡಿಸದಿದ್ರೆ ತಹಸೀಲ್ದಾರ್‌ರೇ ಹೊಣೆ ಎಂದ ಡಿಸಿಎಂ ಗೋವಿಂದ ಕಾರಜೋಳ| ಜಿಲ್ಲೆಯ ನೆರೆ ಸಂತ್ರಸ್ತರ ಪರಿಹಾರಧನ ವಿತರಣೆ ಹಾಗೂ ಸಮೀಕ್ಷೆಯಲ್ಲಿ ಅಧಿ​ಕಾರಿಗಳು ಮಾಡಿರುವ ತಪ್ಪಿನಿಂದ ಸರ್ಕಾರ ಮುಜುಗರ ಅನುಭವಿಸುವಂತಾಗಿದೆ| ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗಲು ಅವಕಾಶ ನೀಡಬಾರದು| ಈ ವಿಷಯದಲ್ಲಿ ಜವಾಬ್ದಾರಿಯಿಂದ ಯಾರಾದರೂ ನುಣುಚಿಕೊಂಡರೆ ಅಂಥವರಿಗೆ ಕಠಿಣ ಶಿಕ್ಷೆ ನೀಡುವುದು ಅನಿವಾರ್ಯ| 

Government Embarrassment for Officers Mistake: DCM Govind Karjol
Author
Bengaluru, First Published Oct 3, 2019, 8:26 AM IST

ಬಾಗಲಕೋಟೆ(ಅ.3): ಜಿಲ್ಲೆಯ ನೆರೆ ಸಂತ್ರಸ್ತರ ಪರಿಹಾರಧನ ವಿತರಣೆ ಹಾಗೂ ಸಮೀಕ್ಷೆಯಲ್ಲಿ ಅಧಿ​ಕಾರಿಗಳು ಮಾಡಿರುವ ತಪ್ಪಿನಿಂದ ಸರ್ಕಾರ ಮುಜುಗರ ಅನುಭವಿಸುವಂತಾಗಿದೆ. ಈಗ ಆಗಿರುವ ಲೋಪವನ್ನು ಮೂರು ದಿನಗಳ ಒಳಗಾಗಿ ಸರಿಪಡಿಸದೆ ಹೋದರೆ ಆಯಾ ತಹಸೀಲ್ದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಜಿಪಂ ಸಭಾಭವನದಲ್ಲಿ ಬುಧವಾರ ಜರುಗಿದ ಪ್ರವಾಹ ಪರಿಹಾರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗಲು ಅವಕಾಶ ನೀಡಬಾರದು. ಈ ವಿಷಯದಲ್ಲಿ ಜವಾಬ್ದಾರಿಯಿಂದ ಯಾರಾದರೂ ನುಣುಚಿಕೊಂಡರೆ ಅಂಥವರಿಗೆ ಕಠಿಣ ಶಿಕ್ಷೆ ನೀಡುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ. 

ಮೂರು ದಿನಗಳಲ್ಲಿ ಪಟ್ಟಿ ನೀಡಿ:

ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಅನರ್ಹರನ್ನು ಪರಿಗಣಿಸಿದ ಬಗ್ಗೆ ನನಗೆ ದೂರುಗಳು ಬಂದಿರುವ ಕಾರಣ ಹಾಗೂ ನೈಜ ಅರ್ಹ ಸಂತ್ರಸ್ತರು ಇನ್ನೂ ಕೆಲವೆಡೆ ಪರಿಹಾರದಿಂದ ಕೈಬಿಟ್ಟು ಹೋಗಿರುವ ಕಾರಣ ಆಯಾ ತಹಸೀಲ್ದಾರರು ನಿಷ್ಪಕ್ಷಪಾತವಾಗಿ ನಿರ್ದಾಕ್ಷಿಣ್ಯವಾಗಿ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ಎಚ್ಚರಿಕೆ ನೀಡಿದ ಅವರು, ಕೆಲ ನೈಜ ಸಂತ್ರಸ್ತರು ನೆರೆ ಪರಿಹಾರದಡಿ ಇನ್ನೂ ಸೇರದೇ ಉಳಿದಿದ್ದು, ಅಂಥವರ ಪಟ್ಟಿಮಾಡಿ ಮೂರು ದಿನದೊಳಗಾಗಿ ಆಯಾ ತಹಸೀಲ್ದಾರ್‌ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಅಧಿ​ಕಾರಿಗಳು ಸರ್ಕಾರಕ್ಕೆ ಮುಜುಗರವಾಗದ ರೀತಿಯಲ್ಲಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸತಕ್ಕದ್ದು. ಯಾರದೋ ಬಿಡೆಗೆ ಬಿದ್ದು, ಅನರ್ಹರನ್ನು ಸೇರಿಸಬೇಡಿ. ಅರ್ಹ ಸಂತ್ರಸ್ತರನ್ನು ಪರಿಗಣಿಸಿ ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ಹಾಗೂ ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಅರ್ಹ ಸಂತ್ರಸ್ತರಿಗೆ ಪರಿಹಾರ ಸಿಗದೇ ಹೋದಲ್ಲಿ ನೇರವಾಗಿ ತಹಸೀಲ್ದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

47 ಕೋಟಿ ತಾತ್ಕಾಲಿಕ ಪರಿಹಾರ:

ಜಿಲ್ಲೆಯಲ್ಲಿ ಒಟ್ಟು 46997 ಕುಟುಂಬಗಳಿಗೆ ತಲಾ 10 ಸಾವಿರದಂತೆ 46.99 ಕೋಟಿ ಪರಿಹಾರ ನೀಡಲಾಗಿದೆ. ಒಟ್ಟು 5149 ಅ​ಧಿಕೃತ ಹಾಗೂ 2268 ಅನ​ಧಿಕೃತ ಮನೆಗಳು ಹಾನಿಯಾಗಿವೆ. ಈ ಪೈಕಿ ಎ ಕೆಟಗರಿಯಲ್ಲಿ ಅ​ಧಿಕೃತ 395, ಅನ​ಧಿಕೃತ 76, ಬಿ ಕೆಟಗರಿಯಲ್ಲಿ ಅಧಿಕೃತ 1359, ಅನ​ಧಿಕೃತ 420, ಸಿ ಕೆಟಗರಿಯಲ್ಲಿ ಅ​ಧಿಕೃತ 3395, ಅನ​ಧಿಕೃತ 1772 ಮನೆಗಳು ಇವೆ. ಜೀವ ಹಾನಿ 3, ಜಾನುವಾರು 301 ಹಾಗೂ ಕೋಳಿ 200 ಮೃತಪಟ್ಟಿದ್ದು, ಒಟ್ಟು .66 ಲಕ್ಷಗಳ ಪರಿಹಾರ ನೀಡಲಾಗಿದೆ ಎಂದರು.

ಸರಿಯಾಗಿ ಸಮೀಕ್ಷೆ ಮಾಡಿ:

ಜಿಲ್ಲೆಯಲ್ಲಿ ಮನೆ, ಬೆಳೆ, ಮೂಲಭೂತ ಆಸ್ತಿಪಾಸ್ತಿ, ರಸ್ತೆ ಸೇರಿದಂತೆ ಒಟ್ಟು .2542.99 ಕೋಟಿಗಳಷ್ಟು ಅಂದಾಜು ಹಾನಿಯಾಗಿದೆ. ಎನ್‌ಡಿಆರ್‌ಎಫ್‌ ಪ್ರಕಾರ .420.36 ಕೋಟಿ ಪರಿಹಾರ ಆಗಲಿದೆ. ಈ ಪೈಕಿ .1313 ಕೋಟಿ ಕೃಷಿ ಹಾಗೂ .361 ಕೋಟಿ ತೋಟಗಾರಿಕೆ ಹಾಗೂ ರೇಷ್ಮೆ 63 ಹೆಕ್ಟೇರ್‌ ಪ್ರದೇಶ ಹಾನಿ ಅಂದಾಜಿಸಲಾಗಿದ್ದು, ಇನ್ನೂ ಸಮೀಕ್ಷೆ ನಡೆಯುತ್ತಿದೆ. ಯಾವುದೇ ರೀತಿಯಲ್ಲಿ ಲೋಪವಾಗದಂತೆ ಸರಿಯಾಗಿ ಸಮೀಕ್ಷೆ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲೆಗೆ 230 ಕೋಟಿ ಹಣ:

ಪ್ರವಾಹ ಪರಿಹಾರಕ್ಕೆ ಆ.8 ರಿಂದ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಲೆ ಇದೆ. ಈವರೆಗೆ ಜಿಲ್ಲೆಗೆ ಒಟ್ಟು 230 ಕೋಟಿ ಬಂದಿದೆ. ಈ ಪೈಕಿ ಜಿಲ್ಲಾ​ಧಿಕಾರಿಗಳ ಖಾತೆಯಲ್ಲಿ ಇನ್ನು 138 ಕೋಟಿ ಲಭ್ಯವಿದೆ ಎಂದರು.
ಲೋಕೋಪಯೋಗಿ ಇಲಾಖೆಗೆ ಸಂಬಂಧಿ​ಸಿದಂತೆ ಒಟ್ಟು .93.34 ಕೋಟಿ ಹಾನಿ ಅಂದಾಜಿಸಲಾಗಿದ್ದು, ಪ್ರವಾಹದಿಂದ ಸ್ಥಗಿತಗೊಂಡ ಸಂಪರ್ಕ ರಸ್ತೆಗಳನ್ನು ಸರಿಪಡಿಸಲು ತುರ್ತು ಕಾರ್ಯ ಕೈಗೊಳ್ಳಬೇಕು. ಹೆಸ್ಕಾಂಗೆ ಸಂಬಂಧಿ​ಸಿದಂತೆ ಟ್ರಾನ್ಸ್‌ಫಾರ್ಮರ್‌, ಕಂಡಕ್ಟರ್‌, ವಿದ್ಯುತ್‌ ಕಂಬ ಸೇರಿ ಒಟ್ಟು 33.84 ಕೋಟಿ ಹಾನಿ ಅಂದಾಜಿಸಲಾಗಿದೆ. ಈಗಾಗಲೇ ಶೇ.75 ರಷ್ಟುಸರಿಪಡಿಸುವ ಕಾರ್ಯವಾಗಿದ್ದು, ಉಳಿದ ಶೇ.25 ರಷ್ಟುಕೆಲಸವನ್ನು ಒಂದು ವಾರದಲ್ಲಿ ಪೂರ್ಣಗೊಳಿಸುವುದಾಗಿ ಹೆಸ್ಕಾಂ ಅ​ಧಿಕಾರಿಗಳು ಸಭೆಗೆ ತಿಳಿಸಿದರು.

ಶಾಲಾ ಕಟ್ಟಡಗಳ ದುರಸ್ತಿ:

ಜಿಲ್ಲಾ​ಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಮಾತನಾಡಿ, ಎನ್‌ಡಿಆರ್‌ಎಫ್‌ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು .10 ಸಾವಿರ ಪರಿಹಾರವನ್ನು ಹಾಗೂ ವಿಶೇಷ ಆಹಾರ ಕಿಟ್‌ಗಳನ್ನು ಇಲ್ಲಿಯವರೆಗೆ ಒಟ್ಟು 45997 ಸಂತ್ರಸ್ತರ ಕುಟುಂಬಗಳಿಗೆ ನೀಡಲಾಗಿದೆ. ಪ್ರವಾಹ ಸಂದರ್ಭದಲ್ಲಿ 242 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಸದ್ಯ 4 ಕೇಂದ್ರಗಳಲ್ಲಿ ಮಾತ್ರ 570 ಕುಟುಂಬಗಳು ಆಶ್ರಯ ಪಡೆಯುತ್ತಿದ್ದಾರೆ. 117 ಗೋಶಾಲೆಗಳ ಪೈಕಿ 11 ಗೋಶಾಲೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ 134 ಶಾಲಾ ಕಟ್ಟಡಗಳ ಪೈಕಿ 44 ಕಟ್ಟಡಗಳ ಕಾಮಗಾರಿ ಪ್ರಾರಂಭಿಸಲಾಗಿದೆ. 43 ಅಂಗವಾಡಿ ಕಟ್ಟಡಗಳ ಪೈಕಿ 8 ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಪಂಚಾಯತ್‌ರಾಜ್‌ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಒಟ್ಟು 678 ಕಿ.ಮೀ ರಸ್ತೆ ಹಾನಿಗೊಳಗಾಗಿದೆ. 669 ಪ್ರಾಥಮಿಕ ಶಾಲೆಗಳ ಕೊಠಡಿಗಳು, 47 ಸಮುದಾಯ ಭವನಗಳು, 14 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 158 ಅಂಗನವಾಡಿ ಕಟ್ಟಡಗಳು ಹೊನಿಗೊಳಗಾಗಿವೆ. 73.32 ಕೋಟಿ ಹಾನಿ ಅಂದಾಜಿಸಲಾಗಿದ್ದು, ಈ ಪೈಕಿ ಎನ್‌ಡಿಆರ್‌ಎಫ್‌ ಪ್ರಕಾರ 24.52 ಕೋಟಿ ಬರಲಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಆನಂದ ನ್ಯಾಮಗೌಡರ, ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ, ಅಪರ ಜಿಲ್ಲಾಧಿ​ಕಾರಿ ದುರ್ಗೇಶ ರುದ್ರಾಕ್ಷಿ ಸೇರಿದಂತೆ ವಿವಿಧ ಇಲಾಖೆಯ ಅ​ಧಿಕಾರಿಗಳು, ಆಯಾ ತಾಲೂಕು ತಹಸೀಲ್ದಾರರು ಉಪಸ್ಥಿತರಿದ್ದರು.

ನಿಮ್ಮ ಸೊಂಟದಲ್ಲಿ ಸರ್ಕಾರದ ಹಣ:

ನೆರೆ ಸಂತ್ರಸ್ತರ ಪರಿಹಾರ ಧನ ವಿತರಣೆ ಸೇರಿದಂತೆ ವಿವಿಧ ಯೋಜನೆ ಅಡಿ ನೀಡಬೇಕಾದ ಸೌಲಭ್ಯಗಳನ್ನು ನೀಡಲು ತಹಸೀಲ್ದಾರರಿಗೆ ಸರ್ಕಾರ ಬಹುದೊಡ್ಡ ಜವಾಬ್ದಾರಿ ನೀಡಿದೆ. ಸರ್ಕಾರದ ಕೀಲಿಕೈಯನ್ನು ನಿಮ್ಮ ಸೊಂಟದಲ್ಲಿ ನೀಡಿದ್ದೇವೆ. ಹೀಗಿದ್ದಾಗಲೂ ಚುರುಕಿನಿಂದ ಕಾರ್ಯನಿರ್ವಹಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು ಅರ್ಹರಿಗೆ ಅನ್ಯಾಯವಾಗದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದರು.

ಯಾರದೋ ಮನೆಯಲ್ಲಿ ಕುಳಿತು ಸಂತ್ರಸ್ತರ ಕುರಿತಾಗಿ ಸಮೀಕ್ಷೆ ಮಾಡುವುದನ್ನು ಮೊದಲು ಬಿಡಿ ಎಂದು ಸೂಚಿಸಿದ ಅವರು, ಸರ್ಕಾರದ ಪಂಚಾಯ್ತಿ, ಶಾಲೆ, ಕಾಲೇಜುಗಳನ್ನು ನಿಮ್ಮ ಕೆಲಸಕ್ಕೆ ಬಳಸಿಕೊಳ್ಳಿ ಇಲ್ಲದೆ ಹೋದರೆ ನಿಜವಾದ ಸಂತ್ರಸ್ತರು ಅನ್ಯಾಯಕೊಳ್ಳಗಾಗುತ್ತಾರೆ. ಸರ್ಕಾರ ಹಣವನ್ನು ನಿಮ್ಮ ಮೂಲಕವೇ ವಿತರಿಸುತ್ತಿದೆ ಎಂಬ ಅರಿವು ನಿಮಗೆ ಇರಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಸದ್ಯ ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಬರುವ ದಿನಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಹಾಗೂ ಪುನರ್‌ ನಿರ್ಮಾಣದ ಪ್ರಗತಿ, ತ್ರೈಮಾಸಿಕ ಅಭಿವೃದ್ಧಿ ಸಭೆಗಳನ್ನು ನಡೆಸುವ ಮೂಲಕ ಜಿಲ್ಲೆಯ ಪ್ರಗತಿಗೆ ವೇಗ ನೀಡುವೆ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios