ಮೈಸೂರು (ಸೆ.04): ಮೈಸೂರಿನಲ್ಲಿ ಯುವತಿಯೋರ್ವಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೋಷಕರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

ಮೈಸೂರು ತಾಲೂಕಿನ ದೊಡ್ಡ ಕಾನ್ಯ ಗ್ರಾಮದ ಮೀನಾಕ್ಷಿ (22) ಎಂಬ ಯುವತಿ ಮೃತಪಟ್ಟಿದ್ದು, ಅನ್ಯ ಜಾತಿ ಯುವಕನನ್ನು ಪ್ರೀತಿ ಮಾಡಿದ್ದಕ್ಕೆ ಹೆತ್ತವರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

ಪ್ರೀತಿ ವಿಚಾರವನ್ನು ಮನೆಯವರಿಗೆ ತಿಳಿಸಿದ ಬಳಿಕ ಮನೆಯವರಿಂದ ಮಾನಸಿಕ ಹಿಂಸೆಯ ಬಗ್ಗೆ ಆಕೆ ದೂರಿದ್ದು, ತಮ್ಮ ಕುಟುಂಬದವರಿಂದಲೇ ತನಗೆ ಹಿಂಸೆಯಾಗುತ್ತಿದೆ ಎಂದು ಆಕೆ ಮೈಸೂರು ಎಸ್‌ಪಿ ಹಾಗೂ ಒಡನಾಡಿ ಸಂಸ್ಥೆಗೆ ಇ ಮೇಲ್ ಮೂಲಕ ದೂರು ನೀಡಿದ್ದಳು.

ಆಕೆ ದೂರು ನೀಡಿದ್ದ ಫೊಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು,  ನನ್ನ ಅಣ್ಣನೇ ನನ್ನನ್ನು ಹತ್ಯೆ ಮಾಡಲು ಯತ್ನಿಸಿದ್ದ. ಆದರೆ ಇದನ್ನು ಯಾರೂ ತಡೆಯುವ ಯತ್ನ ಮಾಡಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾಳೆ. 

ವೃದ್ಧೆಯ ಉಸಿರುಗಟ್ಟಿಸಿ ಕೊಲೆಗೈದು ಚಿನ್ನಾಭರಣ ಲೂಟಿ ..

ನನಗೆ ಜೀವ ಭಯವಿದ್ದು ನನ್ನನ್ನು ಕಾಪಾಡಿ ಎಂದು ದೂರಿನಲ್ಲಿ ತಿಳಿಸಿದ್ದಳು. ಇದೀಗ ಆಕೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. 

ಜೂನ್ 16 ಹಾಗೂ ಆಗಸ್ಟ್ 6ರಂದು ಎರಡು ಬಾರಿ ಎಸ್ಪಿಗೆ ದೂರು ನೀಡಿದ್ದು, ಅನ್ಯ ಜಾತಿ ಯುವಕನನ್ನು ಮದುವೆ ಆಗುತ್ತೇನೆಂದು ಪಟ್ಟು ಹಿಡಿದಿದ್ದರಿಂದ ಹೆತ್ತವರೇ ಮೀನಾಕ್ಷಿಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

ಇದರಿಂದ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.