Asianet Suvarna News Asianet Suvarna News

ಕೈಗಾದ 5, 6ನೇ ಘಟಕ ಕೈ ಬಿಡಲು ಮನವಿ

ಕೈಗಾ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿದ ನಂತರದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಲ್ಲಿ ಕ್ಯಾನ್ಸರ್ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಇದರಿಂದ ಆಗುವ ಸಮಸ್ಯೆಗಳ ಬಗ್ಗೆ  ಕೇಂದ್ರ ಸಚಿವ ಅಮಿತ್ ಶಾ ಬಳಿ ಗಂಗಾಧರೇಶ್ವರ ಸ್ವಾಮೀಜಿ ವಿವರಿಸಿದರು.

Gangadhareshwara Swamiji Explained to Amit Shah Over Problems From Atomic power station Kaiga
Author
Bengaluru, First Published Jan 19, 2020, 12:18 PM IST

ಶಿರಸಿ [ಜ.19]:  ಹುಬ್ಬಳ್ಳಿಗೆ ಆಗಮಿಸಿದ್ದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳವರು ಭೇಟಿಯಾಗಿ ಕೈಗಾ ಅಣು ವಿದ್ಯುತ್ ಸ್ಥಾವರದ ದುಷ್ಪರಿಣಾಮಗಳ ಬಗ್ಗೆ ಸಮಾಲೋಚನೆ ನಡೆಸಿದರು. 

ಕೈಗಾ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿದ ನಂತರದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರಲ್ಲಿ ಕ್ಯಾನ್ಸರ್ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅದರ ಬಗ್ಗೆ ಕೇಂದ್ರ ಸರ್ಕಾರ ಸಮಗ್ರ ಸಮೀಕ್ಷಾ ಕಾರ್ಯ ನಡೆಸಬೇಕು. ಇದೇ ಕಾರಣದಿಂದ ಕೈಗಾ ಅಣು ಸ್ಥಾವರದ ಉದ್ದೇಶಿತ ಐದು, ಆರನೇ ಘಟಕಗಳ ವಿಸ್ತರಣೆಯನ್ನು ಕೈಬಿಡಬೇಕು ಎಂಬುದಾಗಿ ಸ್ವರ್ಣವಲ್ಲೀ ಶ್ರೀಗಳವರು ಗೃಹಮಂತ್ರಿ ಶಾ ಅವರಲ್ಲಿ ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಸಚಿವರು ಈ ಹಿಂದೆ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಮೂಲಕ ನಡೆಸಿದ ಆರೋಗ್ಯ ಸಮೀಕ್ಷೆಯ ವರದಿಯ ಅಂಶಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಅಲ್ಲದೇ ನಂತರದಲ್ಲಿ ಈ ಕುರಿತು ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ನಿಯೋಗವನ್ನು ದೆಹಲಿಗೆ ಕರೆಸಿಕೊಂಡು ಸಮಾಲೋಚನೆ ನಡೆಸುವುದಾಗಿ ಅಮಿತ್ ಶಾ ಹೇಳಿದರು.

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!..

ಈ ಸಂದರ್ಭದಲ್ಲಿ ಸೋಂದಾ ಸ್ವಾದಿ ಜೈನ ಮಠದ ಭಟ್ಟಾಕಲಂಕ ಸ್ವಾಮೀಜಿಗಳು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ನಳಿನಕುಮಾರ್ ಕಟೀಲ, ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಾಕರಸಾಸಂ ಅಧ್ಯಕ್ಷ ಡಾ. ಪಾಟೀಲ್, ಶಾಸಕಿ ರೂಪಾಲಿ ನಾಯ್ಕ, ಕೈಗಾ ಅಣು ವಿದ್ಯುತ್ ಸ್ಥಾವರ ವಿಸ್ತರಣೆ ವಿರೋಧಿ ಹೋರಾಟ ಸಮಿತಿಯ ಗುರುಪ್ರಸಾದ್ ಪಾಯ್ದೆ ಮತ್ತು ಶಾಂತಾರಾಮ ಬಾಂದೇಕರ, ಸ್ವರ್ಣವಲ್ಲೀ ಸಂಸ್ಥಾನದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ನಾರಾಯಣ ಹೆಗಡೆ ಗಡಿಕೆ ಮತ್ತಿತರರು ಪಾಲ್ಗೊಂಡರು.

Follow Us:
Download App:
  • android
  • ios