ಸಾಗರ (ಆ. 11): 1964 ರಲ್ಲಿ ತಲಕಳಲೆ ಜಲಾಶಯ ನಿರ್ಮಾಣವಾದ ನಂತರ ಪಶ್ಚಿಮಘಟ್ಟಳ ನೆತ್ತಿಯಲ್ಲಿರುವ ಸಾಗರ ತಾಲೋಕಿನ ಬಿದರೂರು, ಹುಕ್ಕಲು, ಜಡ್ಡಿ ನಮನೆ, ಮೇಲೂರಮನೆ ಇಂದ್ರೋಡಿ, ಅಡ್ಡಮನೆ ಅತ್ತಿಗೋಡು, ಕುಡುಗುಂಜಿ, ವಟ್ಟಕ್ಕಿ ಮುಂತಾದ ಕೆಲವು ಹಳ್ಳಿಗಳು ಬಹುತೇಕ ದ್ವೀಪಗಳಾಗಿ ಹೋಗಿವೆ. 

'ಹೊಳೆ ಆಲೂರಲ್ಲಿ ಊರೇ ಇಲ್ಲ, ಹೊಳೆ ಮಾತ್ರ'!

ಈ ಎಲ್ಲ ಹಳ್ಳಿಗಳು ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಇರುವುದು ಕಾರ್ಗಲ್ಲನ್ನು ಸಂಪರ್ಕಿಸುವ ಒಂದೇ ಒಂದು ರಸ್ತೆ. ಅದನ್ನೂ ಇತ್ತೀಚೆಗೆ ಅಂದರೆ ಜಲಾಶಯ ನಿರ್ಮಾಣವಾದ ಐವತ್ತು ವರ್ಷಗಳ ನಂತರ ಕರ್ನಾಟಕ ವಿದ್ಯುತ್ ನಿಗಮ ರಿಪೇರಿ ಮಾಡಿಕೊಟ್ಟಿತ್ತು. ವಿಚಿತ್ರವೆಂದರೆ ವಿದ್ಯುತ್ತಿಗಾಗಿ ತಮ್ಮ ಬೇರನ್ನು ಕಡಿದುಕೊಂಡ ಈ ಸಂತ್ರಸ್ಥರಿಗೆ ವಿದ್ಯುತ್ ಲಭಿಸಲಾರಂಬಿಸಿದ್ದೂ ಎಂಬತ್ತರ ದಶಕದ ನಂತರವೇ!

ಇಂತಿಪ್ಪ ಈ ಹಳ್ಳಿಗಳು ಈ ವರ್ಷದ ಅತಿವೃಷ್ಟಿಗೆ ಸಿಕ್ಕಿ ನಲಗಿ ಹೋಗಿವೆ. ಮನೆಯಿಂದ ಹೊರಗೆ ಕಾಲಿಡಲಾಗ ದಷ್ಟು ಮುಸಲಧಾರೆ. ಶರಾವತಿ ಕಣಿವೆಯಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಈ ಹಳ್ಳಿಗಳಿಗೆ ಬೇಸಿಗೆಯಲ್ಲಿ ಮಂಗನ ಕಾಯಿಲೆ, ಮಳೆಗಾಲದಲ್ಲಿ ಮಳೆಕಾಟ.  ಶಾಲೆಗೆ, ಆಸ್ಪತ್ರೆಗೆ, ಕಿರಾಣಿ ಅಂಗಡಿಗೆ ಕೊನೆಗೊಂದು ಬೆಂಕಿಪೆಟ್ಟಿಗೆಗೆ ಈ ಜನ ಸರಾಸರಿ ಹತ್ತು ಕಿಲೋಮೀಟರ್ ದೂರದ ಕಾರ್ಗಲ್ ಕಾಲೋನಿಗೇ ಹೋಗಬೇಕು. ಇಂದಿಗೂ ಈ ಹಳ್ಳಿಗಳಿಗೆ ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲ.

ಬೆಳಿಗ್ಗೆ ಎದ್ದು ಬಾಗಿಲು ತೆರೆದರೆ ಕೆಳಮನೆಯಲ್ಲಿ ನೀರೋ ನೀರು!

ಈ ನಡುವೆ ಇಂದ್ರೋಡಿಮನೆ ಎಂಬಲ್ಲೊಂದು, ಕುಡುಗುಂಜಿಯಲ್ಲೊಂದು, ಅತ್ತ ಸುಂಕದ ಮನೆಯಲ್ಲೊಂದು ಶಾಲೆಗಳು ಆರಂಭವಾಗಿದೆ. ಆದರೆ ಅವುಗಳನ್ನು ತಲುಪಲು ಈ ಮಕ್ಕಳು, ಹಳ್ಳಿಗರೇ ಕಾಡು ಗಳ ಅಥವಾ ಅಡಿಕೆ ಮರ ಬಳಸಿ ನಿರ್ಮಿಸಿಕೊಂಡ ಸಂಕ ದಾಟಿ ಹೋಗಬೇಕು. ಇದೇ ಹಳ್ಳಿಯಲ್ಲೇ ಈಗ ಕೆಲವು ವರ್ಷಗಳ ಹಿಂದೆ ‘ಪೂರ್ಣಿಮಾ’ ಎಂಬ ಒಂಬತ್ತು ವರ್ಷದ ಬಾಲಕಿ ಸಂಕದಿಂದ ಬಿದ್ದು ಹೊಳೆಯಲ್ಲಿ ತೇಲಿಹೋಗಿ ಸಾವನ್ನಪ್ಪಿದುದು.

ಈ ಹಳ್ಳಿಗಳ ಈ ವರ್ಷದ ಪಾಡಂತೂ ದೇವರಿಗೇ ಪ್ರೀತಿ. ಗದ್ದೆಗಳೆಲ್ಲ ನೀರಲ್ಲಿ ಮುಳುಗಿವೆ. ತೋಟಗಳು ನೀರು ಹರಿಯುವ ಕಾಲುವೆಗಳಾಗಿವೆ. ಇರುವ ಒಂದೇ ಸಂಪರ್ಕ ರಸ್ತೆ ಅಲ್ಲಲ್ಲಿ ಕುಸಿದಿದೆ ಇನ್ನು ಕೆಲವೆಡೆ ಕುಸಿಯುವ ಹಂತ ತಲುಪಿವೆ. ಕಾಯಿಲೆಗೆ ಬಿದ್ದವರನ್ನು ಕಂಬಳಿ ಜೋಲಿಗಳಲ್ಲಿ ಹತ್ತೆಂಟು ಕಿಲೋಮೀಟರ್ ದೂರದ ಕಾರ್ಗಲ್ಲಿಗೆ ಖಾಸಗಿ ವಾಹನ ಮಾಡಿಕೊಂಡು ಹೋಗಬೇಕು. ಪ್ರತಿ ದಿನ ಒಂದೆರಡಾದರೂ ಮರ ಬಿದ್ದು ಅನಾಹುತ ಸೃಷ್ಟಿಸುತ್ತಿವೆ. ಸಂಕದ ಮೇಲೆ ಬೀಳುವ
ಮರಗಳ ಭಯ, ಬೀಸುವ ಗಾಳಿ, ಕುಂಭದ್ರೋಣ ಮಳೆಗಳ ನಡುವೆ ಮಕ್ಕಳನ್ನು ಶಾಲೆಗೆ ಕಳಿಸಲೂ ಭಯ ಪಡುತ್ತಿದ್ದಾರೆ ಇಲ್ಲಿಯ ಗ್ರಾಮಸ್ಥರು. ಸದ್ಯ ಶಾಲೆಗಳಿಗೆ ರಜೆ ಘೋಷಿಸಿರುವುದೊಂದು ವರ. ಅದರಲ್ಲೂ\ ಗಿರಿಜನರೇ ತುಂಬಿರುವ ಜಡ್ಡಿನ ಮನೆ, ಇಂದ್ರೋಡಿ ಕುಡುಗುಂಜಿ ಮುಂತಾದ ಹಳ್ಳಿಗಳ ಬದುಕಂತೂ ನರಕ ಸದೃಶವಾಗಿದೆ.

-- ಗಜಾನನ ಶರ್ಮಾ