ಗದಗ, [ಮಾ.18]: ಆತಂಕ ಮೂಡಿಸಿದ್ದ 3 ವರ್ಷದ ಮಗುವಿಗೆ ಕೊರೋನಾ ನೆಗೆಟಿವ್ ಬಂದಿದ್ದು, ಜಿಲ್ಲಾಡಳಿತ ಹಾಗೂ ಕುಟುಂಬಸ್ಥರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.

ಕೊರೋನಾ ವೈರಸ್ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದ್ದ ಲಂಡನ್ ನಿಂದ ಆಗಮಿಸಿದ  ಕುಟುಂಬದ ಮೂರು ವರ್ಷದ ಮಗುವಿನ ವರದಿಯು ನೆಗೆಟಿವ್ ಬಂದಿದ್ದು, ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಪಾಲಕರಲ್ಲಿ ನಿರಾಳತೆಯ ಭಾವ ಮೂಡಿದೆ.

ಗದಗ ಮೂಲದ ಕುಟುಂಬ ಲಂಡನ್‍ನಲ್ಲಿ ನೆಲೆಸಿತ್ತು. ಆದರೆ ತಂದೆ, ತಾಯಿ ಮಗುವಿನೊಂದಿಗೆ ಮಾರ್ಚ್ 9ರಂದು ಲಂಡನ್‍ನಿಂದ ಗದಗಕ್ಕೆ ಬಂದಿದ್ದು, ಮೂರುವರೆ ವರ್ಷದ ಮಗುವಿನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೂಡಲೇ  ಮಗುವಿನ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿ ಪರೀಕ್ಷೆಗೆ ಒಳಪಡಿತ್ತು. 

ರಾಜ್ಯದಲ್ಲಿ ಮೂರು ವರ್ಷದ ಮಗುವಿಗೂ ಕೊರೋನಾ ಶಂಕೆ : ಆಸ್ಪತ್ರೆಗೆ ದಾಖಲು

ಇದೀಗ ಮಗುವಿನ ವರದಿ ಬಂದಿದ್ದು, ಕೊರೋನಾ ನೆಗೆಟಿವ್ ಬಂದಿದೆ. ಇದು ಇಡೀ ಜಿಲ್ಲಾಡಳಿತಕ್ಕೆ ಆತಂತಕ್ಕೆ ಕಾರಣವಾಗಿತ್ತು. ಕೊನೆಗೆ ಸೋಂಕು ಶಂಕಿತ ವ್ಯಕ್ತಿಗಳನ್ನ ಗದಗ ಜಿಮ್ಸ್ ಆಸ್ಪತ್ರೆಯ ಐಸೊಲೇಷನ್ ವಾರ್ಡಿಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. 

ಜಿಲ್ಲೆಯಲ್ಲಿ ಒಟ್ಟು 11 ಕೊರೋನಾ ಶಂಕಿತ ಪ್ರಕರಣಗಳಲ್ಲಿ 9 ನೆಗೆಟಿವ್ ಬಂದಿದ್ದು, ಇನ್ನು  2 ಪ್ರಕರಣಗಳ ವರದಿಗಳು ಬರಲು ಬಾಕಿ ಇದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.