ರಾಯಭಾಗ[ಜೂ.16]: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕಬ್ಬೂರ ಬಳಿ ರಾಜ್ಯ ಹೆದ್ದಾರಿಯಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ ಇನೋವಾ ಕಾರು ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟು, ಆತನ ಪತ್ನಿ ಗಂಭೀರ ಗಾಯಗೊಂಡ ಘಟನೆ ಶನಿವಾರ ನಡೆದಿದೆ. ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರೂ ಕಾರಿನಲ್ಲಿದ್ದ ಶಾಸಕರು ಮಾತ್ರ ಏನಾಗಿದೆ ಎಂಬುದನ್ನು ತಿರುಗಿಯೂ ನೋಡದೆ ಇನ್ನೊಂದು ವಾಹನ ಹತ್ತಿಕೊಂಡು ಹೋಗಿದ್ದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಬಾಗ ಪಟ್ಟಣದ ರಾಮು ನಾಯಿಕ (50) ಮೃತ ವ್ಯಕ್ತಿ. ಈತನ ಪತ್ನಿ ಪ್ರಭಾವತಿ(40) ಗಂಭೀರವಾಗಿ ಗಾಯಗೊಂಡಿದ್ದು, ಗೋಕಾಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಅರವಿಂದ ಪಾಟೀಲರಿದ್ದ ಕಾರು ಕೂಡ ಪಲ್ಪಿಯಾಗಿದ್ದು, ಅವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ.

ಏನಿದು ಘಟನೆ?: ಖಾನಾಪುರದ ಮಾಜಿ ಶಾಸಕ ಅರವಿಂದ ಪಾಟೀಲರು ಪತ್ನಿ ಸಮೇತ ಖಾನಾಪುರದಿಂದ ರಾಯಬಾಗಕ್ಕೆ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು. ಇದೇ ರಾಜ್ಯ ಹೆದ್ದಾರಿಯಲ್ಲಿ ರಾಯಬಾಗದಿಂದ ಕಬ್ಬೂರಿಗೆ ಪತ್ನಿಯೊಂದಿಗೆ ರಾಮು ಅವರು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಎದುರುಗಡೆಯಿಂದ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ರಾಮು ಅವರು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಅಸು ನೀಗಿದರೆ, ಪತ್ನಿ ಗಾಯಗೊಂಡಿದ್ದರಿಂದ ಅವರನ್ನು ಗೋಕಾಕ ಸಾರ್ವಜನಿಕರೇ ಆಸ್ಪತ್ರೆಗೆ ದಾಖಲಿಸಿದರು. ಘಟನೆಯಲ್ಲಿ ಶಾಸಕರ ಕಾರು ಉರುಳಿ ಬಿದ್ದಿದ್ದು, ಬೈಕ್ ಸಂಪೂರ್ಣ ಜಖಂಗೊಂಡಿದೆ.