ದಂತಕ್ಕಾಗಿ ಪಶ್ಚಿಮಘಟ್ಟ ಆನೆಗಳ ಮೇಲೆ ವಿದೇಶೀಯರ ಕಣ್ಣು

ಮಲೆನಾಡಿನಲ್ಲಿ ಆನೆಗಳನ್ನು ಹತ್ಯೆ ಮಾಡಿ ಅವುಗಳ ದಂತವನ್ನು ಕಳ್ಳ ಸಾಗಾಣಿಕೆ ಮಾಡುವ ಜಾಲ ಅಂತಾರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಆಲ್ದೂರಿನಲ್ಲಿ 7 ಮಂದಿ ದಂತಚೋರರನ್ನು ಬಂಧಿಸಿರುವ ಪೊಲೀಸರಿಗೆ ಪ್ರಾಥಮಿಕ ಹಂತದ ತನಿಖೆಯಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.

Foreigners involved in smuggling of Elephant Tusk

ಚಿಕ್ಕಮಗಳೂರು (ಜು.13): ಜಿಲ್ಲೆಯ ಮಲೆನಾಡಿನಲ್ಲಿ ಆನೆಗಳನ್ನು ಹತ್ಯೆ ಮಾಡಿ ಅವುಗಳ ದಂತವನ್ನು ಕಳ್ಳ ಸಾಗಾಣಿಕೆ ಮಾಡುವ ಜಾಲ ಅಂತಾರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಆಲ್ದೂರಿನಲ್ಲಿ 7 ಮಂದಿ ದಂತಚೋರರನ್ನು ಬಂಧಿಸಿರುವ ಪೊಲೀಸರಿಗೆ ಪ್ರಾಥಮಿಕ ಹಂತದ ತನಿಖೆಯಿಂದ ಈ ಮಾಹಿತಿ ಲಭ್ಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಖರೀದಿ ಮಾಡುವ ದಂತ ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳಿಗೆ ರಸ್ತೆ ಮಾರ್ಗದಲ್ಲಿ ತೆಗೆದುಕೊಂಡು ಹೋಗಿ ಅಲ್ಲಿಂದ ಸಮುದ್ರ ಮಾರ್ಗವಾಗಿ ಸಾಗಾಣೆ ಮಾಡುತ್ತಿರಬಹುದು ಎಂಬ ಸಂದೇಹ ಬಂದಿದೆ.

ಶೃಂಗೇರಿಯ ನಿವಾಸಿ ವಿಜಯ ಹೆಗ್ಡೆ ಎಂಬವರಿಂದ ದಂತವನ್ನು ಮಂಗಳೂರು ಮೂಲದ ಸಂತೋಷ್‌ ಎಂಬವರು ಖರೀದಿ ಮಾಡಿಕೊಂಡು ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಲು ಪ್ಲಾನ್‌ ಮಾಡಿಕೊಂಡು ಶೃಂಗೇರಿಯಿಂದ ಬಾಳೆಹೊನ್ನೂರು ಮಾರ್ಗವಾಗಿ ಹೊರಟು ಆಲ್ದೂರಿನಲ್ಲಿ ಮಧ್ಯಾಹ್ನ ಊಟ ಮಾಡುವ ವೇಳೆಯಲ್ಲಿ ಅರಣ್ಯ ಸಂಚಾರಿ ದಳದ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಂದರೆ, ಈ ಜಾಲದಲ್ಲಿರುವ ಎಲ್ಲ 7 ಮಂದಿಯ ಪೈಕಿ ನಾಲ್ವರು ಮಂಗಳೂರು, ಇಬ್ಬರು ಉಡುಪಿ, ಓರ್ವರು ಬೆಂಗಳೂರಿನವರು.

ಶೃಂಗೇರಿ ಕೇಂದ್ರ ಸ್ಥಾನ?:

ಕಳೆದ ಎರಡು ವರ್ಷಗಳ ಹಿಂದೆ ಶೃಂಗೇರಿಯ ಲಾಡ್ಜ್‌ ಮೇಲೆ ಕೇಂದ್ರದ ವನ್ಯಜೀವಿ ಅಪರಾಧ ನಿಗ್ರಹದಳ, ರಾಜ್ಯ ಅರಣ್ಯ ಸಂಚಾರಿ ದಳ ಜಂಟಿ ಕಾರ್ಯಾಚರಣೆ ನಡೆಸಿ ಆನೆಗಳ ದಂತ ಸೇರಿದಂತೆ ಹುಲಿ ಮತ್ತು ಇತರೆ ಪ್ರಾಣಿಗಳ ಅಂಗಾಂಗಗಳು ಹಾಗೂ ಇಬ್ಬರು ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಗುರುವಾರ ಎರಡು ಆನೆ ದಂತಗಳ ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ನೀಡಿರುವ ಪ್ರಾಥಮಿಕ ಹೇಳಿಕೆಯಲ್ಲಿ ತಾವು ಈ ದಂತಗಳನ್ನು ಶೃಂಗೇರಿಯ ವಿಜಯ ಹೆಗ್ಡೆ ಎಂಬವರಿಂದ ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ಅಂದರೆ, ಈ ಎರಡು ಪ್ರಕರಣಗಳು ನಡೆದಿರುವುದು ಶೃಂಗೇರಿ ತಾಲೂಕಿನಲ್ಲಿ.

ಜಿಲ್ಲೆಯ ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗಡಿಗಳಿಗೆ ಹೊಂದಿಕೊಂಡಿವೆ. ಶೃಂಗೇರಿಯಿಂದ ಉಡುಪಿಯ ದೂರ 89 ಕಿ.ಮೀ. ಶೃಂಗೇರಿಯಿಂದ ದಕ್ಷಿಣ ಕನ್ನಡ ಜಿಲ್ಲೆ 110 ಕಿ.ಮೀ. ಈ ಎರಡು ಮಾರ್ಗಗಳಲ್ಲಿ ವಾಹನಗಳ ಸಂಚಾರ ಕಡಿಮೆ ಇರುತ್ತದೆ. ಆದ್ದರಿಂದ ವನ್ಯಜೀವಿ ಅಂಗಾಂಗಗಳ ಸಾಗಾಣಿಕೆದಾರರ ಆಯ್ಕೆ ಈ ಮಾರ್ಗದ್ದಾಗಿದೆ ಎಂದು ಹೇಳಲಾಗುತ್ತಿದೆ.

ಹತ್ಯೆಗೈದರೆ ಮಾತ್ರ ಆನೆದಂತ

ಆನೆಯ ದಂತ ಅಷ್ಟು ಸುಲುಭವಾಗಿ ಸಿಗುವುದಿಲ್ಲ. ಆನೆಯನ್ನು ಹತ್ಯೆ ಮಾಡಿದರೆ ಮಾತ್ರ ಅದರ ದಂತ ತೆಗೆಯಲು ಸಾಧ್ಯ. ಕೆಲವು ಸಂದರ್ಭಗಳಲ್ಲಿ ದಂತ ತಾನಾಗಿ ಉದುರಿ ಹೋಗುತ್ತದೆ. ಈ ರೀತಿ ಆಕಸ್ಮಿಕ ಸಂಭವಿಸುವುದು ತೀರ ವಿರಳ. ಆನೆ ದಂತ ಮಾರಾಟ ದಂಧೆಯಲ್ಲಿ ತೊಡಗಿರುವವರು ಹೆಚ್ಚಿನ ಮಂದಿ ಆನೆಗಳನ್ನು ಹತ್ಯೆ ಮಾಡಿಯೇ ದಂತವನ್ನು ತೆಗೆಯುತ್ತಾರೆ.

Latest Videos
Follow Us:
Download App:
  • android
  • ios