Asianet Suvarna News Asianet Suvarna News

ಮಂಗಳೂರು: ಕಡಲ ಮೀನು ಲಭ್ಯತೆ ಏಕಾಏಕಿ ಕುಸಿತ..!

ಸಾಮಾನ್ಯವಾಗಿ ಮಳೆಗಾಲ ಮುಗಿದ ಕೂಡಲೆ ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮೀನು ಸಿಗಬೇಕಿತ್ತು. ಇಡೀ ಋತುಮಾನದ ಶೇ.40ಕ್ಕೂ ಅಧಿಕ ಮೀನು ಈ ಮೂರೇ ತಿಂಗಳಲ್ಲಿ ಸಿಗುತ್ತದೆ. ಆದರೆ ಅಕ್ಟೋಬರ್‌ ಅಂತ್ಯದಲ್ಲಿ ಏಕಾಏಕಿ ಮೀನುಗಳೇ ಕಣ್ಮರೆಯಾಗಿದ್ದು, ಮೀನುಗಾರರ ಭರ್ಜರಿ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. 

Fish Availability Plummeted in Mangaluru grg
Author
First Published Dec 15, 2023, 1:00 AM IST

ಸಂದೀಪ್‌ ವಾಗ್ಲೆ

ಮಂಗಳೂರು(ಡಿ.15): ಕಳೆದ ವರ್ಷದ ಮೀನುಗಾರಿಕಾ ಋತುಮಾನದಲ್ಲಿ ಭರಪೂರ ಕಡಲಮೀನು ದೊರೆತು, ಬೆಲೆಯೂ ಕಡಿಮೆಯಾಗಿ ಮೀನು ಪ್ರಿಯರು ದಿಲ್‌ಖುಷ್ ಆಗಿದ್ದರೆ, ಈ ಬಾರಿ ದಕ್ಷಿಣ ಕನ್ನಡದಲ್ಲಿ ಕಡಲ ಮೀನುಗಾರಿಕೆಗೆ ಅನಿರೀಕ್ಷಿತ ಹೊಡೆತ ಬಿದ್ದಿದೆ. ಕಳೆದ ಒಂದೂವರೆ ತಿಂಗಳಿನಿಂದ ಏಕಾಏಕಿ ಮೀನು ಅಭಾವ ಆರಂಭವಾಗಿದ್ದು, ಮೀನುಗಾರರು ಕಂಗಾಲಾಗಿದ್ದಾರೆ. ಮಳೆಯ ತೀವ್ರ ಕೊರತೆಯಿಂದ ಮೀನು ಸಂತತಿಗೆ ಧಕ್ಕೆ ಉಂಟಾಗಿದ್ದರೆ, ಜಾಗತಿಕ ತಾಪಮಾನವೂ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಡಲಿಗಿಳಿದ ಆಳಸಮುದ್ರ ಬೋಟ್‌ಗಳಿಗೆ ಮೀನು ಸಾಕಷ್ಟು ಸಿಗದೆ ನಷ್ಟ ಉಂಟಾಗುತ್ತಿರುವುದರಿಂದ ಅರ್ಧಕ್ಕೂ ಅಧಿಕ ಬೋಟುಗಳು ಧಕ್ಕೆಯಲ್ಲೇ ಲಂಗರು ಹಾಕಿವೆ.

ಹುಸಿಯಾದ ಭರ್ಜರಿ ನಿರೀಕ್ಷೆ:

ಸಾಮಾನ್ಯವಾಗಿ ಮಳೆಗಾಲ ಮುಗಿದ ಕೂಡಲೆ ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮೀನು ಸಿಗಬೇಕಿತ್ತು. ಇಡೀ ಋತುಮಾನದ ಶೇ.40ಕ್ಕೂ ಅಧಿಕ ಮೀನು ಈ ಮೂರೇ ತಿಂಗಳಲ್ಲಿ ಸಿಗುತ್ತದೆ. ಆದರೆ ಅಕ್ಟೋಬರ್‌ ಅಂತ್ಯದಲ್ಲಿ ಏಕಾಏಕಿ ಮೀನುಗಳೇ ಕಣ್ಮರೆಯಾಗಿದ್ದು, ಮೀನುಗಾರರ ಭರ್ಜರಿ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನವೆಂಬರ್‌ನಿಂದೀಚೆಗೆ ಅರ್ಧದಷ್ಟೂ ಮೀನು ಸಿಕ್ಕಿಲ್ಲ. ಈ ಕಾರಣದಿಂದ ಮಾರುಕಟ್ಟೆಯಲ್ಲಿ ಮೀನಿನ ದರ ಕೂಡ ಗಗನಕ್ಕೇರಿದೆ. ಅಂಜಲ್‌ ಮೀನು ಬೆಲೆ ಕೆಜಿಗೆ 500 ರು.ಗೂ ಅಧಿಕ ದರಕ್ಕೆ ಮಾರಾಟವಾಗುತ್ತಿದೆ.

ಮಂಗಳೂರು: ಸ್ಪೀಕರ್ ಖಾದರ್ ವಿರುದ್ಧ ಅವಹೇಳನ ಪೋಸ್ಟ್‌, ಎಸ್‌ಡಿಪಿಐ ಮುಖಂಡ ರಿಯಾಜ್ ಅರೆಸ್ಟ್

ಶೇ.60ಕ್ಕಿಂತ ಕಡಿಮೆ:

ದಕ್ಷಿಣ ಕನ್ನಡದಲ್ಲಿ ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಬರೋಬ್ಬರಿ 42,880.58 ಟನ್ ಮೀನು ಹಿಡಿಯಲಾಗಿದ್ದರೆ, ಈ ಬಾರಿ ಕೇವಲ 16,208 ಟನ್ ಮೀನು ಹಿಡಿಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೀನು ಲಭ್ಯತೆ ಶೇ. 60ಕ್ಕಿಂತಲೂ ಕಡಿಮೆಯಾಗಿದೆ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎ. ಸಿದ್ದಯ್ಯ ತಿಳಿಸಿದ್ದಾರೆ. ಆದರೆ ಅಕ್ಟೋಬರ್‌ನಲ್ಲಿ 36,944 ಮೆಟ್ರಿಕ್‌ ಟನ್‌ ಮೀನು ಸಿಕ್ಕಿತ್ತು. ಅದರ ಬಳಿಕ ಮೀನು ಲಭ್ಯತೆ ಏಕಾಏಕಿ ಕುಸಿದಿದೆ.

ಮಳೆ ಕೊರತೆ, ತಾಪಮಾನ ಬಿಸಿ:

ಈ ಬಾರಿ ಮಳೆಯ ತೀವ್ರ ಕೊರತೆ, ತಾಪಮಾನ ಏರಿಕೆ ಮೀನು ಸಂತತಿ ಇಳಿಕೆಗೆ ಮುಖ್ಯ ಕಾರಣ ಎಂದು ಟ್ರಾಲ್‌ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಹಾಗೂ ಪರ್ಸೀನ್‌ ಬೋಟ್‌ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಮೋಹನ್‌ ಬೆಂಗ್ರೆ ಹೇಳುತ್ತಾರೆ. ಮಳೆ ಕಡಿಮೆಯಾಗಿರುವುದರಿಂದ ಮೀನು ಸಂತಾನಾಭಿವೃದ್ಧಿ ಇಳಿಕೆಯಾಗಿರುವ ಸಾಧ್ಯತೆ ಇದೆ. ಅಲ್ಲದೆ, ಕಡಲ ತಾಪಮಾನ ಏರಿಕೆಯಾಗಿರುವುದರಿಂದ ತಂಪು ಪ್ರದೇಶ ಹುಡುಕಿಕೊಂಡು ಮೀನುಗಳು ಆಳ ಸಮುದ್ರಕ್ಕೆ ತೆರಳುತ್ತವೆ. ಹೀಗಾಗಿ ಎಲ್ಲ ಜಾತಿಯ ಮೀನುಗಳ ಲಭ್ಯತೆ ತೀರ ಕಡಿಮೆಯಾಗಿದೆ. ಅರ್ಧಕ್ಕರ್ಧ ಬೋಟುಗಳು ಕಡಲಿಗೆ ಇಳಿಯುತ್ತಿಲ್ಲ ಎನ್ನುತ್ತಾರವರು.

ಮಂಗಳೂರು: ನರ್ಸಿಂಗ್‌ ಕೋರ್ಸ್‌ಗೆ ಸೇರಿದ ವಾರದಲ್ಲೇ ವಿದ್ಯಾರ್ಥಿ ಆತ್ಮಹತ್ಯೆ!

2021-22ರಲ್ಲಿ ಕರ್ನಾಟಕದ ಸಮುದ್ರ ಮೀನು ಲಭ್ಯತೆ 6.95 ಲಕ್ಷ ಟನ್‌ಗಳಷ್ಟಿತ್ತು. ತಮಿಳುನಾಡಿನ ನಂತರ ದೇಶದಲ್ಲಿ 2ನೇ ಅತಿಹೆಚ್ಚು ಮೀನು ಲಭ್ಯವಾಗುವ ರಾಜ್ಯ ಕರ್ನಾಟಕ. ಆದರೆ ಮೀನು ಸಿಗಬೇಕಾದ ಅವಧಿಯಲ್ಲೇ ಮೀನು ಲಭ್ಯತೆ ಇಳಿಕೆಯಾಗಿರುವುದು ರಾಜ್ಯದ ಮೀನು ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಂಭವವಿದೆ.

ಕೈಗಾರಿಕಾ ತ್ಯಾಜ್ಯದಿಂದಲೂ ಧಕ್ಕೆ

ದಕ್ಷಿಣ ಕನ್ನಡದಲ್ಲಿ ತೀವ್ರಗತಿಯಲ್ಲಿ ಏರುತ್ತಿರುವ ಕೈಗಾರಿಕೆಗಳ ತ್ಯಾಜ್ಯ ಸಮುದ್ರ ಸೇರುತ್ತಿರುವುದರಿಂದ ಇಲ್ಲಿನ ಮೀನು ಸಂತತಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಅಲ್ಲದೆ, ನಿಯಮ ಮೀರಿ ವಿವಿಧ ರೀತಿಯಲ್ಲಿ ಅತಿಯಾದ ಮೀನುಗಾರಿಕೆ ನಡೆಸುವುದು, ಬುಲ್ ಟ್ರಾಲಿಂಗ್, ಬಾಟಮ್ ಟ್ರಾಲಿಂಗ್, ಲೈಟ್‌ ಫಿಶಿಂಗ್‌ ಇತ್ಯಾದಿಗಳ ಕಾರಣದಿಂದಲೂ ಮೀನು ಸಂತತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಂಥ ಮೀನುಗಾರಿಕೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು ಹಾಗೂ ಕೈಗಾರಿಕಾ ತ್ಯಾಜ್ಯ ಸಮುದ್ರ ಸೇರದಂತೆ ನೋಡಿಕೊಳ್ಳಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

Follow Us:
Download App:
  • android
  • ios