Asianet Suvarna News Asianet Suvarna News

ಮಂಗಳೂರಿನ ಮೊದಲ ಕೊರೋನಾ ಸೋಂಕಿತ ಸಂಪೂರ್ಣ ಗುಣಮುಖ..!

ಜಗತ್ತನ್ನೇ ನಲುಗಿಸಿರುವ ಕರೋನಾ ಸಾಂಕ್ರಾಮಿಕ ಕಾಯಿಲೆ ವಿರುದ್ಧ ವೆನ್ಲಾಕ್‌ ಹಾಗೂ ದ.ಕ. ಜಿಲ್ಲಾಡಳಿತಕ್ಕೆ ಮೊದಲ ಯಶಸ್ಸು ದೊರಕಿದೆ. ಮಂಗಳೂರಿನಲ್ಲಿ ಮಾ.22ರಂದು ದಾಖಲಾಗಿದ್ದ ಕೊರೋನಾ ಸೋಂಕಿತ ಭಟ್ಕಳ ಮೂಲದ ವ್ಯಕ್ತಿ ಗುಣಮುಖನಾಗಿದ್ದಾನೆ.

 

First covid19 positive man in mangalore cured and discharged from hospital
Author
Bangalore, First Published Apr 7, 2020, 7:21 AM IST

ಮಂಗಳೂರು(ಏ.07): ಜಗತ್ತನ್ನೇ ನಲುಗಿಸಿರುವ ಕರೋನಾ ಸಾಂಕ್ರಾಮಿಕ ಕಾಯಿಲೆ ವಿರುದ್ಧ ವೆನ್ಲಾಕ್‌ ಹಾಗೂ ದ.ಕ. ಜಿಲ್ಲಾಡಳಿತಕ್ಕೆ ಮೊದಲ ಯಶಸ್ಸು ದೊರಕಿದೆ. ಮಂಗಳೂರಿನಲ್ಲಿ ಮಾ.22ರಂದು ದಾಖಲಾಗಿದ್ದ ಕೊರೋನಾ ಸೋಂಕಿತ ಭಟ್ಕಳ ಮೂಲದ ವ್ಯಕ್ತಿ ಗುಣಮುಖನಾಗಿದ್ದಾನೆ.

ಆತನನ್ನು ಸೋಮವಾರ ನಗರದ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಬಳಿಕ ಭಟ್ಕಳಕ್ಕೆ ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಿಕೊಡಲಾಗಿದ್ದು, ಅಲ್ಲಿ ಆತ ಮನೆಯಲ್ಲಿ ಕೆಲವು ದಿನಗಳ ವರೆಗೆ ನಿಗಾದಲ್ಲಿ ಇರಬೇಕಾಗುತ್ತದೆ. ಉಳಿದಂತೆ 11 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ವೆನ್ಲಾಕ್‌ ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಮೊಬೈಲ್‌ ಟಾರ್ಚ್ ಉರಿಸಿದ ಶಾಸಕ ಖಾದರ್‌ಗೆ ಅವಹೇಳನ

ವೆನ್ಲಾಕ್‌ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳದ 22ರ ಹರೆಯದ ಯುವಕನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಈತ ಮಾ.19ರಂದು ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಮಂಗಳೂರಿಗೆ ಆಗಮಿಸಿದ್ದ. ಕೊರೋನಾ ಸೋಂಕಿನಿಂದ ಇದೀಗ ಈತ ಸಂಪೂರ್ಣ ಗುಣಮುಖನಾಗಿದ್ದಾನೆ. ಈತನನ್ನು ವೆನ್ಲಾಕ್‌ ಆಸ್ಪತ್ರೆಯಲ್ಲೇ 15 ದಿನಗಳ ನಿಗಾ ಅವಧಿಯಲ್ಲಿ ಇರಿಸಲಾಗಿತ್ತು. ಇದೀಗ ನಡೆಸಿದ ಆತನ ಗಂಟಲು ದ್ರವ ಸ್ಯಾಂಪಲ್‌ನ ಎರಡು ಸಲದ ಪರೀಕ್ಷೆಯಲ್ಲೂ ಕೊರೋನಾ ನೆಗಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕ ಡಾ. ಸದಾಶಿವ ತಿಳಿಸಿದ್ದಾರೆ.

ಮೊದಲ ಪ್ರಕರಣವಾಗಿತ್ತು:

ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಮೊದಲ ಪ್ರಕರಣ ಇದಾಗಿತ್ತು. ವಿದೇಶದಿಂದ ಮಂಗಳೂರಿಗೆ ಬಂದ ಈತನ ಆರೋಗ್ಯ ತಪಾಸಣೆ ವೇಳೆ ರೋಗ ಲಕ್ಷಣ ಗೋಚರವಾಗಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದಲೇ ನೇರವಾಗಿ ಆ್ಯಂಬುಲೆನ್ಸ್‌ ಮೂಲಕ ವೆನ್ಲಾಕ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ವೆನ್ಲಾಕ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್‌ ವಾರ್ಡ್‌ ರಚಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದಿನೇ ದಿನೇ ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು ಸೋಮವಾರ ಆಸ್ಪತ್ರೆಯಿಂದ ಮನೆಗೆ ಮರಳುವಂತಾಗಿದೆ.

ಭಾರತದಲ್ಲಿ ಒಂದೇ ದಿನ 700 ಜನಕ್ಕೆ ವೈರಸ್‌, ಮುಂದಿನ ವಾರ ಡೇಂಜರ್!

ಜಿಲ್ಲೆಯ ಪ್ರಥಮ ಪ್ರಕರಣ ಇದಾಗಿದ್ದರಿಂದ ಜಿಲ್ಲಾಡಳಿತ ಸಾಕಷ್ಟುಮುಂಜಾಗ್ರತಾ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಂಡಿತು. ಅದರಲ್ಲೂ ವೆನ್ಲಾಕ್‌ ಆಸ್ಪತ್ರೆಗೆ ಇದೊಂದು ಸವಾಲಿನ ಪ್ರಕರಣವಾಗಿತ್ತು. ಇತರೆ ರೋಗಿಯನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿಡುವುದಲ್ಲದೆ, ರೋಗಕ್ಕೆ ಚಿಕಿತ್ಸೆ ನೀಡುವುದೂ ಕೂಡಾ ಮಹತ್ವದ್ದಾಗಿತ್ತು. ಈ ನಿಟ್ಟಿನಲ್ಲಿ ವೆನ್ಲಾಕ್‌ ಅಧೀಕ್ಷಕರು, ವೈದ್ಯರು, ನರ್ಸ್‌ ಹಾಗೂ ಸಿಬ್ಬಂದಿ ತಮ್ಮ ಪೂರ್ಣ ಸೇವೆಯನ್ನು ಮೀಸಲಿಟ್ಟು, ಅಂತಿಮವಾಗಿ ರೋಗಿಯನ್ನು ಗುಣಮುಖಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ಳಂಬೆಳಗ್ಗೆ ಊರಿನತ್ತ: ಕರೋನಾದಿಂದ ಗುಣಮುಖನಾದ ಭಟ್ಕಳದ 22ರ ಹರೆಯದ ಈ ಯುವಕ, ಸೋಮವಾರ ಬೆಳಗ್ಗೆ ತನ್ನ ಊರಿನತ್ತ ತೆರಳಿದ್ದಾನೆ. ಇದಕ್ಕೂ ಮುನ್ನ ಇಷ್ಟುದಿನ ತನಗೆ ಚಿಕಿತ್ಸೆ ನೀಡಿ, ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಿದ ವೆನ್ಲಾಕ್‌ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಲ್ಲದೆ, ವೈದ್ಯರ ಬಳಿ ಭಾವುಕನಾಗಿ ಕ್ಷಣಕಾಲ ನಿಂತಿದ್ದನು.

ರೋಗ ಹೇಗೆ ಬಂತು ಗೊತ್ತಿಲ್ಲವೆಂದ ಯುವಕ

ದುಬೈನಲ್ಲಿ ಕಳೆದ 2 ವರ್ಷಗಳಿಂದ ಬ್ರಾಂಡೆಡ್‌ ವಾಚ್‌ ವ್ಯಾಪಾರ ಮಾಡುತ್ತಿದ್ದ ಈ ಯುವಕ, ವೆನ್ಲಾಕ್‌ನಲ್ಲಿ ತನಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗಿದೆ. ತನ್ನನ್ನು ಬಹಳ ಪ್ರೀತಿಯಿಂದ ಇಲ್ಲಿ ಕಾಣಲಾಯಿತು. ಯಾವುದೇ ಸಮಸ್ಯೆಯಾಗದಂತೆ ಇಷ್ಟುದಿನ ನೋಡಿಕೊಳ್ಳಲಾಗಿದೆ. ತಿನ್ನಲು ಉತ್ತಮ ಆಹಾರವನ್ನೂ ನೀಡಲಾಗಿದೆ ಎಂದು ತನ್ನ ಸಂತೋಷವನ್ನು ವೈದ್ಯಾಧಿಕಾರಿ, ಸಿಬ್ಬಂದಿ ಜೊತೆ ಹಂಚಿಕೊಂಡಿದ್ದಾನೆ.

ನನಗೆ ಈ ರೋಗ ಹೇಗೆ ಬಂತು ಎಂಬ ನಿಖರ ಕಾರಣ ತಿಳಿದಿಲ್ಲ ಎಂದಿರುವ ಯುವಕ, ಕೊರೋನಾ ಪಾಸಿಟಿವ್‌ ದೃಢಪಟ್ಟನಂತರ, ನಾನೇ ಎಲ್ಲರಿಂದಲೂ ಸಂಪೂರ್ಣ ಅಂತರ ಕಾಯ್ದುಕೊಂಡೆ ಎಂದು ಹೇಳುತ್ತಾನೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಬಗ್ಗೆ ಸಾಕಷ್ಟುಭಯಭೀತಿ ಮೂಡಿಸುವಂತೆ ಮಾಡಲಾಗುತ್ತಿದೆ ಎಂದು ಯುವಕನು ಅಸಮಾಧಾನ ವ್ಯಕ್ತಪಡಿಸಿದ್ದಾನೆ.

ಚಪ್ಪಾಳೆ, ದೀಪದಿಂದ ಕೊರೋನಾ ಹೋಗಲ್ಲ, ಪ್ರಧಾನಿ ಮೋದಿ ಕರೆಗೆ ಸತೀಶ್ ಜಾರಕಿಹೊಳಿ ವ್ಯಂಗ್ಯ!

ಆಸ್ಪತ್ರೆಗೆ ದಾಖಲಾಗಿ ರೋಗ ಹರಡುವುದು ತಪ್ಪಿತು: ಕೊರೋನಾ ವೈರಸ್‌ ನಮ್ಮ ದೇಹ ಪ್ರವೇಶಿಸುವುದು ಗೊತ್ತಾಗುವಾಗ ಹಲವು ದಿನಗಳು ಕಳೆದಿರುತ್ತದೆ. ನಮ್ಮ ಓಡಾಟ ನಿಯಂತ್ರಿಸುವುದು ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್‌ ಸರ್ಕಾರದ ದಿಟ್ಟಹೆಜ್ಜೆಯಾಗಿದ್ದು, ಸರ್ಕಾರದ ನಿರ್ದೇಶನದಂತೆ ಎಲ್ಲರೂ ಮನೆಯೊಳಗೆ ಇರುವುದು ಅಗತ್ಯವಾಗಿದೆ. ನಾನು ವಿಮಾನ ನಿಲ್ದಾಣದಿಂದಲೇ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ, ಊರಿಗೆ ತೆರಳಿ ಬಳಿಕ ಕುಟುಂಬಸ್ಥರಿಗೆ, ಊರಿನವರಿಗೆ ರೋಗ ಹರಡುವುದು ತಪ್ಪಿತು. ಇದಕ್ಕಾಗಿ ನಾನು ದ.ಕ. ಜಿಲ್ಲಾಡಳಿತಕ್ಕೆ ಎಷ್ಟುಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಯುವಕ ಹೇಳುತ್ತಾನೆ.

ಆತ್ಮವಿಶ್ವಾಸ ಮುಖ್ಯ:

ಕೊರೋನಾ ರೋಗಕ್ಕೆ ಹೆದರುವ ಅಗತ್ಯವಿಲ್ಲ. ಆತ್ಮವಿಶ್ವಾಸ ಮುಖ್ಯವಾಗಿದೆ. ರೋಗಿಯು ಪ್ರತ್ಯೇಕವಾಗಿರುವುದು ಅಗತ್ಯ. ಒಬ್ಬಂಟಿಯಾಗಿರುವುದಕ್ಕೆ ಹೆದರುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು, ಸೋಂಕಿನ ವಿರುದ್ಧ ಹೋರಾಡಲು ನಮ್ಮಲ್ಲಿ ಧೈರ್ಯ ಮುಖ್ಯವಾಗಿದೆ ಎಂದು ಆತ ಹೇಳಿದ್ದಾನೆ.

ವೈದ್ಯರ ಚಿಕಿತ್ಸೆ, ದೇವರ ಅನುಗ್ರಹದಿಂದ ಇದೀಗ ನನ್ನ ಆರೋಗ್ಯ ಸಾಮಾನ್ಯ ಸ್ಥಿತಿಗೆ ಬಂದಿದೆ. ವೆನ್ಲಾಕ್‌ ಆಸ್ಪತ್ರೆ ವೈದ್ಯರ, ಸಿಬ್ಬಂದಿಯ ನಿರಂತರ ಆರೈಕೆಯ ಪರಿಣಾಮ ನಾನು ಗುಣಮುಖನಾಗುವಂತಾಯಿತು ಎಂದು ಡಿಸ್ಚಾರ್ಜ್ ಆದ ಯುವಕ ತಿಳಿಸಿದ್ದಾನೆ.

Follow Us:
Download App:
  • android
  • ios