ಉಡುಪಿ, [ಫೆ.16]: ಅಗ್ನಿ ಶಾಮಕ ದಳ ಹಾಗೂ ಪೊಲೀಸರ ಸತತ 6 ಗಂಟೆಗಳ ತುರ್ತು ಕಾರ್ಯಾಚರಣೆಯಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಮರವಂತೆಯಲ್ಲಿ ಬೋರ್‌ವೆಲ್‌ ಗುಂಡಿಯೊಳಗೆ ಕುಸಿದುಬಿದ್ದಿದ್ದ ವ್ಯಕ್ತಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾನೆ.

ಅಗ್ನಿ ಶಾಮಕ ದಳ ಹಾಗೂ ಪೊಲೀಸರ ಸತತ 6 ಗಂಟೆಗಳ ತುರ್ತು ಕಾರ್ಯಾಚರಣೆ ಯಶಸ್ವಿಯಾಗಿದೆ. ಬೋರ್‌ವೆಲ್‌ ಗುಂಡಿ ಒಳಗೆ ಕುಸಿದು ಬಿದ್ದಿದ್ದ ಕಾರ್ಮಿಕ ರೋಹಿತ್ ಖಾರ್ವಿ ಎಂಬಾತನನ್ನು ರಕ್ಷಣೆ ಮಾಡಲಾಗಿದೆ.

ಉಡುಪಿಯಲ್ಲಿ ಭೀಕರ ಅಪಘಾತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

ರೋಹಿತ್‌ ಖಾರ್ವಿ  ಸಾವನ್ನೇ ಗೆದ್ದು ಮೃತ್ಯು ಕೂಪದಿಂದ ಹೊರ ಬಂದಿರುವ ಕಾರ್ಮಿಕ. ಮಣ್ಣು ಕುಸಿದು 12 ಅಡಿ ಅಳದಲ್ಲಿ ಸಿಲುಕಿದ್ದ ಈತ ಒಂದಲ್ಲ ಎರಡಲ್ಲ ಬರೋಬ್ಬರಿ 6 ಗಂಟೆಗಳವರಗೆ 12 ಅಡಿ ಆಳದಿಂದ ಹೊರ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿ ನೆಮ್ಮದಿಯ ನಗೆ ಬೀರಿದ್ದಾನೆ.

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಮರವಂತೆ ಬಳಿ ಬೋರ್ ವೆಲ್ ತೆಗೆಯಲಾಗ್ತಿತ್ತು. ಸಮುದ್ರ ತೀರ ಪ್ರದೇಶದ, ಮರಳು ಮಿಶ್ರಿತ ಮಣ್ಣಿನಲ್ಲಿ ಬೋರ್ ವೆಲ್ ನ ಕಂಪ್ರೇಸರ್ ಭೂಮಿಯ ಆಳಕ್ಕೆ ಇಳಿಯುತ್ತಿತ್ತು. ನೋಡ ನೋಡ್ತಿದ್ದಂತೆ ಭೂಮಿ ಕುಸಿದೇ ಬಿಟ್ಟಿತ್ತು. 

 ಬೋರ್ ವೆಲ್ ಪೈಪ್ ಇಳಿಸುವ ಕಾಯಕದಲ್ಲಿ ತೊಡಗಿದ್ದ ರೋಹಿತ್ ಖಾರ್ವಿ, 12 ಅಡಿ ಆಳಕ್ಕೆ ಕುಸಿದು ಮಣ್ಣಲ್ಲಿ ಸಿಕ್ಕಿಕೊಂಡಿದ್ದಾನೆ.. ಇದು ನೆರೆದಿದ್ದವರಲ್ಲಿ ಕ್ಷಣ ಕ್ಷಣಕ್ಕೂ ಆಂತಕ ಹೆಚ್ಚುವಂತೆ ಮಾಡಿತ್ತು..

ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ, ರೋಹಿತ್ ಖಾರ್ವಿಗೆ ಆಮ್ಲಜನಕದ ವ್ಯವಸ್ಥೆ ಮಾಡಿದ್ರು. ಮಣ್ಣು ತಲೆಯ ಮೇಲೆ ಕುಸಿಯದಂತೆ ದೊಡ್ಡದಾದ ಡ್ರಮ್ ಒಂದನ್ನು  ಅಳವಡಿಸಿದರು. ಜೆಸಿಬಿ ಮೂಲಕ ಮತ್ತೊಂದು ಹೊಂಡವನ್ನು ಕೊರೆಯಲಾಯಿತು. 

 ಸುಮಾರು 6 ಗಂಟೆ ಕಾರ್ಯಾಚರಣೆ ನಡೆಸಿ, ರೋಹಿತ್ ನನ್ನ ಸುರಕ್ಷಿತವಾಗಿ ಮೇಲಕ್ಕೆತ್ತಿದರು. ಬಳಿಕ ಮುಂಜಾಗ್ರತೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ರೋಹಿತ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

 ಸಾವು ಬೆನ್ನತ್ತಿ ಬಂದಿದ್ದರೂ ರೋಹಿತ್ ಆಯಸ್ಸು ಗಟ್ಟಿಯಿತ್ತು. ಸಾವು ಬದುಕಿನ ನಡುವೆ ಹೋರಾಟ ಮಾಡಿದ ರೋಹಿತ್ ಸಾವನ್ನೇ ಗೆದ್ದು ಮೃತ್ಯು ಕೂಪದಿಂದ ಹೊರ ಬಂದಿದ್ದಾರೆ. ಅಗ್ನಿ ಶಾಮಕ ದಳ ತಂಡಕ್ಕೆ ಬೈಂದೂರು ಎಂಎಲ್ ಎ 25 ಸಾವಿರ ಬಹುಮಾನ ಸಹ ಘೋಷಣೆ ಮಾಡಿದ್ದಾರೆ.