Asianet Suvarna News Asianet Suvarna News

ನಿಯಂತ್ರಣ ತಪ್ಪಿ ಸೂಪರ್‌ ಬೈಕ್‌ ಅಪಘಾತ: ಚಿತ್ರ ವಿತರಕ ಸಾವು

ಸೂಪರ್ ಬೈಕ್ ಅಪಘಾತವಾಗಿ ಚಿತ್ರ ವಿತರಕರೋರ್ವರು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

Film Distributor Dies in Accident in Bengaluru
Author
Bengaluru, First Published Jul 15, 2019, 8:17 AM IST
  • Facebook
  • Twitter
  • Whatsapp

ಬೆಂಗಳೂರು [ಜು.15] :  ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ದುಬಾರಿ ಬೆಲೆಯ ಬೈಕ್‌ ಚಾಲನೆ ಮಾಡುವ ವೇಳೆ ಸಂಭವಿಸಿದ ಅಪಘಾತದಲ್ಲಿ ಸಿನಿಮಾ ವಿತರಕರೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ಕ್ರೆಸೆಂಟ್‌ ರಸ್ತೆ ನಿವಾಸಿ ಅಜಯ್‌ ಚಂದಾನಿ (48) ಮೃತರು. ಅಜಯ್‌ ಅವರು ಖ್ಯಾತ ಸಿನಿಮಾ ವಿತರಕ ಪಾಲ್‌ ಚಂದಾನಿ ಅವರ ಪುತ್ರರಾಗಿದ್ದಾರೆ. ಅಜಯ್‌ ಪತ್ನಿ, ಪುತ್ರಿ ಜತೆ ಕ್ರೆಸೆಂಟ್‌ ರಸ್ತೆಯಲ್ಲಿ ನೆಲೆಸಿದ್ದರು. ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಅಜಯ್‌ ಅವರು ಭಾನುವಾರ ಸಂಜೆ 6.30ರ ಸುಮಾರಿಗೆ 7.50 ಲಕ್ಷ ರು. ಮೌಲ್ಯದ ಸುಜುಕಿ ವಿ ಸ್ಟಾಮ್‌ರ್‍ 650 ಎಕ್ಸ್‌ಟಿ ಸೂಪರ್‌ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ಎಡಭಾಗಕ್ಕೆ ಇರುವ ಸಣ್ಣ ತಿರುವಿನಲ್ಲಿ ತಿರುವು ಪಡೆದುಕೊಳ್ಳಬೇಕಿತ್ತು. ಆದರೆ ಬೈಕ್‌ ಅತಿಯಾದ ವೇಗದಲ್ಲಿ ಇದ್ದುದರಿಂದ ನಿಯಂತ್ರಣ ತಪ್ಪಿದೆ. ಬಳಿಕ ಸಂಚಾರ ಪೊಲೀಸರು ಅಳವಡಿಸಿದ್ದ ಸೂಚನಾ ಫಲಕಕ್ಕೆ ಮೊದಲು ಡಿಕ್ಕಿಯಾಗಿದೆ. ನಂತರ ಹೂಡಿ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಗೋಡೆಗೆ ಡಿಕ್ಕಿ ಒಡೆದು ಸುಮಾರು ಐದು ಅಡಿಯ ಗೋಡೆ ಸೀಳಿ ಗೋಡೆ ಮೇಲೆ ಬೈಕ್‌ ಸಿಕ್ಕಿಕೊಂಡಿದೆ.

ರಭಸದಲ್ಲಿ ತಲೆಗೆ ಪೆಟ್ಟಾಗಿ ನೆಲಕ್ಕೆ ಅಪ್ಪಳಿಸಿ ಬಿದ್ದಿದ್ದ ಅಜಯ್‌ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತದ ರಭಸಕ್ಕೆ ಆರಂಭದಲ್ಲಿ ಸಂಚಾರ ಪೊಲೀಸರು ಕೂಡ ವ್ಹೀಲಿಂಗ್‌ ಯತ್ನದಲ್ಲಿದ್ದಾಗ ಘಟನೆ ನಡೆದಿರಹುದು ಎಂದು ಶಂಕಿಸಿದ್ದರು. ಆದರೆ ಪರಿಶೀಲನೆ ಬಳಿಕ ವ್ಹೀಲಿಂಗ್‌ ಮಾಡುತ್ತಿರಲಿಲ್ಲ ಎನ್ನುವುದು ದೃಢಪಟ್ಟಿದೆ. ವೇಗವಾಗಿ ಬೈಕ್‌ ಚಾಲನೆ ಮಾಡಿದ ಪರಿಣಾಮ ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios