ತೈಲ ಬೆಲೆ ಏರಿಕೆ ಬೆನ್ನಲ್ಲೇ ರೈತರಿಗೆ ಬಿಗ್ ಶಾಕ್ : ಭಾರಿ ದುಬಾರಿಯಾದ ರಸಗೊಬ್ಬರ

ತೈಲ ದರ ಏರಿಕೆ ಬೆನ್ನಲ್ಲೇ ರೈತರಿಗೆ ಆಘಾತವಾಗುವ ವಿಚಾರ ಇಲ್ಲಿದೆ. ರಸಗೊಬ್ಬರಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಉತ್ಪಾದನೆಯೇ ಕಠಿಣ ಎನ್ನುವ ಮಟ್ಟಿಗಾಗಿದೆ. 

Fertiliser Price Hikes in Karnataka snr

ವರದಿ :  ಸೋಮರಡ್ಡಿ ಅಳವಂಡಿ
 
ಕೊಪ್ಪಳ (ಫೆ.01):  ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ ಪರಿಣಾಮ ವಸ್ತುಗಳ ಬೆಲೆ ಒಂದೊಂದಾಗಿಯೇ ಏರಲಾರಂಭಿಸಿದ್ದು, ಇದೀಗ ರೈತರಿಗೆ ಅತ್ಯಂತ ಅಗತ್ಯವಾಗಿರುವ ರಸಗೊಬ್ಬರದ ಬೆಲೆಯೂ ಗಗನಮುಖಿಯಾಗಲಿದೆ. ರಾಜ್ಯದ ಪ್ರಮುಖ ರಸಗೊಬ್ಬರ ತಯಾರಿಕಾ ಕಂಪನಿಯಾದ ಎಂಸಿಎಫ್‌ (ಮಂಗಳೂರು ಕೆಮಿಕಲ್ಸ್‌ ಅಂಡ್‌ ಫರ್ಟಿಲೈಸ​ರ್‍ಸ್) ದರ ಏರಿಕೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಮಾ.1ರಿಂದ ತನ್ನ ಕಂಪನಿಯ ಡಿಎಪಿ, ಪೊಟ್ಯಾಷ್‌ ಮೊದಲಾದ ರಸಗೊಬ್ಬರಗಳ ದರ ಎಷ್ಟುಹೆಚ್ಚಳವಾಗುತ್ತದೆ ಎನ್ನುವ ಮಾಹಿತಿ ನೀಡಿದೆ. ಮೊದಲೇ ಉತ್ಪನ್ನಗಳ ಬೆಲೆ ಕುಸಿತದಿಂದ ಕಂಗೆಟ್ಟಿರುವ ಅನ್ನದಾತರ ಪಾಲಿಗೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

50 ಕೆ.ಜಿ. ಪೊಟ್ಯಾಷ್‌ ಮತ್ತು ಡಿಎಪಿ ರಸಗೊಬ್ಬರ ಬೆಲೆ .200ರಿಂದ 300 ಏರಿಕೆಯಾಗಿದೆ. ಈ ಬಗ್ಗೆ ತಮ್ಮ ಏಜೆನ್ಸಿಗಳಿಗೂ ಈಗಾಗಲೇ ಎಂಸಿಎಫ್‌ ಮಾಹಿತಿ ನೀಡಿದೆ. ಇದು ಜಾರಿಗೆ ಬಂದದ್ದೇ ಆದಲ್ಲಿ ರೈತರ ಉತ್ಪಾದನೆ ವೆಚ್ಚ ಭಾರೀ ಹೆಚ್ಚಳವಾಗಲಿದೆ. ಆದರೆ ಈ ಬಗ್ಗೆ ಸರ್ಕಾರದಿಂದ ಇದುವರೆಗೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಹೆಚ್ಚಾದ ದರ ಜಾರಿಗೆ ನಾಲ್ಕಾರು ದಿನಗಳು ಆಗಬಹುದು ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿದೆ. ಜೊತೆಗೆ ಇಂಧನ ಬೆಲೆಯೇರಿಕೆಯಿಂದ ಸಾಗಣೆ ವೆಚ್ಚವೂ ಅಧಿಕವಾಗಿದೆ. ಹೀಗಾಗಿ ರಸಗೊಬ್ಬರ ದರದಲ್ಲಿ ಏರಿಕೆಯಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ತುದಿಗಾಲ ಮೇಲೆ:

ಸದ್ಯ ಎಂಸಿಎಫ್‌ ಮಾತ್ರ ದರ ಹೆಚ್ಚಳವನ್ನು ಘೋಷಣೆ ಮಾಡಿದೆ. ಉಳಿದ ಕಂಪನಿಗಳು ದರ ಹೆಚ್ಚಳದ ಕುರಿತು ಇದುವರೆಗೂ ಘೋಷಣೆ ಮಾಡಿಲ್ಲ. ಆದರೆ ತುದಿಗಾಲ ಮೇಲೆ ನಿಂತಿದ್ದು, ಒಂದು ವಾರದೊಳಗಾಗಿ ಹೆಚ್ಚಾದ ದರಗಳ ಮಾಹಿತಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಇನ್ನು ಇಪ್ಕೋ ಕಂಪನಿ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ದರ ಏರಿಕೆ ತಡೆಯುವ ಪ್ರಯತ್ನ ಮಾಡಿ, ಏರಿಕೆಯಾಗಿರುವ ದರವನ್ನು ಮಾರುಕಟ್ಟೆಗೆ ಅನ್ವಯ ಮಾಡಿಲ್ಲ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ರೈತರಿಗೆ ಬರೆ ಎಳೆದಂತೆ ಆಗುತ್ತದೆ ಎಂದು ತನ್ನ ದರಪಟ್ಟಿಪರಿಷ್ಕರಿಸಿದ್ದರೂ ಇನ್ನೂ ಜಾರಿ ಮಾಡಿಲ್ಲ. ಆದರೆ ಇಂದಲ್ಲ ನಾಳೆ ದರ ಏರಿಕೆ ಅನಿವಾರ್ಯ ಎನ್ನಲಾಗುತ್ತಿದೆ.

ಚಳಿ​ಗಾಲ ಮುಗಿದ ಬಳಿಕ ಪೆಟ್ರೋಲ್‌ ದರ ಇಳಿ​ಕೆ: ಕೇಂದ್ರ! .

ದಿನೇ ದಿನೇ ಏರಿಕೆಯಾಗುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಪರಿಣಾಮದಿಂದಾಗಿ ಉತ್ಪಾದನಾ ವೆಚ್ಚ ಏರಿಕೆಯಾಗುತ್ತಿದೆ. ಹೀಗಾಗಿ ಇದನ್ನು ಸಹಿಸಿಕೊಳ್ಳುವ ತಾಕತ್ತು ಕಂಪನಿಗಳಿಗೆ ಇಲ್ಲವಾದ್ದರಿಂದ ಅನಿವಾರ್ಯವಾಗಿ ರಸಗೊಬ್ಬರಗಳ ಬೆಲೆಯನ್ನು ಏರಿಕೆ ಮಾಡುತ್ತಿವೆ ಎನ್ನಲಾಗುತ್ತಿದೆ.

ಸಬ್ಸಿಡಿಯಲ್ಲಿ ಬದಲಾವಣೆಯಿಲ್ಲ:

ಸಬ್ಸಿಡಿಯನ್ನು ಆಯಾ ರಸಗೊಬ್ಬರದಲ್ಲಿ ಬಳಕೆ ಮಾಡುವ ಪೋಷಕಾಂಶಗಳ ಮೇಲೆ ನೀಡಲಾಗುತ್ತದೆ. ಹೀಗಾಗಿ ಇದು ಇಂತಿಷ್ಟೇ ಎಂದು ಇರುವುದಿಲ್ಲ. ಸಾಮಾನ್ಯವಾಗಿ ಪ್ರತಿ 50 ಕೆಜಿ ಬ್ಯಾಗಿಗೆ .400ರಿಂದ .600 ಸಬ್ಸಿಡಿ ಇದೆ. ಈಗ ಸಬ್ಸಿಡಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರತಿ ಚೀಲದ ಮೇಲೆಯೂ ಸಬ್ಸಿಡಿ ನಮೂದಿಸಲಾಗುತ್ತದೆ.

ಬೆಲೆ ಏರಬಹುದು

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗುತ್ತಿರುವುದರಿಂದ ರಸಗೊಬ್ಬರದ ಬೆಲೆಯೂ ಏರಿಕೆಯಾಗುತ್ತಿರಬಹುದು. ಆದರೆ, ನಾನು ನವಲಗುಂದದಲ್ಲಿ ಇರುವುದರಿಂದ ಅಧಿಕೃತ ಮಾಹಿತಿ ಇಲ್ಲ. ಎಲ್ಲವೂಗಳ ಬೆಲೆ ಏರುತ್ತಲೇ ಇದೆ. ಹೀಗಾಗಿ ರಸಗೊಬ್ಬರ ಬೆಲೆಯೂ ಏರಬಹುದು.

-ಬಿ.ಸಿ.ಪಾಟೀಲ, ಕೃಷಿ ಸಚಿವರು

ಸರ್ಕಾರಕ್ಕೆ ಮಾಹಿತಿ

ಈಗಾಗಲೇ ದರ ಹೆಚ್ಚಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಇದರ ಪರಿಣಾಮ ಆಗಲು ನಾಲ್ಕಾರು ದಿನಗಳು ಬೇಕಾಗಬಹುದು. ಕಚ್ಚಾವಸ್ತುಗಳ ಬೆಲೆ ಹೆಚ್ಚಳವಾಗುತ್ತಿರುವುದು ಮತ್ತು ಇಂಧನ ಬೆಲೆ ಹೆಚ್ಚಳವೇ ದರ ಹೆಚ್ಚಳಕ್ಕೆ ಕಾರಣವಾಗಿದೆ.

-ಮಹೇಶ, ಸೇಲ್ಸ್‌ ಮ್ಯಾನೇಜರ್‌, ಎಂಸಿಎಫ್‌ ಕಂಪನಿ

ಇಪ್ಕೋದಿಂದ ತಡೆ

ದರ ಹೆಚ್ಚಳ ಪ್ರಸ್ತಾವನೆ ಇದ್ದರೂ ಇದುವರೆಗೂ ತಡೆ ಹಿಡಿಯಲಾಗಿದೆ. ಕೋವಿಡ್‌ ಸಂಕಷ್ಟದಲ್ಲಿ ದರ ಹೆಚ್ಚಳ ಸೂಕ್ತವಲ್ಲ ಎನ್ನುವ ಕಾರಣಕ್ಕಾಗಿ ನಮ್ಮ ಕಂಪನಿಯವರು ತಡೆ ಹಿಡಿದಿದ್ದಾರೆ.

-ಚಿದಂಬರಂ, ಸೇಲ್ಸ್‌ ಮ್ಯಾನೇಜರ್‌, ಇಪ್ಕೋ ಕಂಪನಿ

ದರ ಪಟ್ಟಿಬಂದಿದೆ

ರಸಗೊಬ್ಬರ ಬೆಲೆ ಏರಿಕೆಯ ಕುರಿತು ಈಗಾಗಲೇ ಕಂಪನಿಯವರು ಮಾಹಿತಿ ನೀಡಿದ್ದಾರೆ. ಎರಡ್ಮೂರು ದಿನಗಳಲ್ಲಿ ದರ ಏರಿಕೆಯಾಗಲಿದೆ. ಈಗಾಗಲೇ ಅದರ ಪಟ್ಟಿಯನ್ನು ನಮಗೆ ಕಳುಹಿಸಿದ್ದಾರೆ.

-ಕೊಟ್ರಪ್ಪ ಹುರಕಡ್ಲಿ, ಮಹಾಂತೇಶ ಫಾಮ್‌ರ್‍


ಎಂಸಿಎಫ್‌ ಗೊಬ್ಬರ ಬೆಲೆ (ರು.ಗಳಲ್ಲಿ)

ರಸಗೊಬ್ಬರ ಹೊಸ ದರ ಹಳೆ ದರ

ಡಿಎಪಿ 1500 1300

ಎನ್‌ಪಿಕೆ 10.26.26 1400 1180

ಎನ್‌ಪಿಕೆ 12.32.16 1410 1160

ಎನ್‌ಪಿಎಸ್‌ 20.20.0.13 1150 960

ಎನ್‌ಪಿಕೆ 19, 19, 19 1500 1180

Latest Videos
Follow Us:
Download App:
  • android
  • ios