'ವ್ಯಾಪಾರಿ ಸರಕಾಗಿರುವ ಹೆಣ್ಣಿನ ಮೈ, ಮನಸ್ಸು'
ಇಂದಿನ ಕಾಲದಲ್ಲಿ ಹೆಣ್ಣಿನ ಮೈ ಮನಸ್ಸು ವ್ಯಾಪಾರಿ ಸರಕಾಗಿದೆ ಎಂದು ರಾಮನಗರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನೇಕ ಮಹಿಳಾ ಹೋರಾಟಗಾರರು ತಮ್ಮ ಆತಂಕ ಹೊರಹಾಕಿದರು.
ಎಂ. ಅಫ್ರೋಜ್ ಖಾನ್
ರಾಮನಗರ [ಜ.25]: ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಸುಕು ಹಾಕುವ ಪರದಾ ಪದ್ಧತಿಯಿಂದ ಹೊರ ಬಂದಿಲ್ಲ. ಆಧುನಿಕ ಸರಕು ಸಂಸ್ಕೃತಿಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ತ್ರೀಯ ದೇಹವನ್ನು ‘ಕಮಾಡಿಟಿ’ ಎಂಬಂತೆ ಬಳಸಿಕೊಳ್ಳುತ್ತಿದೆ. ಇದರಷ್ಟೇ ಅಪಾಯಕರವಾದ ಕೋಮುವಾದ ಹೆಣ್ಣಿನ ಮೈ ಮನಸ್ಸುಗಳನ್ನೇ ತನ್ನ ಸಾಧನವಾಗಿ ಬಳಸಿಕೊಳ್ಳುತ್ತಿದೆ ಎನ್ನುವುದು ಮಹಿಳಾ ಪ್ರತಿನಿಧಿಗಳ ಅಭಿಮತ.
ನಗರದ ಆರ್‌ವಿಸಿಎಸ್ ಕನ್ವೆನ್ಷನ್ ಹಾಲ್‌ನ ಜಿ.ಪಿ. ರಾಜರತ್ನಂ ವೇದಿಕೆಯಲ್ಲಿ ನಡೆಯುತ್ತಿರುವ ರಾಮನಗರ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಮಹಿಳಾ ಗೋಷ್ಠಿಯಲ್ಲಿ ಪ್ರಾಧ್ಯಾಪಕರು, ಸಾಹಿತಿಗಳು ಹಾಗೂ ಮಹಿಳಾ ಹೋರಾಟಗಾರರು ವ್ಯಕ್ತಪಡಿಸಿದ ಆತಂಕದ ನುಡಿಗಳಿವು.
ತಲ್ಲಣಗಳ ಅನುಭವ:
ಮಹಿಳೆಯ ಬದುಕು ಆದಿಕಾಲದಿಂದಲೂ ಸಂಕೀರ್ಣತೆಗಳ ಮೊತ್ತ. ಈ ಆಧುನಿಕ ಕಾಲವಂತೂ ಸಂಕ್ರಮಣ ಘಟ್ಟದ ಎಲ್ಲಾ ಗೊಂದಲಗಳ ವ್ಯವಸ್ಥೆಯಲ್ಲದ ವ್ಯವಸ್ಥೆ. ಹೀಗಿರುವಲ್ಲಿ ಇಂದಿನ ಮಹಿಳೆ ಹಿಂದೆಂದಿಗಿಂತಲೂ ಹೆಚ್ಚು ಸೂಕ್ಷ್ಮ ಸಂವೇದಿಯಾಗಿ ಹಲವು ಬಗೆಯ ತಲ್ಲಣಗಳನ್ನು ಸ್ವತಃ ಅನುಭವಿಸುವ ಅನಿವಾರ್ಯತೆಯಾಗಿದ್ದಾಳೆ ಎಂದು ‘ಮಹಿಳೆ ಮತ್ತು ಆಧುನಿಕ ತಲ್ಲಣಗಳು’ ವಿಷಯ ಮಂಡಿಸಿದ ಬಿಡದಿ ಸರ್ಕಾರಿ ಪ್ರಥಮ ದರ್ಜೆ ಸಹಾಯಕ ಪ್ರಾಧ್ಯಾಪಕಿ ಶೋಭಾರಾಣಿ ಬೇಸರ ವ್ಯಕ್ತಪಡಿಸಿದರು.
20ನೇ ಶತಮಾನದ ಕೊನೆಯ ಭಾಗ ಮತ್ತು 21ನೇ ಶತಮಾನದ ಇಂದಿನ ಕಾಲಘಟ್ಟದಲ್ಲಿ ವಿಶ್ವದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳು ಅತ್ಯಂತ ಶೀಘ್ರಗತಿಯಲ್ಲಿ ಜರುಗುತ್ತಿವೆ. ಈ ಬದಲಾವಣೆಗಳ ಪರಿಣಾಮ ಪುರುಷರ ಮೇಲಾಗುವುದಕ್ಕಿಂತ ತೀವ್ರವಾಗಿ ಮತ್ತು ವಿಭಿನ್ನವಾಗಿ ಸ್ತ್ರೀಯರ ಮೇಲಾಗುತ್ತಿದೆ.
ಜಾಹಿರಾತು: ಒಂದಡೆ ಸರಕು ಸಂಸ್ಕೃತಿಯ ಸಾಧನವಾಗಿ ಹೆಣ್ಣನ್ನು ಜಾಹೀರಾತಿನಲ್ಲಿ ಬಗೆ ಬಗೆಯಾಗಿ ಬಳಸಿಕೊಳ್ಳುತ್ತಲೇ ಮತ್ತೊಂದೆಡೆ ಅಂಥ ಉಡುಗೆಗಳನ್ನು ತೊಟ್ಟು ಹಾಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ನಿರ್ಲಜ್ಜವೆಂದೂ, ಅದೇ ಅವಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. ಒಂದೆಡೆ ರಾತ್ರಿ ಪಾಳಿಯ ಕೆಲಸವನ್ನು ಪುರುಷ ಮತ್ತು ಸ್ತ್ರೀ ಎಂಬ ಬೇಧವಿಲ್ಲದೆ ಎಲ್ಲರಿಗೂ ಕಡ್ಡಾಯ ಮಾಡಿರುವ ಆಧುನಿಕ ಉದ್ಯೋಗ ವ್ಯವಸ್ಥೆ, ಮತ್ತೊಂದೆಡೆ ಲೈಂಗಿಕ ಕಿರುಕುಳಕ್ಕೆ ಬಲಿಯಾದ ಹೆಣ್ಣನ್ನು ಅವಳದೇ ತಪ್ಪು ಎಂಬಂತೆ ದೂಷಿಸುತ್ತದೆ. ಇಂತಹ ಮಾತುಗಳನ್ನು ನ್ಯಾಯ ಸ್ಥಾನದಲ್ಲಿ ಕುಳಿತವರು ಹಾಗೂ ಮಾನವ ಹಕ್ಕುಗಳ ಆಯೋಗ ಆಡುತ್ತಿದೆ ಎಂದು ನೊಂದು ನುಡಿದರು.
ಇದು ಸ್ತ್ರೀಯ ಬದುಕಿನ ಕ್ರಮವನ್ನು ಮಾತ್ರವಲ್ಲದೆ ಅವಳ ವಸ್ತ್ರ ಸಂಹಿತೆಯನ್ನು, ಭಾಷಾ ಬಳಕೆಯನ್ನು ನಿರ್ಧರಿಸುವ, ನಿಯಂತ್ರಿಸುವ ಪುರುಷ ಕೇಂದ್ರಿತ ವ್ಯವಸ್ಥೆಯ ಪ್ರತಿಬಿಂಬಗಳಂತೆ ಗೋಚಿರಿಸುತ್ತದೆ. ಆಧುನಿಕ ಸರಕು ಸಂಸ್ಕೃತಿಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ತ್ರೀಯ ದೇಹವನ್ನು ‘ಕಮಾಡಿಟಿ’ ಎಂಬಂತೆ ಬಳಸಿಕೊಳ್ಳುತ್ತಿದೆ. ಇದರಷ್ಟೇ ಅಪಾಯಕರವಾದ ಮತ್ತೊಂದು ವಿಚಾರ ಕೋಮುವಾದ ಪ್ರಬಲಗೊಳ್ಳುತ್ತಿರುವುದು ಎಂದು ಹೇಳಿದರು.
ಪ್ರೇಮ ವಿವಾದ: ಈ ಕೋಮುವಾದವನ್ನು ಪ್ರೇರೇಪಿಸುತ್ತಿರುವ ವರ್ಗ ಯಾವುದೇ ಇರಲಿ ಎರಡೂ ವರ್ಗಗಳು ತಮ್ಮ ಸಾಧನವಾಗಿ ಬಳಸುತ್ತಿರುವುದು ಹೆಣ್ಣಿನ ಮೈ ಮನಸ್ಸುಗಳನ್ನೇ. ಪ್ರೇಮ ವಿವಾದಗಳು ಇಂದು ವ್ಯಕ್ತಿಗಳ ಮತ್ತು ಕುಟುಂಬಗಳ ನಡುವಿನ ವಿಚಾರವಾಗದೆ, ಜಾತಿಗಳ - ಧರ್ಮಗಳ ನಡುವಿನ ವಿಚಾರವಾಗಿವೆ. ಲವ್ ಜಿಹಾದ್, ಮರ್ಯಾದಾ ಹತ್ಯೆಯಂತಹ ಪ್ರಕರಣಗಳನ್ನು ಗಮನಿಸಿದರೆ ಈ ಅಂಶ ಗ್ರಹಿಕೆಗೆ ಬರುತ್ತದೆ. ಒಟ್ಟಿನಲ್ಲಿ ಈ ಸರಕು ಸಂಸ್ಕೃತಿ ಮತ್ತು ಕೋಮುವಾದ ಎರಡೂ ಸಮಾಜದಲ್ಲಿರಬೇಕಾದ ಲಿಂಗ ಸೂಕ್ಷ್ಮತೆಯನ್ನೇ ಬಲಿ ಹಾಕುತಿವೆ. ಬಲಿ ಬೇಡುತ್ತಿವೆ ಎಂದು
ಶೋಭಾರಾಣಿ ಆತಂಕ ವ್ಯಕ್ತಪಡಿಸಿದರು.
ಮುಸುಕು ಹಾಕುವ ಪರದಾ ಪದ್ಧತಿ:
‘ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಮಹಿಳೆಯರ ಪಾತ್ರ’ ಕುರಿತು ವಿಚಾರ ಮಂಡಿಸಿದ ಶಿಕ್ಷಕಿ ಸುಮಂಗಲ ಸಿದ್ದರಾಜು, ಆಧುನಿಕ ಕ್ಷೇತ್ರಗಳ ದುಡಿಮೆ, ಕೃಷಿ ಕೆಲಸ, ಮನೆ ಕೆಲಸ, ಮಕ್ಕಳು ಮನೆ ನಿರ್ವಹಣೆ, ಬೌದ್ಧಿಕ, ಸೃಜನ ಶೀಲ ಕಾರ್ಯ ಹಾಗೂ ನೀತಿ ಶಿಕ್ಷಣ ನೀಡಿ ಜನಾಂಗವನ್ನು ನಿರ್ಮಾಣ ಮಾಡುವಲ್ಲಿ ಮಹಿಳೆ ನೀಡಿರುವ ಕೊಡುಗೆಗಳನ್ನು ನೆನೆಪಿಸಿಕೊಂಡರೆ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಡ ಅನ್ನೋರು ಮನುವನ್ನು ಬಿಟ್ಟರೆ ಮತ್ಯಾರು ಸಿಗುವುದಿಲ್ಲ ಎಂದು ಟೀಕಿಸಿದರು.
ಸಂತಾನೋತ್ಪತ್ತಿ, ಶಿಶುಪಾಲನೆಯಲ್ಲಿ ಸಿಲುಕಿದವಳನ್ನು ದುರ್ಬಲತೆಯ ದೃಷ್ಟಿಯಿಂದ ಆಕೆಯ ಸಾಮಥ್ಯರ್ ಅಳೆಯುವುದು ಎಷ್ಟುಸರಿ. ಪುರುಷರಾಗಲಿ, ಸ್ತ್ರೀಯರಾಗಲಿ ದುಡಿಮೆಯಿಂದ ಆತ್ಮಗೌರವ, ಆತ್ಮವಿಶ್ವಾಸ ಸಿಗುವುದು ಇವೆರಡೂ ಇದ್ದಲ್ಲಿ ಅಭಿವ್ಯಕ್ತಿಗೇನೂ ಕೊರತೆಯಿರಲಾರದು. ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ. ಅದು ರಾಷ್ಟ್ರದ ಭದ್ರತೆಗೆ ಧಕ್ಕೆ ತರಬಾರದು, ಸಮುದಾಯದ ಹಿತಾಸಕ್ತಿಗೆ ಪೂರಕವಾಗಿರಬೇಕು ಎಂದರು.
ಲಿಂಗ ಸಮಾನತೆ:
ಲಿಂಗ ತಾರತಮ್ಯವನ್ನು ಸಾಧನವನ್ನಾಗಿ ಮಾಡಿಕೊಂಡು ರಾಜ್ಯವನ್ನು ಪುರುಷ ಪ್ರಧಾನ ಉಕ್ಕಿನ ಕೋಟೆಯಂತೆ ಆವರಿಸಿದೆ. ಇವೆಲ್ಲದರ ನಡುವೆ ಮಹಿಳೆ ತನ್ನನ್ನು ತಾನು ತೆರೆದುಕೊಳ್ಳಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಣಾಮವಾಗಿ ಸ್ತ್ರೀ ಶಕ್ತಿ ಮುಖ್ಯವಾಹಿನಿಗೆ ಬಂದಿತು. ಲಿಂಗ ಸಮಾನತೆ ಪಟ್ಟಿ ಯಲ್ಲಿ 87ನೇ ದೇಶ ಭಾರತ. ಅರ್ಥ, ಶಿಕ್ಷಣ, ಆರೋಗ್ಯ, ರಾಜಕೀಯ ಎಲ್ಲದರಲ್ಲಿಯು ಮಹಿಳೆಯ ಸಾಧನೆ ಲೆಕ್ಕ ಹಾಕಿ ಗುರುತಿಸುತ್ತಾರೆ. ಆದರೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಸುಕು ಹಾಕುವ ಪರದಾ ಪದ್ಧತಿಯಿಂದ ಹೊರ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷೆ ಅನುಸೂಯಮ್ಮ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಗಡಿ ತಾಲೂಕು ಅಧ್ಯಕ್ಷೆ ಕಲ್ಪನಾ ಶಿವಣ್ಣ ಆಶಯ ನುಡಿಗಳನ್ನಾಡಿದರು. ಸಮ್ಮೇಳನಾಧ್ಯಕ್ಷ ಪ್ರೊ.ಎಂ. ಶಿವನಂಜಯ್ಯ, ಪತ್ನಿ ಸರೋಜಮ್ಮ, ಮಹಿಳಾ ಹೋರಾಟಗಾರ್ತಿ ಜಯಮ್ಮ, ಬಿ.ಸಿ. ಪಾರ್ವತಮ್ಮ, ಸಮಾಜ ಸೇವಕಿ ವಿಮಲಾ ಯೋಗೇಸ್, ಉಷಾ ನಂಜೇಗೌಡ ಉಪಸ್ಥಿತರಿದ್ದರು.