ವಿಜಯಪುರ [ಜು.31]: ಯುವಕನನ್ನು ಪ್ರೀತಿಸಬೇಡ ಎಂದು ಬುದ್ಧಿ ವಾದ ಹೇಳಿದರೂ, ತನ್ನ ಮಾತು ಕೇಳದ ಮಗಳನ್ನೇ ತಂದೆಯೊಬ್ಬ ಮಾರಕಾಸ್ತ್ರಗಳಿಂದ ಹೊಡೆದು ಮರ್ಯಾದೆ ಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಥರ್ಗಾ ರಾಮತೀರ್ಥ ತಾಂಡಾದಲ್ಲಿ ಸೋಮವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ರಾಮತೀರ್ಥ ತಾಂಡಾದ ನಿವಾಸಿ ಶಂಕರ ಶಿವ ಲಾಲ ಚವ್ಹಾಣ(೪೫) ಮರ್ಯಾದೆ ಹತ್ಯೆಗೆ ಯತ್ನಿಸಿರುವ ಆರೋಪಿ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತನ 21 ವರ್ಷದ ಪುತ್ರಿಯು ಅರುಣ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು. 

ಈ ವಿಚಾರವಾಗಿ ಕೋಪಗೊಂಡು ಮಗಳ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾನೆ. ಯುವತಿಯನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯಕ್ಕೆ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.